ಪುರುಷಕರಕಟ್ಟೆ ಘಟನೆ ರಾಜ್ಯಪಾಲರ ‘ಮಧ್ಯಪ್ರವೇಶ’ಕ್ಕೆ ಆಗ್ರಹ
ಪುತ್ತೂರು: ಪುರುಷರಕಟ್ಟೆಯಲ್ಲಿ ನಡೆದ ಘಟನೆಯಲ್ಲಿ ಪೊಲೀಸರಿಂದ ನ್ಯಾಯಯುತ ನಡವಳಿಕೆ ಮತ್ತು ನ್ಯಾಯ ನಿರಾಕರಿಸಲ್ಪಟ್ಟಿದೆ. ಈ ವಿಚಾರದಲ್ಲಿ ರಾಜ್ಯಪಾಲರು ಮಧ್ಯಪ್ರವೇಶ ಮಾಡಬೇಕು ಎಂದು ಆಗ್ರಹಿಸಿ ಸಂತ್ರಸ್ತ ಯುವತಿಯ ಪರವಾಗಿ ಬಿಜೆಪಿ, ಸಂಘ ಪರಿವಾರ ಹಾಗೂ ಯುವತಿಯ ತಂದೆ ಸೋಮವಾರ ಸಹಾಯಕ ಆಯುಕ್ತರ ಮೂಲಕ ರಾಜ್ಯಪಾಲರಿಗೆ ದೂರು ಸಲ್ಲಿಸಿದರು.
ಪುರುಷಕರ ಕಟ್ಟೆಯ ಘಟನೆಗೆ ಸಂಬಂಧಿಸಿ ನಾನು ಪುತ್ತೂರು ಮಹಿಳಾ ಠಾಣೆಗೆ ವೀಡಿಯೋ ದಾಖಲೆ ಸಹಿತ ದೂರು ಸಲ್ಲಿಸಿದ್ದೇನೆ. ದೂರು ದಾಖಲಾದ ತಕ್ಷಣ ನಾನು ದೂರು ನೀಡಿದ ವ್ಯಕ್ತಿಗಳು ನನ್ನನ್ನೂ ಒಳಗೊಂಡಂತೆ ನನ್ನ ತಂದೆ, ಸಂಬಂಧಿಕರು ಮತ್ತು ನನಗೆ ಸಹಾಯ ಮಾಡಲು ಬಂದವರ ವಿರುದ್ಧ ಪ್ರತಿ ದೂರು ನೀಡಿದ್ದಾರೆ. ಇದರಿಂದ ನಾನು ಆಘಾತಕ್ಕೊಳಗಾಗಿದ್ದೇನೆ. ನನ್ನ ದೂರಿನ ಸತ್ಯಾಸತ್ಯತೆಯನ್ನು ಪರಿಶೀಲಿಸದೆ ಡಿಜಿಟಲ್ ಹಾಗೂ ಘಟನೆಯ ಸುತ್ತಮುತ್ತಲ ಸಂದರ್ಭಗಳನ್ನು ಮೌಲ್ಯಮಾಪನ ಮಾಡದೆ ನಮ್ಮ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಯುವಕರಿಂದ ಬೆದರಿಕೆಗೆ ಒಳಗಾದ ನಾನು ರಕ್ಷಣೆಯ ಹಿನ್ನಲೆಯಲ್ಲಿ ದೂರು ದಾಖಲಿಸಿದ್ದು, ಇದಕ್ಕೆ ಪ್ರತೀಕಾರವಾಗಿ ದೂರು ದಾಖಲಿಸಿಕೊಳ್ಳುವ ಮೂಲಕ ನನ್ನನ್ನು ಆರೋಪಿಯನ್ನಾಗಿ ಪರಿಗಣಿಸಲಾಗಿದೆ. ಈ ಘಟನೆಯಲ್ಲಿ ನಿಷ್ಪಕ್ಷಪಾತ ತನಿಖೆ ನಡೆದಿಲ್ಲ. ನಾನು ನೀಡಿದ ದಾಖಲೆಗಳನ್ನು ಸೂಕ್ಷ್ಮವಾಗಿ ಪರಿಗಣಿಸಿಲ್ಲ. ತನಿಖೆ ವಸ್ತುನಿಷ್ಟ ಮೌಲ್ಯಮಾಪನವಾಗುವ ಬದಲು ಪೂರ್ವಾಗ್ರಹ ಪೀಡಿತವಾಗಿದೆ. ಇದು ಕಾನೂನುಬಾಹಿರ ಚಟುವಟಿಕೆಗಳಲ್ಲಿ ತೊಡಗುವ ಮಂದಿಗೆ ಪ್ರೋತ್ಸಾಹ ನೀಡಿದಂತಾಗಿದೆ. ಕಾನೂನುಪಾಲಕ ನಾಗರಿಕರಿಗೆ ನೈತಿಕ ಧೈರ್ಯವನ್ನು ಕುಗ್ಗಿಸುವಂತಿದೆ. ಆದ್ದರಿಂದ ಈ ಘಟನೆಯಲ್ಲಿ ನಾನು ಯಾವುದೇ ವಿಶೇಷ ಸೌಲಭ್ಯಗಳನ್ನು ಕೋರದೆ ಸತ್ಯ ಹೊರಬರಲು ಸ್ವತಂತ್ರ, ನಿಷ್ಪಕ್ಷಪಾತ ಹಾಗೂ ಕಾನೂನು ಬದ್ಧ ತನಿಖೆಯನ್ನು ಬಯಸುತ್ತಿದ್ದೇನೆ ಎಂದು ಸಂತ್ರಸ್ತ ಯುವತಿ ಮನವಿಯಲ್ಲಿ ವಿನಂತಿಸಿದ್ದಾರೆ.
