ಪ್ರಾಕೃತಿಕ ವಿಕೋಪ-ಅನುದಾನದ ಕೊರತೆ ಇಲ್ಲ: ಸಚಿವ ಯು.ಟಿ.ಖಾದರ್
ದ.ಕ. ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ರವಿವಾರ ನಡೆದ ವಿಪತ್ತು ನಿರ್ವಹಣೆ ಮತ್ತು ಕುಡಿಯುವ ನೀರಿನ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಪ್ರಾಕೃತಿಕ ವಿಕೋಪದಿಂದ ತೊಂದರೆಗೊಳಗಾದ ಪ್ರದೇಶಗಳಿಗೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ತಕ್ಷಣ ಧಾವಿಸಿ ಅಗತ್ಯದ ಕ್ರಮಕೈಗೊಳ್ಳಬೇಕು. ಸ್ಥಳಕ್ಕೆ ತೆರಳದೆ ಕೇವಲ ಯಾರಿಂದಲೂ ಫೋಟೊ ತೆಗೆಸಿಕೊಂಡು ಬಳಿಕ ಅನುದಾನ ನೀಡುವ ನಿಟ್ಟಿನಲ್ಲಿ ಪ್ರಕ್ರಿಯೆ ನಡೆಸುವುದು ಸರಿಯಲ್ಲ ಎಂದು ಹೇಳಿದರು.
ಪ್ರಾಕೃತಿಕ ವಿಕೋಪ ನಮ್ಮ ಕೈಯಲ್ಲಿಲ್ಲ. ಆದರೆ ಇದರಿಂದಾಗಿ ತೊಂದರೆಗೊಳಗಾದವರಿಗೆ ಜನಪ್ರತಿನಿಧಿಗಳು, ಅಧಿಕಾರಿಗಳು, ಸಾರ್ವಜನಿಕರು ಸಂತ್ರಸ್ತರ ಕಷ್ಟಗಳಿಗೆ ಸ್ಪಂದಿಸಲು ಶ್ರಮಿಸಬೇಕು ಎಂದು ಹೇಳಿದರು.
ರಾಜ್ಯಮಟ್ಟದಲ್ಲಿ ಮಾಡಿದ ನಿಯಮಗಳು ಕೆಲವೊಂದು ಜಿಲ್ಲೆಗೆ ಹೊಂದಿಕೆಯಾಗುವುದಿಲ್ಲ. ಹೀಗಾಗಿ ನಿಯಮ ವ್ಯಾಪ್ತಿ ಯಲ್ಲಿ ಸಮಸ್ಯೆಗೆ ಪರಿಹಾರ ಕಂಡುಹಿಡಿಯಲು ಶ್ರಮಿಸಬೇಕಾಗಿದೆ ಎಂದರು.
ಅಧಿಕಾರಿಗಳು ಯಾವುದೇ ಸಮಸ್ಯೆಯನ್ನು ಫುಟ್ಬಾಲ್ನಲ್ಲಿ ಚೆಂಡನ್ನು ಪಾಸ್ ಮಾಡಿ ದಾಗೆ ಮಾಡಬಾರದು. ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು. ನಿಂತು ಗೋಲು ಹೊಡೆಯಬೇಕು ಎಂದು ಸಲಹೆ ನೀಡಿದರು.
ಮಳೆ ಮಾರ್ಚ್ 1ರಿಂದ ಮೇ 31ರ ತನಕ ಪೂರ್ವ ಮುಂಗಾರು ವಾಡಿಕೆಗಿಂತ ಶೇ 32ರಷ್ಟು ಕಡಿಮೆಯಾಗಿದೆ. ಕಳೆದ ಏಳು ದಿನಗಳಿಂದ ಚೆನ್ನಾಗಿ ಮಳೆಯಾಗಿದ್ದರೂ ವಾಡಿಕೆಗಿಂತ ಕಡಿಮೆ ಇದೆ. ಜನವರಿ 1ರಿಂದ ಜುಲೈ 4ರ ತನಕ 785.7 ಮಿ.ಮೀ ಮಳೆಯಾಗಿದೆ. ವಾಡಿಕೆ ಮಳೆ 1,338/07 ಮಿ.ಮಿ ಎಂದು ಅಧಿಕಾರಿಗಳು ಮಾಹಿತಿ ನೀಡಿದರು
ಜೂನ್‌ನಲ್ಲಿ ಮಳೆಯಾಗದ ಕಾರಣ ಭತ್ತದ ನಾಟಿಗೆ ಸಮಸ್ಯೆಯಾಗಿದೆ. ತಗ್ಗುಪ್ರದೇಶದಲ್ಲಿ ಕೃಷಿಗೆ ಅನುಕೂಲ ವಾಗಿದ್ದರೂ, ಎತ್ತರ ಪ್ರದೇಶದಲ್ಲಿ ಕೃಷಿಗೆ ನೀರಾವರಿಯ ಅಗತ್ಯತೆ ಇದೆ. ಬೀಜ ಬೇಕಾದಷ್ಟು ಇದೆ. ಗೊಬ್ಬರದ ಕೊರತೆಇಲ್ಲ ಎಂದು ಕೃಷಿ ಅಧಿಕಾರಿ ಹೇಳಿದರು.
