ಮದ್ಯವ್ಯಸನಿಗಳಿಗೆ ಆತ್ಮವಿಶ್ವಾಸ ತುಂಬಿ ಹೊಸ ಬದುಕಿನತ್ತ ಕರೆದೊಯ್ಯಬೇಕಿದೆ: ಡಾ. ಹಿಲ್ಡಾ ರಾಯಪ್ಪನ್

ಮದ್ಯವ್ಯಸನಿಗಳಿಗೆ ಆತ್ಮವಿಶ್ವಾಸ ತುಂಬಿ ಹೊಸ ಬದುಕಿನತ್ತ ಕರೆದೊಯ್ಯಬೇಕಿದೆ: ಡಾ. ಹಿಲ್ಡಾ ರಾಯಪ್ಪನ್

ಆಳ್ವಾಸ್‌ನಿಂದ ರಾಜ್ಯ ಮಟ್ಟದ ಮಹಿಳಾ ಮಧ್ಯವರ್ಜನ ಶಿಬಿರ


ಮೂಡುಬಿದಿರೆ: "ಮದ್ಯವ್ಯಸನಕ್ಕೆ ಒಳಗಾದವರನ್ನು ಅಪರಾಧಿಗಳಂತೆ ಅಥವಾ ಕಳಂಕದ ಪ್ರತೀಕವಾಗಿ ಕಾಣುವುದು ತಪ್ಪು. ಅದು ಚಿಕಿತ್ಸೆಯಿಂದ ಗುಣಪಡಿಸಬಹುದಾದ ಕಾಯಿಲೆ. ಅವರನ್ನು ದೂರ ತಳ್ಳುವುದಕ್ಕಿಂತ ಆತ್ಮವಿಶ್ವಾಸ ತುಂಬಿ ಹೊಸ ಬದುಕಿನತ್ತ ಕರೆದೊಯ್ಯುವುದು ಸಮಾಜದ ಜವಾಬ್ದಾರಿಯಾಗಿದೆ ಎಂದು ಮಂಗಳೂರಿನ ಪ್ರಜ್ಞಾ ಕೌನ್ಸೆಲಿಂಗ್ ಸೆಂಟರ್‌ನ ಸಂಸ್ಥಾಪಕಿ ಡಾ. ಹಿಲ್ಡಾ ರಾಯಪ್ಪನ್ ಹೇಳಿದರು.


ಅವರು ಆಳ್ವಾಸ್ ಪುನರ್ಜನ್ಮ, ಶ್ರೀ ಕ್ಷೇತ್ರ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ (ರಿ.), ಧರ್ಮಸ್ಥಳ ಇವುಗಳ ಸಂಯುಕ್ತ ಆಶ್ರಯದಲ್ಲಿ ಶನಿವಾರ ಮಿಜಾರಿನ ಆಳ್ವಾಸ್ ನ ಪುನಜ೯ನ್ಮದಲ್ಲಿ ಶನಿವಾರ ಆರಂಭಗೊಂಡ ರಾಜ್ಯ ಮಟ್ಟದ ಮಹಿಳಾ ಮಧ್ಯವರ್ಜನ ಶಿಬಿರದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.

ಸಮಾಜದಲ್ಲಿ ಪುರುಷರ ಮದ್ಯಪಾನವನ್ನು ಸಹಜವೆಂಬಂತೆ ಒಪ್ಪಿಕೊಳ್ಳುವ ಮನೋಭಾವವಿದ್ದರೂ, ಮಹಿಳೆ ಮದ್ಯವ್ಯಸನಕ್ಕೆ ಒಳಗಾದರೆ ಆಕೆಯನ್ನು ಕೀಳಾಗಿ ನೋಡುವ ಮನೋಭಾವ ಇನ್ನೂ ಇದೆ. ಗಂಡಸು ಕುಡಿಯುವುದು ಗಿಡದ ಕೊಂಬೆಗೆ ಬೆಂಕಿ ಬಿದ್ದಂತೆ; ಹೆಣ್ಣು ಕುಡಿಯುವುದು ಮರದ ಬೇರಿಗೆ ಬೆಂಕಿ ಕೊಟ್ಟಂತೆ. ಏಕೆಂದರೆ ಮಹಿಳೆಯೇ ಕುಟುಂಬದ ಅಡಿಪಾಯ. ಆಕೆಯ ವ್ಯಸನವು ಕೇವಲ ಒಬ್ಬ ವ್ಯಕ್ತಿಯ ಸಮಸ್ಯೆಯಾಗಿರದೆ, ಇಡೀ ಕುಟುಂಬದ ನೆಮ್ಮದಿ, ಮಕ್ಕಳ ಭವಿಷ್ಯ ಹಾಗೂ ಸಮಾಜದ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ ಎಂದರು.

