ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಸಮಿತಿ (ಪರಿಶಿಷ್ಟ ಜಾತಿ ವಿಭಾಗ)ಯ ವತಿಯಿಂದ ಮಹಾನ್ ಸಮಾಜ ಸುಧಾರಕ, ಶಿಕ್ಷಣದ ಹರಿಕಾರ, ದಲಿತೋದ್ಧಾರದ ಮುಂಚೂಣಿ ನಾಯಕ ಹಾಗೂ ಸಾಮಾಜಿಕ ಸಮಾನತೆಯ ಮಹಾನ್ ಚಿಂತಕರಾದ ಕುದ್ಮುಲ್ ರಂಗರಾವ್ ಅವರ ಜಯಂತಿಯನ್ನು ಭಾನುವಾರ ಬೆಳಗ್ಗೆ ಮಲ್ಲಿಕಟ್ಟೆಯ ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಆಚರಿಸಲಾಯಿತು.
ಕೆಪಿಸಿಸಿ ಪರಿಶಿಷ್ಟ ಜಾತಿ ವಿಭಾಗ ರಾಜ್ಯಾಧ್ಯಕ್ಷ ಆರ್. ಧರ್ಮಸೇನ್ ಮಾತನಾಡಿ, ದ.ಕ. ಜಿಲೆಯಲ್ಲಿ ಯಾರೂ ಊಹಿಸದ ರೀತಿಯಲ್ಲಿ ತಳಸಮುದಾಯವನ್ನು ಅಪ್ಪಿಕೊಂಡು ಸಮಾಜದ ಸನ್ಮಾರ್ಗವನ್ನು ತೋರಿಸಿ, ಮಹಾತ್ಮ ಗಾಂಧೀಜಿಯೇ ಸ್ವತಃ ಗುರುಗಳು ಎಂದು ಘೋಷಿಸಿದ ಮಹಾತ್ಮರೇ ಕುದ್ಮುಲ್ ರಂಗರಾಯರು. ಕಾಂಗ್ರೆಸ್ ಪಕ್ಷ ಯಾವತ್ತೂ ಇವರ ತತ್ವ ಆದರ್ಶದಲ್ಲೇ ಅವರು ಹಾಕಿಕೊಟ್ಟ ದಾರಿಯಂತೆ ನಡೆಯಲಿದೆ. ಈ ನಿಟ್ಟಿನಲ್ಲಿ ಇಂದು ಕಾಂಗ್ರೆಸ್ ಪರಿಶಿಷ್ಟ ಘಟಕ 500 ವಿದ್ಯಾರ್ಥಿಗಳಿಗೆ ಬ್ಯಾಗ್ ಹಾಗೂ ಅತೀ ಹೆಚ್ಚು ಅಂಕ ಗಳಿಸಿದ 30 ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ನೀಡುವ ಉತ್ತಮ ಕಾರ್ಯವನ್ನು ಮಾಡಿದೆ ಎಂದು ಹೇಳಿದರು.
ಈ ಕಾರ್ಯಕ್ರಮವು ಕೇವಲ ಜಯಂತಿ ಆಚರಣೆಯಾಗಿರದೆ, ಶಿಕ್ಷಣ, ಸಾಮಾಜಿಕ ನ್ಯಾಯ, ಸಮಾನ ಅವಕಾಶ ಮತ್ತು ಸಮಾಜದ ಸಬಲೀಕರಣದ ಸಂಕಲ್ಪವನ್ನು ಮತ್ತಷ್ಟು ಬಲಪಡಿಸುವ ಜನಪರ ಅಭಿಯಾನವಾಗಿದ್ದು, ಕುದ್ಮುಲ್ ರಂಗರಾವ್ ಅವರ ಚಿಂತನೆಗಳನ್ನು ಮುಂದಿನ ಪೀಳಿಗೆಗೆ ತಲುಪಿಸುವ ಮಹತ್ವದ ವೇದಿಕೆಯಾಗಲಿ ಎಂದು ಕೆಪಿಸಿಸಿ ಕಾರ್ಯಧ್ಯಕ್ಷ ಹಾಗೂ ವಿಧಾನ ಪರಿಷತ್ ಶಾಸಕ ಮಂಜುನಾಥ್ ಬಂಡಾರಿ ಹೇಳಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ. ಹರೀಶ್ ಕುಮಾರ್, ಮಾಜಿ ಸಚಿವ ಬಿ. ರಮಾನಾಥ್ ರೈ ಮಾತನಾಡಿದರು.
