ಪ್ರಜಾಪ್ರಭುತ್ವದ ಕಗ್ಗೊಲೆಯೋ, ಸರ್ವಾಧಿಕಾರಿ ಧೋರಣೆಯೋ: ಪದ್ಮರಾಜ್ ಆರ್. ಪೂಜಾರಿ

ಪ್ರಜಾಪ್ರಭುತ್ವದ ಕಗ್ಗೊಲೆಯೋ, ಸರ್ವಾಧಿಕಾರಿ ಧೋರಣೆಯೋ: ಪದ್ಮರಾಜ್ ಆರ್. ಪೂಜಾರಿ

ಮಂಗಳೂರು: ದೇಶದ ಭವಿಷ್ಯವನ್ನು ಉಜ್ವಲಗೊಳಿಸಬೇಕಿದ್ದ ಎಳೆಯ ಜೀವಗಳು ಇಂದು ವ್ಯವಸ್ಥೆಯ ದಯನೀಯ ವೈಫಲ್ಯ ಮತ್ತು ಕ್ರೂರ ಮುಖಕ್ಕೆ ಅಸುನೀಗುತ್ತಿರುವುದು ದೇಶದ ಆತ್ಮಕ್ಕೇ ಬಿದ್ದ ದೊಡ್ಡ ಪೆಟ್ಟು ಎಂದು ಕಾಂಗ್ರೆಸ್ ಮುಖಂಡ ಪದ್ಮರಾಜ್ ಆರ್. ಪೂಜಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

2014ರಿಂದ ಈಚೆಗೆ ಸುಮಾರು 150ಕ್ಕೂ ಹೆಚ್ಚು ಬಾರಿ ವಿವಿಧ ಪರೀಕ್ಷೆಗಳ ಪ್ರಶ್ನೆ ಪತ್ರಿಕೆಗಳು ಸೋರಿಕೆಯಾಗಿರುವುದು ಕೇವಲ ಆಡಳಿತಾತ್ಮಕ ಲೋಪವಲ್ಲ, ಕೋಟ್ಯಂತರ ಯುವಕರ ಭವಿಷ್ಯದೊಂದಿಗೆ ವ್ಯವಸ್ಥಿತವಾಗಿ ನಡೆಸುತ್ತಿರುವ ಅತ್ಯಂತ ಕ್ರೂರ ಹಾಗೂ ಅಕ್ಷಮ್ಯ ಚೆಲ್ಲಾಟ. ಇತ್ತೀಚೆಗೆ ನಡೆದ ನೀಟ್ ಪರೀಕ್ಷೆಯ ಹಗರಣ ಮತ್ತು ಪೇಪರ್ ಸೋರಿಕೆಯಿಂದ ಮನನೊಂದು 20ಕ್ಕೂ ಹೆಚ್ಚು ಪ್ರತಿಭಾವಂತ ವಿದ್ಯಾರ್ಥಿಗಳು ಆತ್ಮಹತ್ಯೆಯಂತಹ ಅತಿರೇಕದ ಕೃತ್ಯಕ್ಕೆ ಶರಣಾಗಿರುವುದು ಇಡೀ ದೇಶವೇ ತಲೆತಗ್ಗಿಸುವ ವಿಷಯ. ಮುಂದಿನ ದಿನಗಳಲ್ಲಿ ದೇಶದ ಆಸ್ತಿಯಾಗಬೇಕಿದ್ದ ಆ ಮುಗ್ಧ ಜೀವಗಳ ಅಮೂಲ್ಯ ಬೆಳಕಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ. 

