ಕುಕ್ಕೆ ಸುಬ್ರಹ್ಮಣ್ಯ ಆಸ್ಪತ್ರೆ ಸಮಸ್ಯೆ, ಜುಲೈ 10ಕ್ಕೆ ಬೃಹತ್ ಪ್ರತಿಭಟನೆ ಎಚ್ಚರಿಕೆ: 10 ದಿನಗಳ ಗಡುವು
ಈ ಸಂಬಂಧ ಮಂಗಳವಾರ ಕುಕ್ಕೆ ಸುಬ್ರಹ್ಮಣ್ಯ ಗ್ರಾಮ ಪಂಚಾಯಿತಿಯ ಕುಮಾರಧಾರ ಸಭಾಭವನದಲ್ಲಿ ನಡೆದ ಹೋರಾಟ ಸಮಿತಿ ಸಭೆಯಲ್ಲಿ ಮಹತ್ವದ ನಿರ್ಣಯ ಕೈಗೊಳ್ಳಲಾಯಿತು. ಸರ್ಕಾರ ಹಾಗೂ ಆರೋಗ್ಯ ಇಲಾಖೆ ಮುಂದಿನ 10 ದಿನಗಳೊಳಗೆ ಬೇಡಿಕೆಗಳನ್ನು ಈಡೇರಿಸದಿದ್ದರೆ ಪಕ್ಷಭೇದ ಮರೆತು ಗ್ರಾಮಸ್ಥರೆಲ್ಲ ಒಗ್ಗಟ್ಟಿನಿಂದ ಜುಲೈ 10ರಂದು ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಲಾಗಿದೆ.
ಗ್ರಾಮಸ್ಥರ ಪ್ರಕಾರ, ಸುಬ್ರಹ್ಮಣ್ಯದ ಪರ್ವತಮುಖಿಯಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರವೇ ಈ ಭಾಗದ ಜನರು ಹಾಗೂ ಕ್ಷೇತ್ರಕ್ಕೆ ಆಗಮಿಸುವ ಸಾವಿರಾರು ಭಕ್ತರಿಗೆ ಏಕೈಕ ಸರ್ಕಾರಿ ಆಸ್ಪತ್ರೆಯಾಗಿದೆ. ಆದರೆ ಇಲ್ಲಿ ಶಾಶ್ವತ ವೈದ್ಯರ ಕೊರತೆ, ಸಿಬ್ಬಂದಿ ಅಭಾವ ಹಾಗೂ 24 ಗಂಟೆಗಳ ತುರ್ತು ಸೇವೆ ಇಲ್ಲದಿರುವುದು ಜನರ ಆತಂಕಕ್ಕೆ ಕಾರಣವಾಗಿದೆ. ಸಂಜೆ 5 ಗಂಟೆಯ ಬಳಿಕ ಆಸ್ಪತ್ರೆ ಮುಚ್ಚುವುದರಿಂದ ತುರ್ತು ಸಂದರ್ಭಗಳಲ್ಲಿ ರೋಗಿಗಳನ್ನು ಪುತ್ತೂರು ಅಥವಾ ಮಂಗಳೂರಿಗೆ ಕರೆದೊಯ್ಯಬೇಕಾದ ಅನಿವಾರ್ಯತೆ ಉಂಟಾಗುತ್ತಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಸಮಸ್ಯೆ ಪರಿಹಾರಕ್ಕಾಗಿ ಕಳೆದ ನಾಲ್ಕು ವರ್ಷಗಳಿಂದ ನಿರಂತರ ಮನವಿ, ಹೋರಾಟ ಹಾಗೂ ಪ್ರತಿಭಟನೆಗಳು ನಡೆದಿದ್ದರೂ ಯಾವುದೇ ಶಾಶ್ವತ ಪರಿಹಾರ ದೊರೆತಿಲ್ಲ ಎಂದು ಸಭೆಯಲ್ಲಿ ಅಸಮಾಧಾನ ವ್ಯಕ್ತವಾಯಿತು. ಎರಡು ತಿಂಗಳ ಹಿಂದೆ ರಾಜ್ಯದ ಮಾಜಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರಿಗೆ ಮನವಿ ಸಲ್ಲಿಸಲಾಗಿದ್ದು, ಅವರು ಜಿಲ್ಲಾ ಆರೋಗ್ಯಾಧಿಕಾರಿಗೆ ಸಮಸ್ಯೆ ತಕ್ಷಣ ಪರಿಹರಿಸುವಂತೆ ಸೂಚನೆ ನೀಡಿದ್ದರೂ ಇದುವರೆಗೆ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ ಎಂದು ಸಭೆಯಲ್ಲಿ ತಿಳಿಸಲಾಯಿತು.
