ಅಕ್ರಮ ವಲಸಿಗರಿಗೆ ಇಲ್ಲಿ ಸೌಲಭ್ಯ ಕಲ್ಪಿಸುವುದು ದೇಶಕ್ಕೆ ಅಪಾಯ: ಸತೀಶ್ ಕುಂಪಲ ಒತ್ತಾಯ

ಅಕ್ರಮ ವಲಸಿಗರಿಗೆ ಇಲ್ಲಿ ಸೌಲಭ್ಯ ಕಲ್ಪಿಸುವುದು ದೇಶಕ್ಕೆ ಅಪಾಯ: ಸತೀಶ್ ಕುಂಪಲ ಒತ್ತಾಯ


ಮಂಗಳೂರು: ಸುರತ್ಕಲ್‌ನಲ್ಲಿ ಶುಕ್ರವಾರ 8 ಮಂದಿ ಬಾಂಗ್ಲಾದೇಶದ ಅಕ್ರಮ ವಲಸಿಗರನ್ನು ಪತ್ತೆಹಚ್ಚಲಾಗಿದೆ. ಅಕ್ರಮ ವಲಸಿಗರನ್ನು ದೇಶದಿಂದ ಗಡಿಪಾರು ಮಾಡಬೇಕೆ ವಿನಃ ಅವರಿಗೆ ಇಲ್ಲಿ ಸೌಲಭ್ಯ ಕಲ್ಪಿಸುವುದು ದೇಶಕ್ಕೆ ಅಪಾಯವಾಗಿದೆ. ದಕ್ಷಿಣ ಕನ್ನಡ ಜಿಲ್ಲೆಗೆ ಬೇರೆ ರಾಜ್ಯದಿಂದ ವಲಸೆ ಬಂದು ಇಲ್ಲಿ ವಿವಿಧ ಕೆಲಸ ನಿರ್ವಹಿಸುತ್ತಿರುವವರ ಬಗ್ಗೆ ಜಿಲ್ಲಾಡಳಿತ ಮಾಹಿತಿ ಪಡೆದು ನಿಗಾ ವಹಿಸಬೇಕು ಎಂದು ದ. ಕ. ಜಿಲ್ಲಾ ಬಿಜೆಪಿ ಅಧ್ಯಕ್ಷ ಸತೀಶ್ ಕುಂಪಲ ಒತ್ತಾಯಿಸಿದ್ದಾರೆ.

ಪಕ್ಷದ ಕಚೇರಿಯಲ್ಲಿ ಇಂದು ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ಅವರು, ದಕ್ಷಿಣ ಕನ್ನಡ ಜಿಲ್ಲೆಯ 1876 ಬೂತ್‌ಗಳ ಪೈಕಿ ಕೆಲವು ಅತ್ಯಂತ ಸೂಕ್ಷ್ಮ ಬೂತ್‌ಗಳಾಗಿವೆ. ಅಲ್ಲಿ ಬಿಜೆಪಿಗೆ ಬಿಎಲ್‌ಎ 2 ನೇಮಕ ಮಾಡದ ಸ್ಥಿತಿಯಿದೆ. ಅಂತಹಾ ಬೂತ್‌ಗಳಲ್ಲಿ ವಾಸ್ತವ್ಯ ಪ್ರಮಾಣಪತ್ರ ನೀಡಿ ಅಕ್ರಮ ವಲಸಿಗರನ್ನು ಮತದಾರರ ಪಟ್ಟಿಗೆ ಸೇರ್ಪಡೆಗೊಳಿಸುವ ಸಾಧ್ಯತೆ ಇದೆ. ಬಾಂಗ್ಲಾದೇಶದ ಅಕ್ರಮ ವಲಸಿಗರಿಗೆ ಶಾಶ್ವತ ವಾಸ್ತವ್ಯ ಪ್ರಮಾಣಪತ್ರ ನೀಡಿ ಮತದಾರರ ಪಟ್ಟಿಗೆ ಸೇರ್ಪಡೆಗೊಳಿಸುವ ಹುನ್ನಾರ ನಡೆಯುತ್ತಿದೆ. ಕಾಂಗ್ರೆಸ್ ಸರಕಾರದ ಅಧೀನದಲ್ಲಿರುವ ಅಽಕಾರಿಗಳು ಸರಕಾರ ಹೇಳಿದಂತೆ ಕೇಳುತ್ತಾರೆ. ಈ ಕುರಿತು ಚುನಾವಣಾ ಆಯೋಗ ಎಚ್ಚರ ವಹಿಸಬೇಕು. ಈ ಬಗ್ಗೆ ಈಗಾಗಲೇ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಪತ್ರ ಬರೆದಿದ್ದಾರೆ ಎಂದು ತಿಳಿಸಿದರು.

