ಮೂಡುಬಿದಿರೆಯಲ್ಲಿ ಹಲಸು-ಮಾವು, ಸ್ವದೇಶಿ ಉತ್ಪನ್ನಗಳ ಬೃಹತ್ ಮೇಳಕ್ಕೆ ಚಾಲನೆ

ಮೂಡುಬಿದಿರೆಯಲ್ಲಿ ಹಲಸು-ಮಾವು, ಸ್ವದೇಶಿ ಉತ್ಪನ್ನಗಳ ಬೃಹತ್ ಮೇಳಕ್ಕೆ ಚಾಲನೆ


ಮೂಡುಬಿದಿರೆ: ಗ್ರಾಮೀಣ ಭಾಗದ ರೈತರು, ಗೃಹ ಕೈಗಾರಿಕೆ ನಡೆಸುವವರು ಹಾಗೂ ಸ್ವದೇಶಿ ಉತ್ಪನ್ನ ತಯಾರಕರಿಗೆ ಮಾರುಕಟ್ಟೆ ಒದಗಿಸುವ ನಿಟ್ಟಿನಲ್ಲಿ ಹಲಸು ಮೇಳಗಳು ರಾಜ್ಯದ ವಿವಿಧ ಭಾಗಗಳಲ್ಲಿ ಹೆಚ್ಚಾಗಿ ನಡೆಯಬೇಕು ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ಅಭಿಪ್ರಾಯಪಟ್ಟರು.

ಅವರು ದೀಪಂ ಇವೆಂಟ್ಸ್ ಹಾಗೂ ನಮ್ಮ ಕಾರ್ಲ ಮೀಡಿಯಾದ ಆಶ್ರಯದಲ್ಲಿ ಮೂಡುಬಿದಿರೆ ಬಸ್ ನಿಲ್ದಾಣ ಸಮೀಪದ ಸಮಾಜ ಮಂದಿರದ ಸ್ವರ್ಣ ಮಂದಿರದಲ್ಲಿ ಆಯೋಜಿಸಿರುವ 'ಹಲಸು-ಮಾವು ಹಾಗೂ ಸ್ವದೇಶಿ ಉತ್ಪನ್ನಗಳ ಬೃಹತ್ ಪ್ರದರ್ಶನ ಮತ್ತು ಮಾರಾಟ ಮೇಳ'ದಲ್ಲಿ ಹಲಸಿನ ಹಣ್ಣು ಕತ್ತರಿಸುವ ಮೂಲಕ ಶುಕ್ರವಾರ  ಚಾಲನೆ ನೀಡಿ ಮಾತನಾಡಿದರು.

ಗ್ರಾಹಕರಿಗೆ ಗುಣಮಟ್ಟದ ಹಲಸು, ಮಾವು ಸೇರಿದಂತೆ ವಿವಿಧ ದೇಶಿ ಹಣ್ಣು-ಹಂಪಲು ಹಾಗೂ ಸ್ವದೇಶಿ ಉತ್ಪನ್ನಗಳು ಒಂದೇ ಸ್ಥಳದಲ್ಲಿ ಲಭ್ಯವಾಗುವುದರಿಂದ ಉತ್ತಮ ಖರೀದಿ ಅವಕಾಶ ಸಿಗುತ್ತದೆ. ಉತ್ಪಾದಕರು ತಮ್ಮ ಉತ್ಪನ್ನಗಳನ್ನು ನೇರವಾಗಿ ಗ್ರಾಹಕರಿಗೆ ತಲುಪಿಸುವ ಮೂಲಕ ಎರಡೂ ವರ್ಗಕ್ಕೂ ಪ್ರಯೋಜನವಾಗಲಿದೆ ಎಂದು ಹೇಳಿದರು.

ಮುಖ್ಯ ಅತಿಥಿಯಾಗಿ ಮಾತನಾಡಿದ ಮಾಜಿ ಸಚಿವ ಅಭಯಚಂದ್ರ ಜೈನ್, ಇಂದಿನ ಯುವಪೀಳಿಗೆ ಹಲಸು ಮತ್ತು ಮಾವಿನ ಹಣ್ಣಿನೊಂದಿಗೆ ಬೆಸೆದುಕೊಂಡಿದ್ದ ಗ್ರಾಮೀಣ ಜೀವನದ ಅನುಭವಗಳಿಂದ ದೂರವಾಗುತ್ತಿದೆ. ಬಾಲ್ಯದಲ್ಲಿ ಹಲಸಿನ ಹಣ್ಣೇ ಪ್ರಮುಖ ಆಹಾರವಾಗಿದ್ದು, ಕುಟುಂಬದ ಆಹಾರ ಸಂಸ್ಕೃತಿಯ ಅವಿಭಾಜ್ಯ ಅಂಗವಾಗಿತ್ತು ಎಂದು ನೆನಪಿಸಿಕೊಂಡರು.