ಸರ್ಕಾರದ ಯೋಜನೆಯಡಿ ಹೊಸ ಆಸ್ಪತ್ರೆ ಕಟ್ಟಡ ನಿರ್ಮಾಣಗೊಂಡಿದ್ದು, ಅಗತ್ಯ ವೈದ್ಯಕೀಯ ಉಪಕರಣಗಳೂ ಲಭ್ಯವಿವೆ. ಆದರೆ ವೈದ್ಯರು ಹಾಗೂ ಸಿಬ್ಬಂದಿ ಇಲ್ಲದ ಕಾರಣ ಆಸ್ಪತ್ರೆ ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂಬ ಆರೋಪ ಕೇಳಿಬಂದಿದೆ. ಆಸ್ಪತ್ರೆಯನ್ನು ಮೇಲ್ದರ್ಜೆಗೆ ಏರಿಸುವುದು, ಶಾಶ್ವತ ಹಾಗೂ ನುರಿತ ವೈದ್ಯರನ್ನು ನೇಮಿಸುವುದು, ಅಗತ್ಯ ಸಿಬ್ಬಂದಿಯನ್ನು ಒದಗಿಸುವುದು ಹಾಗೂ ೨೪ ಗಂಟೆಗಳ ತುರ್ತು ಚಿಕಿತ್ಸಾ ಸೇವೆ ಆರಂಭಿಸುವುದು ಸೇರಿದಂತೆ ಹಲವು ಬೇಡಿಕೆಗಳನ್ನು ಸರ್ಕಾರದ ಮುಂದೆ ಗ್ರಾಮಸ್ಥರು ಮತ್ತೊಮ್ಮೆ ಮುಂದಿಟ್ಟಿದ್ದಾರೆ.
ಸಭೆಯಲ್ಲಿ ಹೋರಾಟಗಾರರಾದ ಶಿವರಾಂ ರೈ, ವಿಮಲ ರಂಗಯ್ಯ, ಶೋಭ ಗಿರಿಧರ, ಸತೀಶ್ ಕುಜುಗೋಡು, ಪವನ್ ಎಂ.ಡಿ., ಗಿರಿಧರ ಸ್ಕಂದ, ರವಿ ಕಕ್ಕೆಪದವು, ಚಂದ್ರಶೇಖರ್ ನಾಯರ್, ಡಾ. ಶಿವಕುಮಾರ್ ಹೊಸಳ್ಳಿಕೆ, ಸುಬ್ರಹ್ಮಣ್ಯ ಗೌಡ, ಭವಿಷ್, ಭರತ್, ಸುಹಾಸ್ ಸೇರಿದಂತೆ ಹಲವರು ಭಾಗವಹಿಸಿದ್ದರು.
ಆರೋಗ್ಯ ಇಲಾಖೆಯೂ ಹಾಗೂ ರಾಜ್ಯ ಸರ್ಕಾರವೂ ಈ ಗಂಭೀರ ಸಮಸ್ಯೆಯನ್ನು ತಕ್ಷಣ ಪರಿಗಣಿಸಿ ಅಗತ್ಯ ಕ್ರಮ ಕೈಗೊಂಡು ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಆಗಮಿಸುವ ಲಕ್ಷಾಂತರ ಭಕ್ತರು ಮತ್ತು ಸ್ಥಳೀಯ ಜನರಿಗೆ ಗುಣಮಟ್ಟದ ಆರೋಗ್ಯ ಸೇವೆ ಕಲ್ಪಿಸಬೇಕೆಂಬುದು ಗ್ರಾಮಸ್ಥರ ಒತ್ತಾಯವಾಗಿದೆ.