ಸಂಪಾಜೆ ಕಲ್ಲುಗುಂಡಿ ಕಡೆಪಾಲದಲ್ಲಿ ಕುಂಬ್ರದ ವಿವಾಹಿತೆಯ ಅನುಮಾನಾಸ್ಪದ ಸಾವು: ಕೊಲೆ ಆರೋಪ
ಸುಳ್ಯ: ಸಂಪಾಜೆ ಸಮೀಪದ ಕಲ್ಲುಗುಂಡಿ ಕಡೆಪಾಲದಲ್ಲಿ ವಿವಾಹಿತ ಯುವತಿಯೊಬ್ಬರು ಅನುಮಾನಾಸ್ಪದವಾಗಿ ಮೃತಪಟ್ಟಿರುವ ಘಟನೆ ಶನಿವಾರ ರಾತ್ರಿ ನಡೆದಿದೆ.
ಮೃತ ಯುವತಿ ಮೂಲತಃ ಪುತ್ತೂರು ತಾಲೂಕು ಕುಂಬ್ರ ಸಾರೆಪುಣಿ ನಿವಾಸಿ ಜುಬೈದ ಅವರ ಮಗಳು ಫಾತಿಮತ್ ಇಶಾನಾ ಎಂದು ಗುರುತಿಸಲಾಗಿದೆ.
ಯುವತಿಯನ್ನು ದೇವರಕೊಲ್ಲಿ ಕಡೆಯಿಂದ ಕಲ್ಲುಗುಂಡಿ ಕಡೆಪಾಲಕ್ಕೆ ಬಂದು ನೆಲೆಸಿರುವ ಕುಟುಂಬಕ್ಕೆ ವಿವಾಹ ಮಾಡಿಕೊಡಲಾಗಿತ್ತು. ಪತಿ ಅನ್ಸಾರ್ ಬೆಂಗಳೂರಿನಲ್ಲಿ ಟ್ಯಾಕ್ಸಿ ಚಾಲಕರಾಗಿ ಕೆಲಸ ಮಾಡುತ್ತಿದ್ದಾರೆ.
ಶನಿವಾರ ಸಂಜೆ ಇಶಾನಾ ಸ್ನಾನಗೃಹದಲ್ಲಿರುವ ಶವರ್ ಪೈಪ್‌ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಗಂಡನ ಮನೆಯವರು ತಿಳಿಸಿದ್ದಾರೆ.
ಆದರೆ ತವರು ಮನೆಯವರು ಇದನ್ನು ಸಂಪೂರ್ಣವಾಗಿ ಅಲ್ಲಗಳೆದಿದ್ದು, ಇದೊಂದು ಆತ್ಮಹತ್ಯೆಯಲ್ಲ, ವ್ಯವಸ್ಥಿತ ಕೊಲೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
ತವರು ಮನೆಯವರು ಗಂಡನ ಮನೆಯವರು ನಿರಂತರ ಕಿರುಕುಳ ನೀಡುತ್ತಿದ್ದಾರೆ ಎಂದು ಇಶಾನಾ ಆಗಾಗ ತವರಿಗೆ ಫೋನ್ ಮಾಡಿ ಅಳಲು ತೋಡಿಕೊಳ್ಳುತ್ತಿದ್ದರು ಎಂದು ಬಂಧುಗಳು ಆರೋಪಿಸಿದ್ದಾರೆ.
ಸಾಮಾನ್ಯ ಎತ್ತರದ ಸ್ನಾನಗೃಹದ ಶವರ್‌ಗೆ ನೇಣು ಬಿಗಿದು ಸಾವನ್ನಪ್ಪುವುದು ಹೇಗೆ ಸಾಧ್ಯ ಎಂಬುದು ತಾರ್ಕಿಕವಾಗಿ ನಂಬಲು ಅಸಾಧ್ಯ ಎಂದು ಕುಟುಂಬಸ್ಥರು ಪ್ರಶ್ನಿಸಿದ್ದಾರೆ.
ತವರು ಮನೆಯವರು ಸ್ಥಳಕ್ಕೆ ಬರುವ ಮುನ್ನವೇ ಗಂಡನ ಮನೆಯವರೇ ಮೃತದೇಹವನ್ನು ನೇಣಿನ ಕುಣಿಕೆಯಿಂದ ಕೆಳಗಿಳಿಸಿ, ಮಲಗಿಸಿ, ನಂತರ ಆಂಬುಲನ್ಸ್ ಮೂಲಕ ಆಸ್ಪತ್ರೆಗೆ ಸಾಗಿಸಿದ್ದಾರೆ. ಇದು ಆತ್ಮಹತ್ಯೆ ಎಂದು ಬಿಂಬಿಸಲು ಮಾಡಿದ ನಾಟಕ ಇರಬಹುದು ಎಂದು ಕುಟುಂಬ ಸಂಶಯ ವ್ಯಕ್ತಪಡಿಸಿದೆ.
ಕುಟುಂಬದ ದೂರಿನ ಬಳಿಕ ಮರಣೋತ್ತರ ಪರೀಕ್ಷೆ:
ದೂರಿನ ಆಧಾರದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಮೃತದೇಹವನ್ನು ಸುಳ್ಯದ ಕೆವಿಜಿ ಆಸ್ಪತ್ರೆಯಿಂದ ಮಂಗಳೂರಿನ ಕಣಚೂರು ಆಸ್ಪತ್ರೆಗೆ ವಿಧಿವಿಜ್ಞಾನ (ಫರೆನ್ಸಿಕ್) ಮರಣೋತ್ತರ ಪರೀಕ್ಷೆಗಾಗಿ ಸ್ಥಳಾಂತರಿಸುವ ಕ್ರಮ ಕೈಗೊಳ್ಳಲಾಗಿದೆ.
ಸಾವಿನ ಸುತ್ತ ಹೆಣೆದುಕೊಂಡಿರುವ ನಿಗೂಢತೆ ಮತ್ತು ತವರು ಮನೆಯವರ ಗಂಭೀರ ದೂರನ್ನು ಪರಿಗಣಿಸಿದ ಪೊಲೀಸರು, ಹೆಚ್ಚಿನ ವೈಜ್ಞಾನಿಕ ಮತ್ತು ಉನ್ನತ ಮಟ್ಟದ ಮರಣೋತ್ತರ ಪರೀಕ್ಷೆಗಾಗಿ ಮೃತದೇಹವನ್ನು ಮಂಗಳೂರಿಗೆ ರವಾನಿಸಿದ್ದಾರೆ.
ಮಂಗಳೂರಿನ ಮರಣೋತ್ತರ ವರದಿ ಬಂದ ನಂತರವೇ ಇದು ಆತ್ಮಹತ್ಯೆಯೇ ಅಥವಾ ಕೊಲೆಯೇ ಎಂಬ ನಿಖರ ಕಾರಣ ತಿಳಿಯಲಿದೆ. ಸಂಪಾಜೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.