ರಾಜ್ಯ ಕಾಂಗ್ರೆಸ್ ಸರಕಾರ ಶಾಶ್ವತ ನಿವಾಸಿ ಪ್ರಮಾಣಪತ್ರ (ಪಿಆರ್‌ಸಿ) ನೀಡಲು ಮುಂದಾಗಿರುವುದು ಎಸ್‌ಐಆರ್ ವೇಳೆ ಅಕ್ರಮ ವಲಸಿಗರನ್ನು ಮತದಾರರ ಪಟ್ಟಿಗೆ ಸೇರಿಸುವ ಹುನ್ನಾರವಾಗಿದೆ. ಇದು ದೇಶದ ಆಂತರಿಕ ಭದ್ರತೆಗೆ ಸವಾಲಾಗಿದೆ. ರಾಜ್ಯ ಸರಕಾರದ ಈ ಕ್ರಮ ಸಂವಿಧಾನ ಹಾಗೂ ರಾಷ್ಟ್ರ ವಿರೋಽಯಾಗಿದೆ. ಪಿಆರ್‌ಸಿ ಕುರಿತು ಮೂರು ದಿನಗಳ ಹಿಂದೆ ಅಧಿಸೂಚನೆ ಹೊರಡಿಸಲಾಗಿದೆ. ಎಸ್‌ಐಆರ್‌ಗೂ ಪಿಆರ್‌ಸಿಗೂ ಸಂಬಂಧವಿಲ್ಲ ಎಂದು ರಾಜ್ಯ ಸರಕಾರ ಹೇಳುತ್ತಿದೆ. ಹಾಗಾದರೆ ತರಾತರಿಯಲ್ಲಿ ಪಿಆರ್‌ಸಿ ಪ್ರಕ್ರಿಯೆ ನಡೆಸುವ ಅಗತ್ಯವೇನಿತ್ತು? ಅಕ್ರಮ ವಲಸಿಗರ ರಕ್ಷಣೆ, ಗ್ಯಾರಂಟಿ ಯೋಜನೆಗಳನ್ನು ಅಕ್ರಮ ವಲಸಿಗರಿಗೂ ನೀಡುವ ಮೂಲಕ ಒಂದು ವರ್ಗವನ್ನು ಓಲೈಸುವ ಕೆಲಸ ಈ ಮೂಲಕ ಆಗುತ್ತಿದೆ. ಈ ವಿಚಾರದಲ್ಲಿ ಸಿದ್ದರಾಮಯ್ಯ ಅವರಿಗಿಂತಲೂ ಒಂದು ಹೆಜ್ಜೆ ಮುಂದೆ ಹೋಗಿ ಸಿಎಂ ಡಿ.ಕೆ. ಶಿವಕುಮಾರ್ ಅವರು ಆಲೋಚಿಸಿದ್ದಾರೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಅವರು ಆರೋಪಿಸಿದರು.

