ಪುರುಷರಕಟ್ಟೆ ಪ್ರಕರಣ: ಮಹಿಳಾ ಆಯೋಗ ದೂರು
Sunday, July 19, 2026
ಪುತ್ತೂರು: ಪುರುಷರಕಟ್ಟೆಯಲ್ಲಿ ಸಾಂತಪ್ಪ ಗೌಡ ಅವರ ಪುತ್ರಿಗೆ ಚೂರಿ ತೋರಿಸಿ ಹೆದರಿಸಿದ ಪ್ರಕರಣವನ್ನು ಪೊಲೀಸ್ ಅಧಿಕಾರಿಗಳು ತಪ್ಪಿತಸ್ತರ ಮೇಲೆ ಕಾನೂನು ಕ್ರಮ ಮಾಡದೆ ದೂರುದಾರರ ಮೇಲೆಯೇ ಪೊಲೀಸ್ ಅಧಿಕಾರಿಗಳು ಎಫ್‌ಐಆರ್ ದಾಖಲಿಸಿದ ವಿಚಾರವನ್ನು ಪ್ರಶ್ನಿಸಿ ಸೂಕ್ತ ನ್ಯಾಯ ಒದಗಿಸಿ ಕೊಡಬೇಕೆಂದು ಒತ್ತಾಯಿಸಿ ಕರ್ನಾಟಕ ರಾಜ್ಯ ಮಹಿಳಾ ಆಯೋಗಕ್ಕೆ ಮತ್ತು ಕರ್ನಾಟಕ ರಾಜ್ಯ ಕಾನೂನು ಹಕ್ಕುಗಳ ಆಯೋಗಕ್ಕೆ ದೂರು ಸಲ್ಲಿಸಲಾಗಿದೆ.
ಇದೇ ಸಂದರ್ಭದಲ್ಲಿ ಕರ್ನಾಟಕ ರಾಜ್ಯದ ವಿರೋಧ ಪಕ್ಷದ ನಾಯಕ ಆರ್. ಅಶೋಕ್, ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ ಛಲವಾದಿ ಟಿ, ನಾರಾಯಣಸ್ವಾಮಿಯವರಿಗೆ, ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಕೇಂದ್ರದ ರಾಜ್ಯ ಸಚಿವರಾದ ಸಂಸದೆ ಶೋಭಾ ಕರಂದ್ಲಾಜೆಯವರಿಗೆ, ಮಾಜಿ ಮುಖ್ಯಮಂತ್ರಿಗಳು ಹಾಗೂ ಕೇಂದ್ರದ ಮಾಜಿ ಮಂತ್ರಿಗಳಾದ ಡಿ.ವಿ. ಸದಾನಂದ ಗೌಡ ಅವರಿಗೂ ಮನವಿ ಮಾಡಲಾಯಿತು.
ಈ ಸಂದರ್ಭದಲ್ಲಿ ಪುತ್ತೂರು ಮಾಜಿ ಶಾಸಕ ಸಂಜೀವ ಮಠಂದೂರು, ಬಿಜೆಪಿ ಪುತ್ತೂರು ಗ್ರಾಮಾಂತರ ಮಂಡಲದ ನಿಕಟಪೂರ್ವ ಪ್ರಧಾನ ಕಾರ್ಯದರ್ಶಿ ಮತ್ತು ಹುಡುಗಿಯ ಚಿಕ್ಕಪ್ಪ ಪುರುಷೋತ್ತಮ ಮುಂಗ್ಲಿಮನೆ, ಹುಡುಗಿಯ ತಂದೆ ಸಾಂತಪ್ಪ ಗೌಡ ವಾಲ್ತಾಜೆ, ಹುಡುಗಿಯ ಮಾವ, ಕಬಕ ಬಿಜೆಪಿ ಶಕ್ತಿ ಕೇಂದ್ರದ ನಿಕಟಪೂರ್ವ ಪ್ರಮುಖರಾದ ಜಯರಾಮ ನೆಕ್ಕರೆ, ಹುಡುಗಿಯ ಭಾವ ಕೌಶಿಕ್ ಮಡಂತ್ಯಾರು ಮತ್ತಿತರರು ಉಪಸ್ಥಿತರಿದ್ದರು.