ಎಕ್ಸಲೆಂಟ್ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ರಶ್ಮಿತಾ ಜೈನ್ ಮಾತನಾಡಿ, ಸ್ವದೇಶಿ ಉತ್ಪನ್ನಗಳ ಮೇಳಗಳು ನಮ್ಮ ಆಹಾರ ಸಂಸ್ಕೃತಿ ಹಾಗೂ ಪರಂಪರೆಯನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಉತ್ತಮ ವೇದಿಕೆಯಾಗಿದೆ. ಯುವಜನತೆ ಜಂಕ್ ಫುಡ್‌ಗಳಿಂದ ದೂರವಿದ್ದು, ಪೌಷ್ಟಿಕಾಂಶಯುಕ್ತ ಸ್ವದೇಶಿ ಹಣ್ಣು-ಹಂಪಲು ಹಾಗೂ ಆಹಾರ ಪದಾರ್ಥಗಳನ್ನು ಸೇವಿಸುವ ಮೂಲಕ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಮೂಡುಬಿದಿರೆ ಪುರಸಭೆಯ ಮುಖ್ಯಾಧಿಕಾರಿ ಇಂದು ಎಂ., ಧನಲಕ್ಷ್ಮೀ ಕ್ಯಾಶ್ಯೂ ಇಂಡಸ್ಟ್ರೀಸ್‌ನ ಶ್ರೀಪತಿ ಭಟ್, ಬಿಜೆಪಿ ಜಿಲ್ಲಾ ನಿಕಟಪೂರ್ವ ಅಧ್ಯಕ್ಷ ಸುದರ್ಶನ್ ಎಂ., ಬಂಟರ ಸಂಘದ ಅಧ್ಯಕ್ಷೆ ಶೋಭಾ ಹಾಗೂ ನಿಕಟಪೂರ್ವ ಪುರಸಭಾ ಸದಸ್ಯ ಸುರೇಶ್ ಪ್ರಭು ಉಪಸ್ಥಿತರಿದ್ದರು.

ನಮ್ಮ ಕಾರ್ಲ ಮೀಡಿಯಾದ ಸಂಪಾದಕಿ ಅರ್ಚನಾ ವಿಜಯ್ ಶೆಟ್ಟಿ ಸ್ವಾಗತಿಸಿದರು. ಶ್ವೇತಾ ಎಸ್. ಜೈನ್ ಕಾರ್ಯಕ್ರಮ ನಿರೂಪಿಸಿ, ದೀಪಂ ಇವೆಂಟ್ಸ್‌ನ ಮಾಲಕಿ ಸುಧಾ ವಂದಿಸಿದರು.

ಮೇಳವು ಜುಲೈ 10ರಿಂದ 12ರವರೆಗೆ ಪ್ರತಿದಿನ ಬೆಳಿಗ್ಗೆ 9ರಿಂದ ರಾತ್ರಿ 9 ಗಂಟೆಯವರೆಗೆ ಸಾರ್ವಜನಿಕರಿಗೆ ಮುಕ್ತವಾಗಿರಲಿದೆ. ವಿವಿಧ ಬಗೆಯ ಹಲಸು, ಮಾವು, ಅವುಗಳಿಂದ ತಯಾರಿಸಿದ ಮೌಲ್ಯವರ್ಧಿತ ಉತ್ಪನ್ನಗಳು, ಗೃಹಬಳಕೆಯ ವಸ್ತುಗಳು ಹಾಗೂ ಇತರೆ ಸ್ವದೇಶಿ ಉತ್ಪನ್ನಗಳು ಒಂದೇ ಸೂರಿನಡಿ ಲಭ್ಯವಿದ್ದು, ಮೊದಲ ದಿನವೇ ಸಾರ್ವಜನಿಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಯಿತು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article