ಮಳೆಯಿಂದ ಅಥವಾ ಹವಾಮಾನದ ವೈಫರಿತ್ಯದಿಂದಾಗಿ ಭತ್ತದ ಕೃಷಿಗೆ ಹಾನಿಯಾದರೆ ಅಧಿಕಾರಿಗಳು ತಕ್ಷಣ ಹಾನಿಗೊಳಗಾದ ಪ್ರದೇಶಕ್ಕೆ ತೆರಳಿ ಸಮೀಕ್ಷೆ ನಡೆಸಿ ವರದಿ ಮಾಡಬೇಕು ಎಂದು ಸೂಚಿಸಿದರು.
ಮಳೆಮಾಪನ ಕೇಂದ್ರಗಳು ಸರಿಯಾಗಿಲ್ಲ:
ಜಿಲ್ಲೆಯಲ್ಲಿ ಕೆಲವು ಕಡೆ ಮಳೆ ಮಾಪನ ಕೇಂದ್ರಗಳು ಕೆಲವು ಕಡೆ ಸರಿಯಾಗಿಲ್ಲ ಎಂಬ ದೂರು ಇದೆ ಎಂದು ಸಚಿವ ಖಾದರ್ ಗಮನ ಸೆಳೆದಾಗ ಜಿಲ್ಲೆಯಲ್ಲಿ 274 ಮಳೆಮಾಪನ ಕೇಂದ್ರಗಳಿದ್ದು, ಅವುಗಳಲ್ಲಿ 108 ಸರಿಯಾಗಿದೆ ಎಂದು ಎಡಿಸಿ ರಾಜು ಕೆ ತಿಳಿಸಿದರು.
ಮಳೆಮಾಪನ ಸರಿಯಾಗಿಲ್ಲದಿದ್ದರೆ ಕೃಷಿಗೆ ಸಮಸ್ಯೆಯಾಗುತ್ತದೆ ಎಂದು ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಮತ್ತು ‘ ಮಳೆಮಾಪನ ಸರಿಯಾಗಿಲ್ಲದ ಕಾರಣದಿಂದಾಗಿ ನಮ್ಮ ಜಿಲ್ಲೆಯಲ್ಲಿ ರೈತರಿಗೆ ತೊಂದರೆಯಾಗಿದೆ. ಅವರಿಗೆ ಸರಕಾರ ದಿಂದ ಸಿಗಬೇಕಾದ ಬೆಳೆ ವಿಮೆಯಲ್ಲಿ ತಾರತಮ್ಯ ಆಗಿದೆ ’ಎಂದು ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಸಭೆಯ ಗಮನ ಸೆಳೆದರು.
88 ಸಂಭವನೀಯ ಭೂ ಕುಸಿತ ಪ್ರದೇಶ:
ದ.ಕ.ಜಿಲ್ಲೆಯಲ್ಲಿ 88 ಸಂಭನೀಯ ಭೂಕುಸಿತ ಪ್ರದೇಶ ಮತ್ತು 92 ಪ್ರವಾಹ ಪೀಡಿತ ಪ್ರದೇಶವೆಂದು ಗುರುತಿಸಲಾಗಿದೆ ಎಂದು ಜಿಲ್ಲಾಧಿಕಾರಿ ದರ್ಶನ್ ಎಚ್ವಿ ತಿಳಿಸಿದರು.
ನಾಗುರಿನಲ್ಲಿ ಜು.1 ರಂದು ನಡೆದ ತಡೆಗೋಡೆ ಕುಸಿತ ಪ್ರಕರಣದ ಬಗ್ಗೆ ಎಫ್‌ಐಆರ್ ಆಗಿದೆ. ತಾಂತ್ರಿಕ ವರದಿ ಸರಕಾರಕ್ಕೆ ಸಲ್ಲಿಕೆಯಾಗಿದೆ. ಜಾಗದ ಮಾಲಕನ ವಿರುದ್ಧ ಪ್ರಕರಣ ದಾಖಲಾಗಿದೆ ಎಂದು ಅವರು ಹೇಳಿದರು.
ಜಿಲ್ಲಾ ಪಂಚಾಯತ್ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಂಎ ಗಫೂರ್, ಸಿಇಒ ನರ್ವಾಡೆ ವಿನಾಯಕ ಕಾರ್ಬಾರಿ, ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ಸಿಎಚ್, ಜಿಲ್ಲಾ ಎಸ್ಪಿ ಡಾ. ಅರುಣ್, ಡಿಸಿಎಫ್ ರವಿಶಂಕರ್, ಮೂಡಾ ಅಧ್ಯಕ್ಷ ಸದಾಶಿವ ಉಳ್ಳಾಲ ಉಪಸ್ಥಿತರಿದ್ದರು.