ರಾಹುಲ್ ಗಾಂಽ ಹಾಗೂ ಡಿ.ಕೆ. ಶಿವಕುಮಾರ್ ಅವರು ಸಂವಿಧಾನ ಪುಸ್ತಕ ಹಿಡಿದುಕೊಂಡು ತಿರುಗಾಡುತ್ತಾರೆ. ಆದರೆ, ಅದೇ ಸಂವಿಧಾನವನ್ನು ಧಿಕ್ಕರಿಸಿ ಅವರಿಗೆ ಬೇಕಾದಂತೆ ಕಾನೂನು ಜಾರಿಗೊಳಿಸುತ್ತಿದ್ದಾರೆ. ಡಿಕೆಶಿ ಅವರು ಅಹಂಕಾರದೊಂದಿಗೆ ತನ್ನ ಮತಬ್ಯಾಂಕ್ ಗಟ್ಟಿಗೊಳಿಸಲು ಈ ಪ್ರಯತ್ನ ನಡೆಸಿದ್ದಾರೆ. ಪಿಆರ್‌ಸಿ ನೀಡುವಿಕೆ ಸಂವಿಧಾನ ಹಾಗೂ ರಾಷ್ಟ್ರೀಯ ಭದ್ರತೆಗೆ ಅಪಾಯ ಉಂಟುಮಾಡಲಿದೆ ಎಂದು ಆರೋಪಿಸಿದರು.

ಶಾಸಕ ವೇದವ್ಯಾಸ ಕಾಮತ್ ಮಾತನಾಡಿ, ಬಾಂಗ್ಲಾ ವಲಸಿಗರಿಗೆ ರಾಜ್ಯ ಸರಕಾರ ಅಕ್ರಮವಾಗಿ ಶಾಶ್ವತ ನಿವಾಸಿ ಪ್ರಮಾಣಪತ್ರ ನೀಡಿದರೆ ಸರಕಾರದ ಯೋಜನೆಗಳು ಇಲ್ಲಿನ ಮೂಲ ಮುಸಲ್ಮಾನರಿಗೆ ಸಿಗಲು ತೊಂದರೆಯಾಗಬಹುದು. ಸಮುದಾಯದ ಅನುದಾನಗಳು ಹಂಚಿಹೋಗಬಹುದು. ಈ ವಿಚಾರವನ್ನು ಪ್ರತಿಯೊಬ್ಬರು ಸೂಕ್ಷ್ಮವಾಗಿ ಚಿಂತಿಸಬೇಕಾಗಿದೆ. ಅಕ್ರಮ ವಲಸಿಗರನ್ನು ಪತ್ತೆಹಚ್ಚಲು ಎನ್‌ಆರ್‌ಸಿ, ಸಿಎಎ ಜಾರಿಗೆ ಮುಂದಾದಾಗ ಕಾಂಗ್ರೆಸ್ ಏನು ಮಾಡಿತ್ತು ಎಂಬುದನ್ನು ಎಲ್ಲರೂ ನೋಡಿದ್ದಾರೆ. ಕಾಂಗ್ರೆಸ್‌ಗೆ ದೇಶ ಹಾಳಾದರೂ ಚಿಂತೆಯಿಲ್ಲ, ಕಾಂಗ್ರೆಸ್ ಮಾತ್ರ ಚುನಾವಣೆಯಲ್ಲಿ ಗೆಲ್ಲಬೇಕು. ಅಕ್ರಮ ವಲಸಿಗರನ್ನು ಪತ್ತೆಹಚ್ಚುವ ಕೆಲಸವನ್ನು ರಾಜ್ಯ ಸರಕಾರ ಪ್ರಾಮಾಣಿಕವಾಗಿ ಮಾಡಿ, ಪಿಆರ್‌ಸಿ ದುರ್ಬಳಕೆಯನ್ನು ತಡೆಯಬೇಕು ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ವಿಧಾನ ಪರಿಷತ್ ಸದಸ್ಯ ಕಿಶೋರ್‌ಕುಮಾರ್ ಪುತ್ತೂರು, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರೇಮಾನಂದ ಶೆಟ್ಟಿ, ಜಿಲ್ಲಾ ಉಪಾಧ್ಯಕ್ಷೆ ಪೂಜಾ ಪೈ, ಪ್ರಮುಖರಾದ ಜಯಶ್ರೀ ಕರ್ಕೇರ, ವಸಂತ ಪೂಜಾರಿ ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article