ತುಂಬೆ ಡ್ಯಾಮ್‌ನಲ್ಲಿ ಏಕಾಏಕಿ ಏಳೂವರೆ ಮೀಟರ್ ನೀರು ಶೇಖರಣೆ, ರೈತರ ಪಂಪ್‌ಸೆಟ್ ಜಲಾವೃತ
ಬಂಟ್ವಾಳ: ಸೋಮವಾರ ರಾತ್ರಿ ತುಂಬೆಡ್ಯಾಮ್‌ನಲ್ಲಿ ಯಾವುದೇ ಪೂರ್ವ ಸೂಚನೆ ನೀಡದೆ ಏಕಾಏಕಿ ಏಳೂವರೆ ಮೀಟರ್ ನೀರು ಸಂಗ್ರಹಿಸಿ ನದಿ ತೀರದ ವಿದ್ಯುತ್ ಪಂಪುಸೆಟ್ಟುಗಳು ಜಲಾವೃತಗೊಂಡಿದೆ ಎಂದು ನದಿ ತೀರದ ಸಂತ್ರಸ್ಥ ರೈತರು ಆರೋಪಿಸಿದ್ದಾರೆ.
ಮಂಗಳೂರಿಗೆ ಕುಡಿಯುವ ನೀರು ಪೂರೈಕೆ ಮಾಡಲಾಗುತ್ತಿರುವ ನಿಟ್ಟಿನಲ್ಲಿ ಜಿಲ್ಲೆಯ ಜೀವನದಿ ನೇತ್ರಾವತಿಗೆ ತುಂಬೆಯಲ್ಲಿ ನಿರ್ಮಿಸಲಾದ ಡ್ಯಾಮ್ ಸೋಮವಾರ ರಾತ್ರಿ ಹೊತ್ತು ಯಾವುದೇ ಪೂರ್ವ ಸೂಚನೆ ನೀಡದೆ ಏಕಾಏಕಿ ಏಳೂವರೆ ಮೀಟರ್ ನೀರು ಶೇಖರಿಸಿದ ಪರಿಣಾಮ ಡ್ಯಾಮ್‌ನ ಮೇಲ್ಭಾಗದ ಸಜೀಪಮುನ್ನೂರು, ನಂದಾವರ, ಪಾಣೆಮಂಗಳೂರು ಪ್ರದೇಶದ ನದಿ ತೀರದ ಇಕ್ಕೆಲದ ರೈತರ ವಿದ್ಯುತ್ ಪಂಪ್‌ಸೆಟ್‌ಗಳು ಜಲಾವೃತಗೊಂಡು ರೈತರಿಗೆ ಅಪಾರ ನಷ್ಟ ಉಂಟಾಗಿರುತ್ತದೆ ಎಂದು ಬಂಟ್ವಾಳ ತಾಲೂಕು ರೈತ ಸಂಘದ ಅಧ್ಯಕ್ಷ ಎಮ್ ಸುಬ್ರಹ್ಮಣ್ಯ ಭಟ್ ಅವರು ದೂರಿದ್ದಾರೆ.
ಮಂಗಳೂರು ಮಹಾನಗರ ಪಾಲಿಕೆ ಹಾಗೂ ಜಿಲ್ಲಾಡಳಿತ ರೈತರ ಹಿತ ಕಾಪಾಡುವಲ್ಲಿ ಬೇಜವಾಬ್ದಾರಿ, ನಿರ್ಲಕ್ಷ್ಯತನವನ್ನು ಪದೇ ಪದೇ ತೋರಿಸುತ್ತಿದ್ದು, ಡ್ಯಾಮ್‌ನ ಜಲಮಟ್ಟವನ್ನು ಕಾಯ್ದುಕೊಳ್ಳುವಂತೆ ಮತ್ತು ನದೀತೀರದ ಕೃಷಿಯನ್ನೇ ನಂಬಿ ಜೀವಿಸುವ ಅನ್ನದಾತನ ಬದುಕಿನಲ್ಲಿ ಚೆಲ್ಲಾಟವಾಡದೆ ರೈತರ ಹಿತವನ್ನು ಕಾಪಾಡುವಂತೆ ಜಿಲ್ಲಾಡಳಿತ ಹಾಗೂ ಮಂಗಳೂರುಮಹಾನಗರ ಪಾಲಿಕೆ ಎಚ್ಚರಿಕೆಯ ಕ್ರಮವನ್ನು ಕೈಗೊಳ್ಳುವಂತೆ ಮತ್ತು ಶಾಸಕರು, ಸಂಸದರು ಸಂಬಂಧಪಟ್ಟವರಿಗೆ ಗಮನ ಸೆಳೆಯುವಂತೆ ಬಂಟ್ವಾಳ ತಾಲೂಕು ರೈತ ಸಂಘದ ಅಧ್ಯಕ್ಷ ಎಂ. ಸುಬ್ರಹ್ಮಣ್ಯ ಭಟ್ ರೈತರ ಪರವಾಗಿ ಪ್ರಕಟಣೆಯ ಮೂಲಕ ಒತ್ತಾಯಿಸಿರುತ್ತಾರೆ.