ಶಕ್ತಿಯಲ್ಲಿ ರೆಸಿಡೆನ್ಸಿಯಲ್‌ನಲ್ಲಿ ‘ಮಂಗಳೂರಿನ ಶೈಕ್ಷಣಿಕ ಸಹಮಿಲನ’

ಶಕ್ತಿಯಲ್ಲಿ ರೆಸಿಡೆನ್ಸಿಯಲ್‌ನಲ್ಲಿ ‘ಮಂಗಳೂರಿನ ಶೈಕ್ಷಣಿಕ ಸಹಮಿಲನ’


ಮಂಗಳೂರು: ಶಕ್ತಿನಗರದ ಶಕ್ತಿ ರೆಸಿಡೆನ್ಸಿಯಲ್ ಶಾತಿಯ ಸಭಾಂಗಣದಲ್ಲಿ ವಿದ್ಯಾಭಾರತಿ ಕರ್ನಾಟಕ ದ.ಕ. ಜಿಲ್ಲೆಯ ಮಂಗಳೂರಿನ ಶೈಕ್ಷಣಿಕ ಸಹಮಿಲನ ಆಯೋಜಿಸಲಾಗಿತು. 


ಈ ಕಾರ್ಯಕ್ರಮವನ್ನು ದೀಪ ಪ್ರಜ್ವಲಿಸಿ ಅಜೇಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್‌ನ ಅಧ್ಯಕ್ಷ ಡಾ. ಸುಧಾಕರ ಶೆಟ್ಟಿ ಉದ್ಪಾಟಿಸಿ ಮಾತನಾಡಿ, ದೇಶಾದ್ಯಂತ ಸುಮಾರು ೨೫ ಸಾವಿರ ಶಿಕ್ಷಣ ಸಂಸ್ಥೆಗಳನ್ನು ವಿದ್ಯಾಭಾರತಿ ನಡೆಸುತ್ತಿರುವುದು ದೇಶದ ಉಜ್ವಲ ಭವಿಷ್ಯದ ಸಂಕೇತವಾಗಿದೆ. ನಮ್ಮ ಸನಾತನ ಧರ್ಮಕ್ಕೆ ಆದಿಯೂ ಇಲ್ಲ, ಅಂತ್ಯವೂ ಇಲ್ಲ. ಶಿಕ್ಷಕರು ಕೇವಲ ಪುಸ್ತಕದ ಜ್ಞಾನವನ್ನು ಬೋಧಿಸುವವರಲ್ಲ, ರಾಷ್ಟರ ನಿರ್ಮಾಣದ ಹೊಣೆಗಾರಿಕೆಯನ್ನು ಹೊತ್ತವರಾಗಿದ್ದಾರೆ ಎಂದರು. 

ಮುಂದಿನ ಪೀಳಿಗೆಯನ್ನು ದೇಶದ ಅಭಿವೃದ್ಧಿಯ ಶಿಖರಕ್ಕೆ ಕೊಂಡೊಯ್ಯುವಲ್ಲಿ ಶಿಕ್ಷಕರ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಪ್ರತಿಯೊಬ್ಬರಲ್ಲಿರುವ ಒಳ್ಳೆಯ ಗುಣಗಳನ್ನು ಅಳವಡಿಸಿಕೊಳ್ಳಬೇಕು. ಶಿಕ್ಷಕರು ಭಾವನೆಯೊಂದಿಗೆ ಕೆಲಸ ಮಾಡುವವರಾಗಿದ್ದು, ಒಂದು ಮಗುವಿನ ಎದುರು ಉಸಿರು ಮತ್ತು ದೇಶ ಎಂಬ ಆಯ್ಕೆ ಬಂದಾಗ ದೇಶವೇ ಮೊದಲು ಎಂಬ ಮನೋಭಾವ ಆ ಮಗುವಿನ ಮನದಲ್ಲಿ ಬರುವಂತೆ ಮಾಡುವುದರಲ್ಲಿ ಶಿಕ್ಷಕರ ಪಾತ್ರ ಬಹಳ ಮುಖ್ಯವಾಗಿದೆ ಎಂದು ಹೇಳಿದರು.