ಬಡತನ, ಹಸಿವು ಮತ್ತು ಅಸಂಖ್ಯಾತ ಕಷ್ಟಗಳ ನಡುವೆಯೂ ಕಷ್ಟಪಟ್ಟು ಓದಿ ಅಸುನೀಗಿರುವ ಮೃತಪಟ್ಟ ಪ್ರತಿ ವಿದ್ಯಾರ್ಥಿಯ ಕುಟುಂಬಕ್ಕೂ ಕನಿಷ್ಠ ಒಂದು ಕೋಟಿ ರೂ. ಪರಿಹಾರವನ್ನು ಸರ್ಕಾರ ಕೂಡಲೇ ನೀಡಬೇಕು. ತಮ್ಮ ಅನ್ಯಾಯಕ್ಕೊಳಗಾದ ಹಕ್ಕುಗಳಿಗಾಗಿ ಸಂವಿಧಾನಬದ್ಧವಾಗಿ ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದ ವಿದ್ಯಾರ್ಥಿಗಳ ಮೇಲೆ ಪೊಲೀಸರು, ಸೈನಿಕರು ಹಾಗೂ ಸಮವಸ್ತ್ರ ಧರಿಸಿದ ಗೂಂಡಾಗಳನ್ನು ಬಳಸಿ ನಡೆಸಿರುವ ದೌರ್ಜನ್ಯ ಅಕ್ಷರಶಃ ಮೈಜುಮ್ಮೆನಿಸುವಂತಿದೆ. ಪ್ರತಿಭಟನೆಯಲ್ಲಿ ತೊಡಗಿ ಕ್ರೂರ ಹಿಂಸೆಗೆ ಒಳಗಾದ ಆ ಅಪ್ರಾಪ್ತ ವಯಸ್ಸಿನ ವಿದ್ಯಾರ್ಥಿಗಳ ಕಣ್ಣೀರಿನ ಕಥೆಗಳು ಯಾವುದೇ ಕಠಿಣ ಹೃದಯಿಯನ್ನೂ ಕಲುಕುವಂತಿವೆ. ಇಂತಹ ಭೀಕರ ಪರಿಸ್ಥಿತಿಯಲ್ಲೂ ದೇಶದ ಪ್ರಧಾನಿ, ರಕ್ಷಣಾ ಸಚಿವರು ಹಾಗೂ ಶಿಕ್ಷಣ ಸಚಿವರ ಕಣ್ಣು ತೆರೆಯದಿರುವುದು ಅತಿ ದೊಡ್ಡ ದುರಂತ ಹಾಗೂ ಅಮಾನವೀಯತೆ.

ಶಿಕ್ಷಣ ಇಲಾಖೆಯ ಭೀಕರ ಲೋಪಗಳು ಮತ್ತು ಪ್ರಶ್ನೆಪತ್ರಿಕೆ ಸೋರಿಕೆಯಿಂದ ಕಂಗೆಟ್ಟಿರುವ ಮಕ್ಕಳ ಜತೆ ನಿರಂತರವಾಗಿ ಸಂವಾದ ನಡೆಸಿ, ಅವರಲ್ಲಿ ಧೈರ್ಯ ತುಂಬುವ ಕಾಯಕದಲ್ಲಿ ತೊಡಗಿರುವ ವಿಪಕ್ಷ ನಾಯಕ ರಾಹುಲ್ ಗಾಂಧಿ ಹಾಗೂ ಪ್ರಮುಖ ನಾಯಕರಾದ ಪ್ರಿಯಾಂಕಾ ಗಾಂಧಿ ಅವರ ಮೇಲೆ ನಡೆಸಿರುವ ದಮನಕಾರಿ ಕ್ರಮ ಪ್ರಜಾಪ್ರಭುತ್ವದ ಮೇಲಿನ ನೇರ ಪ್ರಹಾರ. 

