ಲ್ಯಾಟರೈಟ್ ಲೀಸ್‌ನಲ್ಲಿ ಬಾಕ್ಸೈಟ್ ಗಣಿಗಾರಿಕೆ
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಮುಡಿಪು ಮತ್ತು ಇತರ ಭಾಗಗಳಲ್ಲಿ ಲ್ಯಾಟರೈಟ್ ಗಣಿಗಾರಿಕೆಗಾಗಿ ನೀಡಿದ ಲೀಸ್‌ನ ಹೆಸರಿನಲ್ಲಿ ಬಾಕ್ಸೈಟ್ ಸಹಿತ ವ್ಯಾಪಕ ಗಣಿಗಾರಿಕೆ ನಡೆಯುತ್ತಿದೆ ಎಂದು ಅರಣ್ಯ, ಪರಿಸರ ಮತ್ತು ಹವಾಮಾನ ಬದಲಾವಣೆ ಸಂಘ ಆರೋಪಿಸಿದೆ.
ಲ್ಯಾಟರೈಟ್ ಗಣಿಗಾರಿಕೆ ಹೆಸರಿನಲ್ಲಿ ವ್ಯಾಪಕ ಗಣಿಗಾರಿಕೆ ನಡೆಸಿ ಪರಿಸರಕ್ಕೆ ಧಕ್ಕೆ ತರಲಾಗುತ್ತಿದೆ. ಇದರಿಂದಾಗಿ ಭಾರಿ ಆಪತ್ತು ಎದುರಿಸುವ ಭೀತಿ ಇದೆ. ಲೀಸ್‌ನ ಪ್ರದೇಶದಲ್ಲಿ ನಿಜವಾದ ಲ್ಯಾಟರೈಟ್ ಕಂಡುಬಂದಲ್ಲಿ ಅದನ್ನು ತೆಗೆದುಹಾಕುವುದಕ್ಕೆ ಯಾವುದೇ ವಿರೋಧವಿಲ್ಲ. ಆದರೆ ತೆಗೆದು ಹಾಕುತ್ತಿರುವ ಖನಿಜವು ಶೇ.30ಕ್ಕಿಂತ ಹೆಚ್ಚು ಅಲ್ಯೂಮಿನಾ ಹೊಂದಿರುವ ಅಲ್ಯೂಮಿನಸ್ ಲ್ಯಾಟರೈಟ್ ಅಥವಾ ಅದರ ರಾಸಾಯನಿಕ ಸಂಯೋಜನೆಯು ಬಾಕ್ಸೈಟ್ ಎಂದು ವರ್ಗೀಕರಿಸಿದರೆ, ಆ ಚಟುವಟಿಕೆ ಮುಖ್ಯ ಖನಿಜದ ಗಣಿಗಾರಿಕೆಗೆ ಸೇರಿದ್ದು, ಸಾಮಾನ್ಯ ಲ್ಯಾಟರೈಟ್ ಕಾರ್ಯಾಚರಣೆ ಅಲ್ಲ ಎಂದು ಸಂಘ ಕಾರ್ಯದರ್ಶಿ ಬೆನಡಿಕ್ಟ್ ಫೆರ್ನಾಂಡಿಸ್ ಶನಿವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಲ್ಯಾಟರೈಟ್ ಎಂದು ಹೇಳಿ ಬಾಕ್ಸೈಟ್ ತೆಗೆದುಹಾಕುವುದು ಕಾನೂನು ವಂಚನೆಗೆ ಸಮಾನವಾಗಿದೆ.ಇದು ಪ್ರಮುಖ ಖನಿಜಗಳ ನಿಯಂತ್ರಣ ವ್ಯವಸ್ಥೆಯನ್ನು ಹಾಳುಮಾಡುತ್ತದೆ ಮತ್ತು ತಕ್ಷಣದ ತನಿಖೆ ಮತ್ತು ಜಾರಿ ಕ್ರಮಕ್ಕೆ ಕಾರಣವಾಗುತ್ತದೆ. ಈಗ ಲಭ್ಯವಿರುವ ಮಾಹಿತಿ ಪ್ರಕಾರ, ಲ್ಯಾಟರೈಟ್ ಹೆಸರಿನಲ್ಲಿ ಗಣಿಗಾರಿಕೆ ಮಾಡಲಾಗುತ್ತಿರುವ ಖನಿಜವನ್ನು ಆಂಧ್ರಪ್ರದೇಶದಲ್ಲಿನ ಸಿಮೆಂಟ್ ಕಾರ್ಖಾನೆಗಳಿಗೆ ಮಾರಲಾಗುತ್ತಿದೆ. ಇಲ್ಲಿ ಮುಖ್ಯ ಸಿಮೆಂಟ್ ಕಾರ್ಖಾನೆಗಳು ಕೇವಲ ಅಲ್ಯೂಮಿನಸ್ ಲ್ಯಾಟರೈಟ್ ಅನ್ನು ಮಾತ್ರ ಖರೀದಿಸುತ್ತದೆ ಎಂದರು.
ಜಿಲ್ಲೆಯ ಎಲ್ಲ ಲ್ಯಾಟರೈಟ್ ಗಣಿಗಾರಿಕೆ ಲೀಸ್‌ಗಳನ್ನು ತಕ್ಷಣ ಪರಿಶೀಲಿಸಬೇಕು. ಪ್ರತಿ ಸಕ್ರಿಯ ಗಣಿಗಾರಿಕೆ ಲೀಸ್‌ಗಳಿಂದ ಮಾದರಿಗಳನ್ನು ಸಂಗ್ರಹಿಸಿ ಮಾನ್ಯತೆ ಪಡೆದ ಪ್ರಯೋಗಾಲಯದಲ್ಲಿ ಪರೀಕ್ಷಿಸಿ ಅಲ್ಯೂಮಿನಾ ಅಂಶ ಮತ್ತು ಸರಿಯಾದ ಖನಿಜ ವರ್ಗೀಕರಣವನ್ನು ನಿರ್ಧರಿಸಬೇಕು. ತೆಗೆದುಹಾಕುತ್ತಿರುವ ಖನಿಜವು ರಾಸಾಯನಿಕ ಸಂಯೋಜನೆಯ ಪ್ರಕಾರ ಅಲ್ಯೂಮಿನಸ್ ಲ್ಯಾಟರೈಟ್ ಅಥವಾ ಬಾಕ್ಸೈಟ್ ಆಗಿದೆಯೇ ಎಂದು ಪರಿಶೀಲಿಸಬೇಕು ಎಂದರು.
ಸಂಘದ ಪ್ರಕಾಶ್ ಶೆಟ್ಟಿ ಉಪಸ್ಥಿತರಿದ್ದರು.