ವಿದ್ಯಾಭಾರತಿಯ ಜಿಲ್ಲಾ ಅಧ್ಯಕ್ಷ ಲೋಕಯ್ಯಾ ಡಿ. ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ವಿದ್ಯಾಭಾರತಿ ದೇಶದಾದ್ಯಂತ ಅನೇಕ ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತಿದ್ದು, ಶಿಕ್ಷಣದಲ್ಲಿ ಭಾರತೀಯತೆಯನ್ನು ಅಳವಡಿಸುವ ಮಹತ್ತರ ಕಾರ್ಯವನ್ನು ಮಾಡುತ್ತಿದೆ ಎಂದ ಅವರು ಸಂಸ್ಕೃತಿ ಜ್ಞಾನ ಪರಿಚಯ ಪುಸ್ತಕದ ಮೂಲಕ ಮಕ್ಕಳಿಗೆ ಭಾರತದ ಶ್ರೀಮಂತ ಸಂಸ್ಕೃತಿ ಮತ್ತು ಪರಂಪರೆಯನ್ನು ಪರಿಚಯಿಸುವ ಕಾರ್ಯ ನಡೆಯುತ್ತಿದೆ ಎಂದರು. 

ವಿದ್ಯಾಭಾರತಿಯ ಶಿಕ್ಷಣ ಪರಿಕಲ್ಪನೆಯಲ್ಲಿ ವ್ಯಕ್ತಿತ್ವ ವಿಕಾಸವು ಪಂಚಕೋಶಗಳ ಆಧಾರದಲ್ಲಿದ್ದು, ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿಯೂ ವಿದ್ಯಾಭಾರತಿಯ ಪಂಚಪದಿ ಶಿಕ್ಷಣ ವಿಧಾನ ಅಳವಡಿಕೆಯಾಗಿರುವುದು ಸಂತಸದ ವಿಷಯವಾಗಿದೆ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾರದಾ ಸಮೂಹ ಸಂಸ್ಥೆಗಳ ಅಧ್ಯಕ್ಷ ಡಾ. ಎಂ.ಬಿ. ಪುರಾಣಿಕ್ ಮಾತನಾಡಿ, ಸಮಾಜ ಮತ್ತು ರಾಷ್ಟ್ರದಿಂದ ಅನೇಕ ಸೌಲಭ್ಯಗಳನ್ನು ಪಡೆದು ಶಿಕ್ಷಣ ಪೂರ್ಣಗೊಳಿಸಿದ ಮಕ್ಕಳನ್ನು ಕೇವಲ ಸಂಪಾದನೆಯ ದೃಷ್ಟಿಯಿಂದ ವಿದೇಶಕ್ಕೆ ಕಳುಹಿಸುವ ಮನೋಭಾವ ಸೂಕ್ತವಲ್ಲ ಎಂದ ಅವರು ಶಿಕ್ಷಣವು ಕೇವಲ ಅಂಕಗಳಿಗೆ ಸೀಮಿತವಾಗದೆ ಉತ್ತಮ ಮೌಲ್ಯಗಳನ್ನು ಬೆಳೆಸುವಂತಿರಬೇಕು. ಆಧುನಿಕ ಶಿಕ್ಷಣದೊಂದಿಗೆ ಸನಾತನ ಜೀವನಮೌಲ್ಯಗಳನ್ನು ವಿದ್ಯಾರ್ಥಿಗಳಲ್ಲಿ ಬಿತ್ತುವ ಕಾರ್ಯವನ್ನು ವಿದ್ಯಾಭಾರತಿ ಯಶಸ್ವಿಯಾಗಿ ನಡೆಸುತ್ತಿದೆ ಎಂದು ತಿಳಿಸಿದರು.

ವೇದಿಕೆಯಲ್ಲಿ ಶಕ್ತಿ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕ ಡಾ. ಕೆ.ಸಿ. ನಾಯಕ್ ಉಪಸ್ಥಿತರಿದ್ದರು. ಈ ಕಾರ್ಯಕ್ರಮದಲ್ಲಿ 43 ಶಾಲೆಗಳ 700ಕ್ಕೂ ಹೆಚ್ಚಿನ ಶಿಕ್ಷಕ-ಶಿಕ್ಷಕೇತರರು ಒಂದು ದಿನಗಳ ಕಾಲ ಭಾಗವಹಿಸಿದರು. 

ಜಿಲ್ಲಾ ಕಾರ್ಯದರ್ಶಿ ರಮೇಶ ಕೆ. ಸ್ವಾಗತಿಸಿ, ಶರಣಪ್ಪ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article