ಮುಚ್ಚಿರುವ ಭಾರತೀಯ ಭಾಷೆಗಳ ಸ್ನಾತಕೋತ್ತರ ವಿಭಾಗ ತೆರೆಯಲು ಆಗ್ರಹ

ಮುಚ್ಚಿರುವ ಭಾರತೀಯ ಭಾಷೆಗಳ ಸ್ನಾತಕೋತ್ತರ ವಿಭಾಗ ತೆರೆಯಲು ಆಗ್ರಹ


ಮಂಗಳೂರು: ಹಂಪನಕಟ್ಟೆಯ ಮಂಗಳೂರು ವಿಶ್ವವಿದ್ಯಾಲಯ ಕಾಲೇಜಿನಲ್ಲಿ ಕಾರ್ಯನಿರ್ವಹಿಸುತ್ತಿದ್ದ ತುಳು, ಕೊಂಕಣಿ ಹಾಗೂ ಹಿಂದಿ ಸ್ನಾತಕೋತ್ತರ ವಿಭಾಗಗಳನ್ನು ಮುಚ್ಚಲು ಮಂಗಳೂರು ವಿವಿ ನಿರ್ಧರಿಸಿರುವುದು ಖಂಡನೀಯ. ಮುಚ್ಚಲ್ಪಟ್ಟಿರುವ ಈ ಎಲ್ಲ ಭಾರತೀಯ ಭಾಷೆಗಳ ಸ್ನಾತಕೋತ್ತರ ವಿಭಾಗಗಳನ್ನು ತಕ್ಷಣ ಪುನರಾರಂಭಿಸಬೇಕು ಎಂದು ಅಖಿಲ ಭಾರತೀಯ ಸಾಹಿತ್ಯ ಪರಿಷದ್ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ಆಗ್ರಹಿಸಿದೆ.

ಮಂಗಳೂರು ವಿವಿಯಲ್ಲಿ ಭಾರತೀಯ ಭಾಷೆಗಳು ದಿನದಿಂದ ದಿನಕ್ಕೆ ನಿರ್ಲಕ್ಷ್ಯಕ್ಕೆ ಒಳಗಾಗುತ್ತಿರುವುದು ಅತ್ಯಂತ ಆತಂಕಕಾರಿ ಬೆಳವಣಿಗೆಯಾಗಿದೆ. ತುಳು, ಕೊಂಕಣಿ, ಹಿಂದಿ ಸ್ನಾತಕೋತ್ತರ ವಿಭಾಗಗಳನ್ನು ಹಂಪನಕಟ್ಟೆಯಿಂದ ಕೊಣಾಜೆಯ ವಿವಿ ಕ್ಯಾಂಪಸ್ಗೆ ಸ್ಥಳಾಂತರಿಸಿ, ವಿದ್ಯಾರ್ಥಿಗಳು ಬಾರದಂತೆ ಮಾಡಿ 3 ಭಾಷೆಗಳ ವಿಭಾಗಗಳನ್ನು ವ್ಯವಸ್ಥಿತವಾಗಿ ನಿಲ್ಲಿಸಲಾಗಿದೆ ಎಂದು ಅಭಾಸಾಪ ದ.ಕ. ಜಿಲ್ಲಾ ಸಮಿತಿ ಕಾರ್ಯದರ್ಶಿ ಲತೇಶ್ ಬಾಕ್ರಬೈಲು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.

ವಿಶ್ವವಿದ್ಯಾಲಯ ಕಾಲೇಜಿನಲ್ಲಿ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಮೂರು ವಿಭಾಗಗಳ ವಿದ್ಯಾರ್ಥಿ ಪ್ರವೇಶ ಸಂಖ್ಯೆಯನ್ನು ಉದ್ದೇಶಪೂರ್ವಕವಾಗಿ ಕಡಿಮೆ ಮಾಡಿರುವುದು, ಶುಲ್ಕ ಹೆಚ್ಚಿಸಿರುವುದು, ವಿದ್ಯಾರ್ಥಿಗಳ ಕೊರತೆಯನ್ನು ನೆಪವಾಗಿರಿಸಿ ವಿಭಾಗಗಳನ್ನು ಮುಚ್ಚಲಾಗಿದೆ. ಈ ಮೂರು ವಿಭಾಗಗಳನ್ನು 20 ಕಿ.ಮಿ. ದೂರದಲ್ಲಿರುವ ವಿವಿ ಕ್ಯಾಂಪಸ್ಗೆ ಸ್ಥಳಾಂತರಿಸಿರುವುದು ವಿದ್ಯಾರ್ಥಿಗಳಿಗೆ ತೀವ್ರ ಅನಾನುಕೂಲವನ್ನು ಉಂಟುಮಾಡಿದೆ ಎಂದರು.