ದೆಹಲಿಯಲ್ಲಿ ಸೋಮವಾರ ಹಾಗೂ ಮಂಗಳವಾರ ಕೇಂದ್ರದ ಎನ್‌ಡಿಎ ಸರ್ಕಾರದ ಜನವಿರೋಧಿ ನೀತಿಗಳ ವಿರುದ್ಧ ಯುವಜನರು ಸಿಡಿದೆದ್ದಾಗ, ಹೇಡಿ ಕೇಂದ್ರ ಸರ್ಕಾರ ಅಶ್ರುವಾಯು ಶೆಲ್ ಸಿಡಿಸಿ, ಲಾಠಿ ಚಾರ್ಜ್ ನಡೆಸಿ ತನ್ನ ನಿರಂಕುಶ ಪೌರುಷ ಮೆರೆದಿದೆ. ಶಾಂತಿಯುತವಾಗಿ ಪ್ರತಿಭಟಿಸುತ್ತಿದ್ದ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಅವರನ್ನು ಬಲವಂತವಾಗಿ ಬಂಧಿಸಿರುವುದು, ಸತ್ಯವನ್ನು ಸಂಪೂರ್ಣವಾಗಿ ಹತ್ತಿಕ್ಕಲು ಹಾಗೂ ಪ್ರಶ್ನಿಸುವವರ ಗಟ್ಟಿಯಾದ ಧ್ವನಿಯನ್ನು ಅಡಗಿಸಲು ದೆಹಲಿ ಪೊಲೀಸರನ್ನು ದುರ್ಬಳಕೆ ಮಾಡಿಕೊಂಡಿರುವ ನಾಚಿಕೆಗೇಡಿನ ಕೃತ್ಯ. 

ಇದು ಭಾರತೀಯ ಪ್ರಜಾಪ್ರಭುತ್ವದ ಮೇಲಿನ ನೇರವಾದ ಮತ್ತು ಮಾರಕ ದಾಳಿ. ಪರೀಕ್ಷಾ ವ್ಯವಸ್ಥೆಯನ್ನು ಸರಿಪಡಿಸಲು ಸಂಪೂರ್ಣವಾಗಿ ವಿಫಲವಾಗಿರುವ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ತಕ್ಷಣವೇ ತಮ್ಮ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು. ಇಲ್ಲವಾದರೆ, ರಾಷ್ಟ್ರಪತಿಗಳು ಅವರನ್ನು ಕೂಡಲೇ ಸಚಿವ ಸಂಪುಟದಿಂದ ವಜಾಗೊಳಿಸಬೇಕು. 

ಬಿಜೆಪಿ ಸರ್ಕಾರದ ‘ಪಾಪದ ಕೊಡ’ ಸಂಪೂರ್ಣವಾಗಿ ತುಂಬುತ್ತಿದ್ದು, ಇನ್ನು ಮುಂದೆ ದೇಶದ ಯುವಜನತೆ ಮತ್ತು ಜನಸಾಮಾನ್ಯರು ಸುಮ್ಮನಿರುವುದಿಲ್ಲ. ಹಿಟ್ಲರ್ ಶಾಹಿ ಮನಸ್ಥಿತಿಯ ಈ ಅಹಂಕಾರಿ ಸರ್ಕಾರಕ್ಕೆ ದೇಶದ ಯುವಜನರು ತಕ್ಕ ಪಾಠ ಕಲಿಸುವುದು ಖಚಿತ. ಕೇಂದ್ರ ಸರ್ಕಾರ ತನ್ನ ಹಠಮಾರಿ ಹಾಗೂ ಸರ್ವಾಧಿಕಾರಿ ಧೋರಣೆಯನ್ನು ಕೂಡಲೇ ಕೈಬಿಡಬೇಕು. ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಯನ್ನು ಪಡೆಯಲೇಬೇಕು. ‘ದೇಶದ ಸಂವಿಧಾನ, ಪ್ರಜಾಪ್ರಭುತ್ವ ಹಾಗೂ ಯುವಜನರ ಭವಿಷ್ಯವನ್ನು ಉಳಿಸಲು ನಾವು ಎಂದೆಂದಿಗೂ ರಾಹುಲ್ ಗಾಂಧಿಯವರೊಂದಿಗೆ ದೃಢವಾಗಿ, ಅಚಲವಾಗಿ ನಿಲ್ಲುತ್ತೇವೆ ಎಂದು ಪದ್ಮರಾಜ್ ಆರ್. ಪೂಜಾರಿ ಪ್ರಟಕಣೆಯಲ್ಲಿ ತಿಳಿಸಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article