ದೇಶಿ ಆಹಾರ 'ಮಾವೇದಾಸ್': ಮೂಡುಬಿದಿರೆಯ ಅನುಷಾ ಆಚಾರ್ ಗೆ ರಾಷ್ಟ್ರೀಯ ನೀತಿ ಆಯೋಗ ಗೌರವ

ದೇಶಿ ಆಹಾರ 'ಮಾವೇದಾಸ್': ಮೂಡುಬಿದಿರೆಯ ಅನುಷಾ ಆಚಾರ್ ಗೆ ರಾಷ್ಟ್ರೀಯ ನೀತಿ ಆಯೋಗ ಗೌರವ


ಮೂಡುಬಿದಿರೆ: ಭಾರತದ ನೀತಿ ಆಯೋಗದ ಅಟಲ್ ಇನ್ನೋವೇಶನ್ ಮಿಶನ್ ( ಎಐಎಂ) ರಾಷ್ಟ್ರಮಟ್ಟದಲ್ಲಿನ ತಳಮಟ್ಟದ ನಾವೀನ್ಯತೆಯ ಕೊಡುಗೆಗಾಗಿ ಮೂಡುಬಿದಿರೆಯ ಅನುಷಾ ಆಚಾರ್ ಅವರು 2026ನೇ ಸಾಲಿನ ರಾಷ್ಟ್ರಮಟ್ಟದ ಸಾಧನೆಗೆ ಪಾತ್ರರಾಗಿದ್ದಾರೆ.

ರಾಷ್ಟ್ರಮಟ್ಟದ 26 ಸಾಧಕರ ಪೈಕಿ ಅನುಷಾ ಆಚಾರ್ ಅವರ ” ಮಾವೇದಾಸ್” ಆಯ್ಕೆಯಾಗಿದೆ. ದಕ್ಷಿಣ ಕನ್ನಡದಿಂದ ಆಯ್ಕೆಯಾಗಿರುವ ಇಬ್ಬರು ಸಾಧಕರ ಪೈಕಿ ಅನುಷಾ ಒಬ್ಬರು ಎನ್ನುವುದೂ ವಿಶೇಷ. ಇದೇ ಬರುವ ಜುಲೈ 31 ರಂದು ದೆಹಲಿಯ ರಾಷ್ಟ್ರಪತಿ ಭವನದಲ್ಲಿ ಸಾಧಕರನ್ನು ಗೌರವಿಸುವ ಸಮಾರಂಭದಲ್ಲಿ ಅನುಷಾ ಆಚಾರ್ ಅವರು ಇದೀಗ ಆಹ್ವಾನಿತರಾಗಿದ್ದಾರೆ.

ದೇಶದ 250ಕ್ಕೂ ಅಧಿಕ ನಾವೀನ್ಯತೆಯ ಸ್ಟಾರ್ಟ್ ಅಪ್ ಗಳವರು ಈ ಸ್ಪರ್ಧಾ ಕಣದಲ್ಲಿದ್ದು, ಅಂತಿಮ ಹಂತದಲ್ಲಿ 26 ಮಂದಿಗೆ ಈ ಸಾಲಿನ ರಾಷ್ಟ್ರೀಯ ಮನ್ನಣೆ ದೊರೆಯುತ್ತಿದೆ. ಮೂಲತಃ ಕುಂದಾಪುರದವರಾದ ಅನುಷಾ ಬಿ.ಇ ಇಲೆಕ್ಟ್ರಿಕಲ್ ಪದವೀಧರೆ. ಆದರೆ ದೇಸೀ ಆಹಾರ, ಅದರಲ್ಲೂ ಬಾಣಂತಿ ಆರೈಕೆಯ ಆಹಾರಾದಿ ಕುರಿತ ವಿಶೇಷ ಆಸಕ್ತಿಯಿಂದ ಅವೆಲ್ಲವನ್ನೂ ತಯಾರಿಸುವುದನ್ನೂ ಕಲಿತು ಮುಂದಿನ ಪೀಳಿಗೆಗೆ ಈ ಪರಂಪರೆಯನ್ನು ಉಳಿಸುವ ಅವರ ಪ್ರಯತ್ನಕ್ಕೆ ಇದೀಗ ಬೆಂಬಲ ದೊರೆತಂತಾಗಿದೆ. ಮೆಂತೆ ಸತ್ವ, ಬಾಣಂತಿ ಲೇಹ, ಬೆಳ್ಳುಳ್ಳಿ ಲೇಹ, ಮೆಂತೆ ಲಡ್ಡು ಈಗಾಗಲೇ ಮಾ ವೇದಾಸ್ ಮೂಲಕ ಜನತೆಗೆ ಲಭ್ಯವಾಗುತ್ತಿದೆ. ಮುಂದೆ ಬೇಬಿ ಫುಡ್ ಸಹಿತ ಇನ್ನಷ್ಟು ಹೊಸ ಆಹಾರ ವೈವಿಧ್ಯಗಳೊಂದಿಗೆ ಕನಸಿನ ಯೋಜನೆ ವಿಸ್ತರಿಸುವ ಅನುಷಾ ಅವರ ಕನಸಿಗೆ ಈ ಗೌರವ ಸ್ಫೂರ್ತಿ ತುಂಬಿದೆ. 2025ರ ಜುಲೈ 18 ರಂದು ಆರಂಭಗೊಂಡು ಈಗಷ್ಟೇ ವರ್ಷ ತುಂಬಿರುವ ಮಾವೇದಾಸ್ ಹೆಸರಿಗೆ ಅನುಗುಣವಾಗಿ ಅಮ್ಮ ಮತ್ತು ಪರಂಪರೆಯ ಕಾಳಜಿಯನ್ನು ಹೊಂದಿದೆ. ಬಾಯ್ಲರ್ ಮತ್ತು ರೈಸ್ ಮಿಲ್ ತಂತ್ರಜ್ಞಾನದಲ್ಲಿ ಜಾಗತಿಕವಾಗಿ ಗುರುತಿಸಿಕೊಂಡ ಎಸ್.ಕೆ. ಎಫ್ ಉದ್ಯಮ ಸಮೂಹದ ಜಿ.ರಾಮಕೃಷ್ಣ ಆಚಾರ್ ಅವರ ಪುತ್ರ ಪ್ರಜ್ವಲ್ ಆಚಾರ್ ಅವರ ಪತ್ನಿ ಅನುಷಾ ಅವರ ಪರಂಪರೆಯ ಕುರಿತಾದ ಪ್ರೀತಿ, ಕಾಳಜಿಯ ಪ್ರಯತ್ನಕ್ಕೆ ಸಂದಿರುವ ಈ ರಾಷ್ಟ್ರೀಯ ಗೌರವ ಕರಾವಳಿಯ ಹೆಣ್ಣು ಮಗಳ ಹೆಮ್ಮೆಯ ಸಾಧನೆಯಾಗಿದೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article