ಲಾವಣ್ಯ ಹತ್ಯಾ ಪ್ರಕರಣ: ಕಕ್ಕೆಪದವು ಗ್ರಾಮಸ್ಥರಿಂದ ಪೊಲೀಸ್ ಅಧಿಕಾರಿಗೆ ಮನವಿ

ಲಾವಣ್ಯ ಹತ್ಯಾ ಪ್ರಕರಣ: ಕಕ್ಕೆಪದವು ಗ್ರಾಮಸ್ಥರಿಂದ ಪೊಲೀಸ್ ಅಧಿಕಾರಿಗೆ ಮನವಿ


ಬಂಟ್ವಾಳ: ಉಳಿ ಗ್ರಾಮದ ಕಕ್ಕೆಪದವು ನಿವಾಸಿ ಲಾವಣ್ಯ ಅವರನ್ನು ಜು.16 ರಂದು ಸಂಜೆ ಬಿ.ಸಿ.ರೋಡ್ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಭೀಕರವಾಗಿ ಹತ್ಯೆಗೈದ ಆರೋಪಿಗೆ ನ್ಯಾಯಾಲಯ ಕಾನೂನಿನ ಪ್ರಕಾರ ಗಲ್ಲು ಶಿಕ್ಷೆ ವಿಧಿಸಲು ಅಗತ್ಯವಿರುವ ಎಲ್ಲಾ ಕಾನೂನು ಕ್ರಮಗಳನ್ನು ಪೊಲೀಸ್ ಇಲಾಖೆ ಕೈಗೊಳ್ಳುವಂತೆ ಉಳಿ ಗ್ರಾಮಸ್ಥರು ಪೊಲೀಸರಿಗೆ ಮನವಿ ಮಾಡಿದ್ದಾರೆ.

ಭಾನುವಾರ ಕಕ್ಯಪದವಿನಿಂದ ಬಂಟ್ವಾಳ ಉಪವಿಭಾಗದ ಡಿವೈಎಸ್ಪಿ ಕಚೇರಿಗೆ ಆಗಮಿಸಿದ ಗ್ರಾಮಸ್ಥರು, ದಕ್ಷಿಣ ಕನ್ನಡ ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಅನಿಲ್ ಕುಮಾರ್ ಭೂಮರೆಡ್ಡಿ ಅವರನ್ನು ಭೇಟಿಯಾದರು.

ನಮ್ಮ ಗ್ರಾಮದ ಅಮಾಯಕ ಹೆಣ್ಣುಮಗಳು ಲಾವಣ್ಯ ಕಕ್ಯಪದವು ಅವರ ಹತ್ಯೆ ನಡೆದಿರುವುದು ಇಡೀ ಸಮಾಜವನ್ನು ತೀವ್ರ ದುಃಖ, ಆಘಾತ ಮತ್ತು ಆತಂಕಕ್ಕೆ ಒಳಪಡಿಸಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಚೇತನ್ ಎಂಬ ಆರೋಪಿಯನ್ನು ಬಂಧಿಸಿರುವ ಪೊಲೀಸ್ ಇಲಾಖೆಯ ಕಾರ್ಯವನ್ನು ನಾವು ಸ್ವಾಗತಿಸುತ್ತೇವೆ. ಪ್ರಕರಣದ ತನಿಖೆಯನ್ನು ಸಂಪೂರ್ಣ ನಿಷ್ಪಕ್ಷಪಾತವಾಗಿ ಹಾಗೂ ಶೀಘ್ರವಾಗಿ ಪೂರ್ಣಗೊಳಿಸಿ, ಎಲ್ಲ ಅಗತ್ಯ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿ, ನ್ಯಾಯಾಲಯಕ್ಕೆ ಬಲವಾದ ದೋಷಾರೋಪಣಾ ಪತ್ರ ಸಲ್ಲಿಸುವಂತೆ ವಿನಂತಿಸಿದ ಗ್ರಾಮಸ್ಥರು, ತಪ್ಪಿತಸ್ಥನಿಗೆ ಗಲ್ಲು ಶಿಕ್ಷೆ ವಿಧಿಸಿದರೆ, ಲಾವಣ್ಯ ಕುಟುಂಬಕ್ಕೆ ನ್ಯಾಯ ದೊರಕುವುದರ ಜೊತೆಗೆ ಸಮಾಜದಲ್ಲಿ ಇಂಥ ಭೀಕರ ಅಪರಾಧಗಳಿಗೆ ತಡೆ ಉಂಟಾಗುತ್ತದೆ ಎಂದು ಊರವರು ತಿಳಿಸಿದರು.

