ಚಾಲಕನ ನಿಯಂತ್ರಣ ತಪ್ಪಿ ಚರಂಡಿಗೆ ಜಾರಿದ ಕಾರು: ಪ್ರಯಾಣಿಕರು ಪ್ರಾಣಾಪಾಯದಿಂದ ಪಾರು
Sunday, July 19, 2026
ಶಿರ್ವ: ಉಡುಪಿ ಕಡೆಯಿಂದ ಶಿರ್ವ ಕಡೆಗೆ ಸಾಗುತ್ತಿದ್ದ ಮಹೇಂದ್ರ ಥಾರ್ ವಾಹನವೊಂದು ಭಾನುವಾರ ಅಪರಾಹ್ನ ಬಂಟಕಲ್ಲು ಬಿ.ಸಿ ರೋಡ್ ಸಮೀಪ ಚಾಲಕನ ನಿಯಂತ್ರಣ ತಪ್ಪಿ ಚರಂಡಿಗೆ ಜಾರಿದೆ.
ಕಾರಿನಲ್ಲಿ ಶಿರ್ವ ಪರಿಸರದ ಚಾಲಕ ಬಾಲಕೃಷ್ಣ, ಓರ್ವ ಸಹಪ್ರಯಾಣಿಕ, ಇಬ್ಬರು ಯುವತಿಯರು ಇದ್ದರು ಎನ್ನಲಾಗಿದೆ. ಅಪಘಾತದ ರಭಸಕ್ಕೆ ವಾಹನದ ಮುಂಭಾಗ ನುಜ್ಜುಗುಜ್ಜಾಗಿದೆ.
ಅಪಘಾತ ನಡೆದ ತಕ್ಷಣ ಸ್ಪಂದಿಸಿದ ಬಂಟಕಲ್ಲು ಬಿ.ಸಿ. ರೋಡ್ ಲಯನ್ಸ್ ಕ್ಲಬ್ ಅಧ್ಯಕ್ಷ ಟೋನಿ ಮೋನಿಸ್ ಅಂಬ್ಯುಲೆನ್ಸ್ ಹಾಗೂ ಶಿರ್ವ ಪೊಲೀಸರಿಗೆ ಕಾಲ್ ಮಾಡಿ ಮಾನವೀಯತೆ ಮೆರೆದಿದ್ದಾರೆ. ಘಟನೆಗೆ ಸ್ಫಂದಿಸಿದ ಬಂಟಕಲ್ಲು ನಾಗರಿಕಸೇವಾ ಸಮಿತಿಯ ಅಧ್ಯಕ್ಷ ಕೆ.ಆರ್. ಪಾಟ್ಕರ್ ಹಾಗೂ ವೀರೇಂದ್ರ ಪಾಟ್ಕರ್ ಇವರು ನಾಗರಿಕ ಸೇವಾ ಸಮಿತಿಯ ಅಂಬ್ಯುಲೆನ್ಸ್‌ನಲ್ಲಿ ಉಡುಪಿ ಕೆ.ಎಂ.ಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಇಬ್ಬರಿಗೆ ತೀವ್ರ ಸ್ವರೂಪದ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎನ್ನಲಾಗಿದೆ. ಶಿರ್ವ ಪೊಲೀಸರು ಘಟನಾ ಸ್ಥಳಕ್ಕೆ ಆಗಮಿಸಿ ತನಿಖೆ ನಡೆಸಿದ್ದಾರೆ.