ಇದರೊಂದಿಗೆ ಸ್ವತಂತ್ರ, ನ್ಯಾಯಯುತ ಮತ್ತು ನಿಷ್ಪಕ್ಷಪಾತ ವಿಚಾರಣೆಯನ್ನು ಖಚಿತಪಡಿಸಿಕೊಳ್ಳಲು ಸಮರ್ಥ ಅಧಿಕಾರಿಗಳಿಗೆ ನಿರ್ದೇಶನ ನೀಡಬೇಕು. ಪ್ರತಿ-ದೂರಿನ ಮೇಲೆ ಕ್ರಮ ಕೈಗೊಳ್ಳುವಾಗ ಸಂಬಂಧಪಟ್ಟ ಪೊಲೀಸ್ ಅಧಿಕಾರಿಗಳು ಸರಿಯಾದ ಕಾರ್ಯವಿಧಾನವನ್ನು ಅನುಸರಿಸಿದ್ದಾರೆಯೇ ಎಂದು ಪರಿಶೀಲಿಸಬೇಕು. ಡಿಜಿಟಲ್ ಮತ್ತು ಸಾಕ್ಷಚಿತ್ರ ಪುರಾವೆಗಳನ್ನು ವಸ್ತುನಿಷ್ಠವಾಗಿ ಪರಿಶೀಲಿಸುವುದನ್ನು ಖಚಿತಪಡಿಸಿಕೊಳ್ಳಬೇಕು. ಸಾರ್ವಜನಿಕ ಅಧಿಕಾರಿಗಳಿಂದ ಯಾವುದೇ ದುರ್ನಡತೆ, ಪಕ್ಷಪಾತ, ಅಧಿಕಾರದ ದುರ್ಬಳಕೆ ಅಥವಾ ಕರ್ತವ್ಯ ಲೋಪ ಕಂಡುಬಂದಲ್ಲಿ ಸೂಕ್ತ ಕ್ರಮ ಕೈಗೊಳ್ಳಲು ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡಬೇಕು. ನಾನು ಈ ರಾಜ್ಯದ ಸಾಂವಿಧಾನಿಕ ಸಂಸ್ಥೆಗಳಲ್ಲಿ ನಂಬಿಕೆಯಿಟ್ಟಿರುವುದಲ್ಲದೆ ನ್ಯಾಯವನ್ನು ಅಪೇಕ್ಷಿಸುತ್ತಿದ್ದೇನೆ. ಅದನ್ನು ಕಾಣುವಂತಾಗಲು ರಾಜ್ಯಪಾಲರ ಹಸ್ತಕ್ಷೇಪವನ್ನು ನಿರೀಕ್ಷಿಸುವುದಾಗಿ ಮನವಿಯಲ್ಲಿ ಆಗ್ರಹಿಸಿದ್ದಾರೆ. ಯುವತಿಯ ತಂದೆ ಶಾಂತಪ್ಪ ಗೌಡ ಅವರು ಸಹಾಯಕ ಆಯುಕ್ತೆ ಸ್ಟೆಲ್ಲಾ ವರ್ಗೀಸ್ ಅವರಿಗೆ ಈ ಮನವಿಯನ್ನು ಸಲ್ಲಿಸಿದರು.
ಮಾಜಿ ಶಾಸಕ ಸಂಜೀವ ಮಠಂದೂರು, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಪ್ರಸನ್ನಕುಮಾರ್ ಮಾರ್ತ, ಪುತ್ತೂರು ಮಂಡಲದ ಅಧ್ಯಕ್ಷ ದಯಾನಂದ ಶೆಟ್ಟಿ ಉಜಿರೆಮಾರ್, ಪ್ರಧಾನ ಕಾರ್ಯದರ್ಶಿಗಳಾದ ಲೋಕೇಶ್ ಚಾಕೋಟೆ, ಸುನೀಲ್ ದಡ್ಡು, ನಗರ ಮಂಡಲದ ಅಧ್ಯಕ್ಷ ಶಿವಕುಮಾರ್ ಕಲ್ಲಿಮಾರ್, ಕಾರ್ಯದರ್ಶಿ ಮಣಿಕಂಠ, ಒಬಿಸಿ ಮೋರ್ಚಾದ ರಾಜ್ಯ ಕಾರ್ಯದರ್ಶಿ ಆರ್.ಸಿ. ನಾರಾಯಣ, ವಿಶ್ವಹಿಂದು ಪರಿಷತ್ ಜಿಲ್ಲಾಧ್ಯಕ್ಷ ಕೃಷ್ಣಪ್ರಸನ್ನ, ಜಿಲ್ಲಾ ಧಾರ್ಮಿಕ ಪರಿಷತ್ ಮಾಜಿ ಸದಸ್ಯ ಮುರಳೀಕೃಷ್ಣ ಹಸಂತಡ್ಕ, ಪಕ್ಷದ ಪ್ರಮುಖರಾದ ಸತೀಶ್ ನಾಕ್ ಪರ್ಲಡ್ಕ, ರಾಜೇಶ್ ಬನ್ನೂರು, ಸಂತೋಷ್ ರೈ ಕೈಕಾರ, ರಾಜೇಶ ರೈ ಪರ್ಪುಂಜ, ವಿಶ್ವನಾಥ ಗೌಡ ಬನ್ನೂರು, ಮೋಹನ ಪಕ್ಕಳ ಕುಂಡಾಪು ಮತ್ತಿತರರು ಭಾಗವಹಿಸಿದ್ದರು.