ವಿವಿಧ ನಿಗಮ-ಮಂಡಳಿಗಳ ಅಧ್ಯಕ್ಷರು ಹಾಗೂ ಸದಸ್ಯರು, ಸ್ಥಳೀಯ ಜನಪ್ರತಿನಿಧಿಗಳು, ಪಕ್ಷದ ಪದಾಧಿಕಾರಿಗಳು ಭಾಗವಹಿಸಿದರು.
ಈ ಸಂದರ್ಭದಲ್ಲಿ ಪರಿಶಿಷ್ಟ ಜಾತಿಯ ಕಾಲೇಜು ವಿದ್ಯಾರ್ಥಿಗಳ ಉನ್ನತ ಶಿಕ್ಷಣಕ್ಕೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಉಚಿತ ಕಾಲೇಜು ಬ್ಯಾಗ್‌ಗಳನ್ನು ವಿತರಿಸಲಾಯಿತು. ಮತ್ತು ಕಾಂಗ್ರೆಸ್ ಪಕ್ಷ ಹಾಗೂ ಸರ್ಕಾರದಲ್ಲಿ ಮಹತ್ವದ ಜವಾಬ್ದಾರಿಗಳನ್ನು ನಿರ್ವಹಿಸುತ್ತಿರುವ ರಾಷ್ಟ್ರೀಯ ಮತ್ತು ರಾಜ್ಯ ಮಟ್ಟದ ಗಣ್ಯ ನಾಯಕರಿಗೆ ಅಭಿನಂದಿಸಲಾಯಿತು.
ವಿಧಾನ ಪರಿಷತ್ ಸದಸ್ಯ ಐವನ್ ಡಿ’ಸೋಜಾ, ಜಿ. ಕೃಷ್ಣಪ್ಪ, ಎನ್. ಬಸವರಾಜ್, ಡಾ. ನಾಯಕ್ ರೂಪ್ ಸಿಂಗ್, ಕಾಣಿರಂ ರಾಠೋಡ್, ರಂಗನಾಥ್ ಪ್ರಸಾದ್, ಸಂತೋಷ್, ಸಾರಿಕಾ ಪೂಜಾರಿ, ಮಾಜಿ ಕಾರ್ಪರೇಟರ್ ನಾಗವೇಣಿ, ವಿಜಯಲಕ್ಷ್ಮಿ, ಸುಭಾಸ್ ಕೊಲ್ನಾಡ್, ಸೋಹನ್ ಆಳ್ವಾ ಉಪಸ್ಥಿತರಿದ್ದರು.
ಈ ಐತಿಹಾಸಿಕ ಕಾರ್ಯಕ್ರಮದಲ್ಲಿ ಜಿಲ್ಲೆಯ ಎಲ್ಲಾ ಕಾಂಗ್ರೆಸ್ ಪದಾಧಿಕಾರಿಗಳು, ಬ್ಲಾಕ್ ಅಧ್ಯಕ್ಷರು, ಮುಂಚೂಣಿ ಘಟಕಗಳ ಪದಾಧಿಕಾರಿಗಳು, ನಿಗಮ-ಮಂಡಳಿಗಳ ನಾಮನಿರ್ದೇಶಿತ ಸದಸ್ಯರು, ಗ್ರಾಮ ಪಂಚಾಯಿತಿ ಸದಸ್ಯರು, ಚುನಾವಣಾ ಅಭ್ಯರ್ಥಿಗಳು, ಪಕ್ಷದ ಕಾರ್ಯಕರ್ತರು, ವಿದ್ಯಾರ್ಥಿಗಳು ಭಾಗವಹಿಸಿದರು.
ದ.ಕ. ಜಿಲ್ಲಾ ಕಾಂಗ್ರೆಸ್ ಪರಿಶಿಷ್ಟ ಜಾತಿ ಘಟಕದ ಅಧ್ಯಕ್ಷ ದಿನೇಶ್ ಮುಳೂರು ಅವರು ಪ್ರಸ್ತವಿಕವಾಗಿ ಮಾತನಾಡಿದರು. ಪ್ರೇಮ್ ಬಲ್ಲಾಳ್ ಭಾಗ್ ಸ್ವಾಗತಿಸಿದರು. ರೋಹಿತ್ ಉಳ್ಳಾಲ್ ಕಾರ್ಯಕ್ರಮ ನಿರೂಪಿಸಿ, ಗೌತಮ್ ವಂದಿಸಿದರು.