ಭವಿಷ್ಯನಿಧಿ ಪಿಂಚಣಿದಾರರಿಗೆ ಕನಿಷ್ಟ ಪಿಂಚಣಿ 9000 ರೂ. ನಿಗದಿ ಪಡಿಸಬೇಕು: ಸುಕುಮಾರ್
Tuesday, July 7, 2026
ಮೂಡುಬಿದಿರೆ: ಭವಿಷ್ಯನಿಧಿ ಪಿಂಚಣಿ ದಾರರಿಗೆ ಕನಿಷ್ಟ ಪಿಂಚಣಿ ರೂ.9000 ನಿಗದಿ ಪಡಿಸಬೇಕೆಂದು ಭವಿಷ್ಯನಿಧಿ ಪಿಂಚಣಿ ದಾರರ ಸಂಘದ ದ.ಕ.ಜಿಲ್ಲಾ ಸಮಿತಿ ಪ್ರಧಾನ ಕಾರ್ಯಧರ್ಶಿ ಸುಕುಮಾರ್ ಅವರು ಕೇಂದ್ರ ಸರಕಾರವನ್ನು ಒತ್ತಾಯಿಸಿದರು.
ಅವರು ಮಂಗಳವಾರ ಸಮಾಜ ಮಂದಿರದಲ್ಲಿ ನಡೆದ ಮೂಡುಬಿದಿರೆ ತಾಲೂಕು ಪಿಂಚಣಿದಾರರ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು.
ಭವಿಷ್ಯನಿಧಿ ಸಂಸ್ಥೆಯಲ್ಲಿ ವಿತರಣೆಯಾಗದೆ ಉಳಿಕೆ ಮಾಡಿರುವ ಮೊತ್ತವನ್ನು ದುರುಪಯೋಗ ಪಡಿಸದೆ ಪಿಂಚಣಿದಾರರ ಸಂಕಷ್ಟ ಪರಿಹಾರಕ್ಕೆ ಉಪಯೋಗಿಸಬೇಕೆಂದು ಸಂಘವು ತೀಕ್ಷ್ಣವಾದ ಹೋರಾಟವನ್ನು ಸಂಘಟಿಸಲಾಗಿದೆ ಎಂದು ಅವರು ಹೇಳಿದರು.
ಸಂಘದ ಅಧ್ಯಕ್ಷೆ ರಮಣಿ ಅಧ್ಯಕ್ಷತೆ ವಹಿಸಿದ್ದರು.
ಸಂಘದ ಜಿಲ್ಲಾಧ್ಯಕ್ಷ ಬಾಲಕೃಷ್ಣ ಶೆಟ್ಟಿ ಅವರು ಕೇಂದ್ರ ಸರಕಾರ ಕಾರ್ಮಿಕ ಕಾನೂನುಗಳನ್ನು ಸಂಹಿತೆಯಾಗಿಸಿ ಎಲ್ಲಾ ಕಾನೂನು ಬದ್ಧ ಸೌಲಭ್ಯಗಳೊಂದಿಗೆ ಸಾಮಾಜಿಕ ಭದ್ರತೆಯನ್ನೂ ಕಸಿಯುತ್ತಿದೆ ಎಂದ ಅವರು ರಾಜ್ಯ ಸರ್ಕಾರ ಅವರ ಆಟಕ್ಕೆ ತಕ್ಕಂತೆ ಕುಣಿಯುತ್ತಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ವೇದಿಕೆಯಲ್ಲಿ ಸಿಐಟಿಯು ಜಿಲ್ಲಾ ಮುಂದಾಳುಗಳಾದ ವಸಂತ ಆಚಾರಿ ಮತ್ತು ಯಾದವ ಶೆಟ್ಟಿ ಗಿರಿಜಾ, ರಾಧಾ, ಯಮುನಾ ಮತ್ತು ಜಲಜಾಕ್ಷಿ ಉಪಸ್ಥಿತರಿದ್ದರು.
ಸಂಘದ ಪ್ರಧಾನ ಕಾರ್ಯದರ್ಶಿ ಲಕ್ಷ್ಮಿ ವರದಿಯನ್ನು ಮಂಡಿಸಿದರು. ಖಜಾಂಚಿ ಗಿರಿಜ ಲೆಕ್ಕಪತ್ರವನ್ನು ಮಂಡಿಸಿದರು.
ರಮಣಿ ಅಧ್ಯಕ್ಷರಾಗಿ, ಲಕ್ಷ್ಮಿ, ಪ್ರಧಾನ ಕಾರ್ಯದರ್ಶಿಯಾಗಿ, ಗಿರಿಜ ಖಜಾಂಚಿಯಾಗಿ ಹಾಗೂ 15ಮಂದಿ ಪದಾಧಿಕಾರಿಗಳು ಮತ್ತು 17ಮಂದಿಯ ಸಮಿತಿಯನ್ನು ಆಯ್ಕೆ ಮಾಡಲಾಯಿತು.