ಈ ಸಂದರ್ಭ ಮನವಿ ಸ್ವೀಕರಿಸಿದ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಅನಿಲ್ ಕುಮಾರ್ ಭೂಮರೆಡ್ಡಿ ಅವರು, ಪೊಲೀಸ್ ಇಲಾಖೆ ಸಂತ್ರಸ್ತರ ಕುಟುಂಬದ ಜತೆಗಿದ್ದು, ಆರೋಪಿಗೆ ಕಠಿಣ ಶಿಕ್ಷೆ ದೊರಕುವಂತೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಭರವಸೆ ನೀಡಿದರು.

ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಪೊಲೀಸ್ ಭದ್ರತೆ ಸಹಿತ ಮಹಿಳೆಯರ ಸುರಕ್ಷತೆಗೆ ಸಂಬಂಧಿಸಿ ಎದ್ದಿರುವ ಆತಂಕಗಳನ್ನು ಗ್ರಾಮಸ್ಥರು ಮಂಡಿಸಿದ ವೇಳೆ ಈ ಕುರಿತು ಪೊಲೀಸ್ ಇಲಾಖೆ ಗಮನಹರಿಸಲಿದ್ದು, ಸುರಕ್ಷತೆಗೆ ಗರಿಷ್ಠ ಆದ್ಯತೆ ನೀಡಲಿದೆ ಎಂದರು.

ವಿವಿಧ ಗ್ರಾಮಸಭೆಗಳ ಸಂದರ್ಭ ಪೊಲೀಸ್ ಇಲಾಖೆ ವತಿಯಿಂದ ಗ್ರಾಮಸ್ಥರಿಗೆ ಸೂಕ್ತ ಮಾಹಿತಿ ಹಾಗೂ ಧೈರ್ಯ ತುಂಬುವ ಕೆಲಸವಾಗಬೇಕು ಎಂದು ಗ್ರಾಮಸ್ಥರು ಮನವಿ ಮಾಡಿದರು.

ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಸುರೇಶ್ ಮೈರ, ಮಾಜಿ ಉಪಾಧ್ಯಕ್ಷ ವಸಂತ ಸಾಲಿಯಾನ್, ಪ್ರಮುಖರಾದ ಮಂಜುನಾಥ ಸಾಲ್ಯಾನ್, ಗುರುಪ್ರಸಾದ್, ತಿಲಕ್, ಸುಜಾ ಡಿಸೋಜ, ಗೌತಮ್ ಗೌಡ ಸಹಿತ ಉಳಿ, ಕಕ್ಯಪದವು ಪರಿಸದರ ಗ್ರಾಮಸ್ಥರು, ಲಾವಣ್ಯ ಕುಟುಂಬಸ್ಥರು, ಸಂಬಂಧಿಕರು ಈ ಸಂದರ್ಭ ಉಪಸ್ಥಿತರಿದ್ದು, ಲಾವಣ್ಯ ಪರ ನ್ಯಾಯಕ್ಕೆ ಆಗ್ರಹಿಸಿ, ಆರೋಪಿ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲು ವಿನಂತಿಸಿದರು. 

ಬಂಟ್ವಾಳ ಪೊಲೀಸ್ ನಿರೀಕ್ಷಕ ಅನಂತಪದ್ಮನಾಭ, ಉಪನಿರೀಕ್ಷಕರಾದ ಸಂದೀಪ್ ಶೆಟ್ಟಿ, ದುರ್ಗಪ್ಪ ಸಹಿತ ಪೊಲೀಸ್ ಸಿಬ್ಬಂದಿ ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article