ವಿಶ್ವವಿದ್ಯಾಲಯ ಕಾಲೇಜಿನಲ್ಲಿ ಒಡಿಯೂರು ಗುರುದೇವದತ್ತ ಸಂಸ್ಥಾನದಿಂದ ಗುರುದೇವಾನಂದ ಸ್ವಾಮೀಜಿ ಅವರು ಲಕ್ಷಾಂತರ ರುಪಾಯಿ ಖರ್ಚುಮಾಡಿ ತುಳು ಅಧ್ಯಯನ ಕೇಂದ್ರ ತೆರೆದಿದ್ದರು. ಅದನ್ನು ಕೂಡಾ ಮುಚ್ಚಿ ಅವರಿಗೂ, ಅವರ ತುಳು ಸೇವೆಗೂ ಅವಮಾನ ಮಾಡಲಾಗಿದೆ. ಹಿಂದಿ ವಿಭಾಗದಲ್ಲಿ ನೂರಾರು ವಿದ್ಯಾರ್ಥಿಗಳು ಸ್ನಾತಕೋತ್ತರ ಪದವಿ ಹಾಗೂ ಹಲವರು ಪಿಎಚ್.ಡಿ. ಪದವಿಯನ್ನು ಪಡೆದಿದ್ದು, ಅವರಲ್ಲಿ ಬಹುತೇಕರು ಶಾಲಾ-ಕಾಲೇಜುಗಳಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇಂತಹ ಯಶಸ್ವಿ ವಿಭಾಗವನ್ನು ಮುಚ್ಚಿರುವುದು ಭಾರತೀಯ ಭಾಷೆಗಳ ಅಭಿವೃದ್ಧಿಗೆ ದೊಡ್ಡ ಹೊಡೆತವಾಗಿದೆ ಎಂದು ಅವರು ಹೇಳಿದರು.

ಮಂಗಳೂರು ವಿಶ್ವವಿದ್ಯಾಲಯದಲ್ಲೇ ತುಳು ಭಾಷೆ ಕಲಿಯುವ ಅವಕಾಶ ಇಲ್ಲ ಎಂದಾದ ಮೇಲೆ ಬೇರೆಲ್ಲಿ ದೊರಕಲು ಸಾಧ್ಯ. ತುಳು, ಕನ್ನಡ, ಕೊಂಕಣಿ ಸೇರಿದಂತೆ ವಿವಿಧ ಭಾಷೆಗಳ ಅಧ್ಯಯನ, ಸಂಶೋಧನೆ ಮತ್ತು ಅಭಿವೃದ್ಧಿಗೆ ಮಂಗಳೂರು ವಿಶ್ವವಿದ್ಯಾಲಯವು ವಿಶೇಷ ಉತ್ತೇಜನ ನೀಡಬೇಕಾದ ಹೊಣೆಗಾರಿಕೆಯನ್ನು ಹೊಂದಿದೆ. ವಿವಿಗೆ ವಿದ್ಯಾರ್ಥಿಗಳು ಬಾರದಂತೆ ಏನು ಮಾಡಬೇಕೋ ಅದನ್ನು ವಿವಿ ಮಾಡುತ್ತಿದೆ. ವಿವಿಯ ಕೋರ್ಸ್ಗಳಿಗೆ ವಿದ್ಯಾರ್ಥಿಗಳು ಬರುವಂತೆ ವಿವಿ ಕ್ರಮ ಕೈಗೊಳ್ಳಬೇಕು. ಮೂರು ಭಾಷಾ ವಿಷಯಗಳ ಸ್ನಾತಕೋತ್ತರ ವಿಭಾಗ ಮುಚ್ಚಿರುವ ಬಗ್ಗೆ ರಾಜ್ಯಪಾಲರ ಗಮನಕ್ಕೆ ತರಲಾಗುವುದು. ವಿವಿ ಕಾಲೇಜಿನಲ್ಲೇ ತುಳು, ಕೊಂಕಣಿ, ಹಿಂದಿ ಸ್ನಾತಕೋತ್ತರ ವಿಭಾಗ ಪುನರಾರಂಭಿಸದಿದ್ದರೆ ಅಭಾಸಾಪ ಹೋರಾಟ ನಡೆಸಲಿದೆ ಎಂದು ಅವರು ಎಚ್ಚರಿಸಿದರು.

ಕರಾವಳಿ ಹಾಗೂ ಮಲೆನಾಡು ಭಾಗದ ಉನ್ನತ ಶಿಕ್ಷಣದ ಪ್ರಮುಖ ಕೇಂದ್ರವಾಗಿರುವ ಮಂಗಳೂರು ವಿವಿ ಶಿಕ್ಷಣ, ಸಂಶೋಧನೆ, ಮತ್ತು ಭಾಷೆ, ಸಂಸ್ಕೃತಿಯ ಸಂರಕ್ಷಣೆ, ಬೆಳವಣಿಗೆಯಲ್ಲಿ ಮಹತ್ವದ ಪಾತ್ರವನ್ನು ವಹಿಸಿದೆ. ಆದರೆ ಇತ್ತೀಚಿನ ಆಡಳಿತಾತ್ಮಕ ನಿರ್ಧಾರಗಳಿಂದ ವಿಶ್ವವಿದ್ಯಾಲಯದ ಶೈಕ್ಷಣಿಕ ವಾತಾವರಣ ಕುಸಿಯುತ್ತಿದ್ದು, ಭಾರತೀಯ ಭಾಷೆಗಳ ಉನ್ನತ ಶಿಕ್ಷಣಕ್ಕೆ ಗಂಭೀರ ಹಿನ್ನಡೆಯಾಗುತ್ತಿದೆ ಎಂದು ಆಪಾದಿಸಿದರು.

ಅಭಾಸಾಪ ಜಿಲ್ಲಾ ಸಹ ಕಾರ್ಯದರ್ಶಿ ಗೀತಾ ಲಕ್ಷ್ಮೀಶ್, ಕಾರ್ಯಕಾರಿ ಸಮಿತಿ ಸದಸ್ಯ ಡಾ. ಸುರೇಶ್ ನೆಗಳಗುಳಿ, ಶಿವರಾಮ ಶೆಟ್ಟಿ ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article