ಮಾಜಿ ಸಚಿವ ಕೆ. ಅಭಯಚಂದ್ರ ಜೈನ್ ಮಾತನಾಡಿ, ಗ್ರಾಮೀಣ ಪ್ರದೇಶಗಳಲ್ಲಿ ಕುಟುಂಬದ ಸಮಸ್ಯೆಗಳು, ಮಾನಸಿಕ ಒತ್ತಡ, ಆರ್ಥಿಕ ಸಂಕಷ್ಟ ಹಾಗೂ ಸಾಮಾಜಿಕ ಪರಿಸ್ಥಿತಿಗಳಿಂದ ಅನೇಕ ಮಹಿಳೆಯರು ಮದ್ಯವ್ಯಸನಕ್ಕೆ ಒಳಗಾಗುತ್ತಿರುವುದು ಆತಂಕಕಾರಿ ಬೆಳವಣಿಗೆ. ಮಹಿಳೆಯರನ್ನು ಸಮಾಜದ ಮುಖ್ಯವಾಹಿನಿಗೆ ಮರಳಿ ತರುವ ಇಂತಹ ಪುನರ್ವಸತಿ ಕಾರ್ಯಕ್ರಮಗಳು ಅತ್ಯಂತ ಅಗತ್ಯವಾಗಿದ್ದು, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಮೋಹನ್ ಆಳ್ವರವರ ಸಮಾಜಮುಖಿ ಚಿಂತನೆಗೆ ಅಭಿನಂದನೆ ಸಲ್ಲಿಸಿದರು.

ಜನಜಾಗೃತಿ ಪ್ರಾದೇಶಿಕ ಕಛೇರಿ, ಬೆಳ್ತಂಗಡಿಯ ಪ್ರಾದೇಶಿಕ ನಿರ್ದೇಶಕ ವಿವೇಕ್ ವಿನ್ಸೆಂಟ್ ಪಾಯ್ಸ್ ಮಾತನಾಡಿ, ಮಹಿಳೆಯರ ಘನತೆ ಮತ್ತು ಗೌರವಕ್ಕೆ ಯಾವುದೇ ಧಕ್ಕೆಯಾಗದ ರೀತಿಯಲ್ಲಿ ಶಿಬಿರದ ಸಂಪೂರ್ಣ ವ್ಯವಸ್ಥೆ ಮಾಡಲಾಗಿದೆ. ಈ ಮಧ್ಯವರ್ಜನ ಶಿಬಿರದ ಮೂಲಕ ವ್ಯಸನಿಗಳ ಬದುಕಿನಲ್ಲಿ ಪರಿವರ್ತನೆ ಬಂದು, ಅವರ ಕುಟುಂಬಗಳಲ್ಲಿ ಸುಖ, ಶಾಂತಿ, ಆರೋಗ್ಯ ಮತ್ತು ಆಶಾಭಾವನೆ ಮರುಸ್ಥಾಪನೆಯಾಗಲಿ ಎಂದರು.

ಕಾರ‍್ಯಕ್ರಮದಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ಡಾ. ವಿನಯ್ ಆಳ್ವ, ಉದ್ಯಮಿ ಕೆ. ಶ್ರೀಪತಿ ಭಟ್, ಚೌಟರ ಅರಮನೆಯ ಕುಲದೀಪ್ ಎಂ, ಮೂಡುಬಿದಿರೆ ಜನಜಾಗೃತಿ ವೇದಿಕೆಯ ಅಧ್ಯಕ್ಷ ವಾಸುದೇವ್ ನಾಯ್ಕ ಉಪಸ್ಥಿತರಿದ್ದರು.

ಎಸ್‌ಕೆಆರ್‌ಡಿಪಿಯ ಯೋಜನಾಧಿಕಾರಿ ಗಣೇಶ್ ಆಚಾರ್ಯ ಸ್ವಾಗತಿಸಿದರು. ಆಳ್ವಾಸ್ ಪುನರ್ಜನ್ಮದ ಆಪ್ತಸಮಾಲೋಚಕಿ ಸುಮನಾ ಪಿಂಟೋ ಕಾರ್ಯಕ್ರಮ ನಿರೂಪಿಸಿ, ಆಳ್ವಾಸ್ ಪುನರ್ಜನ್ಮದ ಆಪ್ತಸಮಾಲೋಚಕ ಲೋಹಿತ್ ಬಂಟ್ವಾಳ್ ವಂದಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article