ನಾಗುರಿ ದುರಂತ: ಪಿ.ವಿ. ಮೋಹನ್ ಸಂತಾಪ
Wednesday, July 1, 2026
ಮಂಗಳೂರು: ಮಂಗಳೂರಿನ ನಾಗುರಿ ಬಳಿ ಭಾರೀ ಮಳೆಗೆ ಮನೆ ಕುಸಿದು ಬಿದ್ದು, ಮಹಿಳೆ ಹಾಗೂ ಇಬ್ಬರು ಹೆಣ್ಣುಮಕ್ಕಳು ಸೇರಿದಂತೆ ಮೂವರು ಜೀವ ಕಳೆದುಕೊಂಡಿರುವ ಘಟನೆ ಅತ್ಯಂತ ಆಘಾತಕಾರಿ ಮತ್ತು ಮನನೊಂದಿಸುವಂತದ್ದಾಗಿದೆ. ಈ ಘೋರ ದುರಂತದಲ್ಲಿ ಪ್ರಾಣ ಕಳೆದುಕೊಂಡವರ ಕುಟುಂಬಕ್ಕೆ ನನ್ನ ಅತ್ಯಂತ ಆಳವಾದ ಸಂತಾಪಗಳು.
ಅಪಘಾತದಲ್ಲಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿರುವವರು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸುತ್ತೇನೆ. ಈ ಕಷ್ಟದ ಸಮಯದಲ್ಲಿ ಸಂತ್ರಸ್ತ ಕುಟುಂಬಕ್ಕೆ ನಾವು ಸಂಪೂರ್ಣವಾಗಿ ಜೊತೆಯಾಗಿದ್ದೇವೆ. ಮೃತರ ಕುಟುಂಬಕ್ಕೆ ಸರ್ಕಾರದಿಂದ ಸಿಗಬೇಕಾದ ಗರಿಷ್ಠ ತುರ್ತು ಪರಿಹಾರ ಹಾಗೂ ಅಗತ್ಯವಿರುವ ಎಲ್ಲಾ ನೆರವುಗಳನ್ನು ಆದಷ್ಟು ಬೇಗನೆ ಒದಗಿಸಲು ನಾನು ವೈಯಕ್ತಿಕವಾಗಿ ಸರ್ಕಾರದ ಮಟ್ಟದಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಲಿದ್ದೇನೆ.
ಮೃತರ ಆತ್ಮಕ್ಕೆ ಚಿರಶಾಂತಿ ಸಿಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದು ವಿಧಾನ ಪರಿಷತ್ ಸದಸ್ಯ ಪಿ.ವಿ. ಮೋಹನ್ ಸಂತಾಪ ಸೂಚಿಸಿದ್ದಾರೆ.