ಕಂಕನಾಡಿ ನಾಗೂರಿ ದುರಂತ: ಇಂತಹ ಘಟನೆಗಳು ಮರುಕಳಿಸದಂತೆ ತಕ್ಷಣ ಕ್ರಮ ಕೈಗೊಳ್ಳಿ-ಐವನ್ ಡಿಸೋಜಾ
ಮಂಗಳೂರು: ಮಂಗಳೂರು ನಗರದ ಕಂಕನಾಡಿ ಸಮೀಪದ ನಾಗೂರಿಯಲ್ಲಿ ಭಾರೀ ಮಳೆಯಿಂದ ತಡೆಗೋಡೆ ಕುಸಿದು ತಾಯಿ ಮತ್ತು ಇಬ್ಬರು ಮಕ್ಕಳು ಮೃತಪಟ್ಟಿರುವ ದುರಂತದ ಸುದ್ದಿ ತಿಳಿದು ತೀವ್ರ ದುಃಖವಾಗಿದೆ ಎಂದು ಕೆಪಿಸಿಸಿ ಉಪಾಧ್ಯಕ್ಷ ಹಾಗೂ ವಿಧಾನ ಪರಿಷತ್ ಸದಸ್ಯ ಐವನ್ ಡಿ’ಸೋಜಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮೃತರ ಆತ್ಮಕ್ಕೆ ಚಿರಶಾಂತಿ ದೊರೆಯಲಿ ಹಾಗೂ ಅವರ ಕುಟುಂಬದವರಿಗೆ ಈ ನೋವನ್ನು ಭರಿಸುವ ಶಕ್ತಿ ಸಿಗಲಿ ಎಂದು ಅವರು ಸಂತಾಪ ಸೂಚಿಸಿದ್ದಾರೆ.
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆಯೇ ಐವನ್ ಡಿ’ಸೋಜಾ ಅವರು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಮಾತನಾಡಿ, ರಕ್ಷಣಾ ಕಾರ್ಯಾಚರಣೆ, ಗಾಯಾಳುಗಳಿಗೆ ಅಗತ್ಯ ಚಿಕಿತ್ಸೆ ಹಾಗೂ ಸ್ಥಳದಲ್ಲಿ ಕೈಗೊಳ್ಳಬೇಕಾದ ಎಲ್ಲಾ ತುರ್ತು ಕ್ರಮಗಳನ್ನು ವಿಳಂಬವಿಲ್ಲದೆ ಜಾರಿಗೊಳಿಸುವಂತೆ ಸೂಚಿಸಿದರು.
ಅಲ್ಲದೆ, ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ಅವರೊಂದಿಗೂ ದೂರವಾಣಿ ಮೂಲಕ ಮಾತನಾಡಿ, ಘಟನಾ ಸ್ಥಳದಲ್ಲಿ ಅಗತ್ಯ ಕ್ರಮಗಳನ್ನು ತಕ್ಷಣ ಕೈಗೊಂಡು ಪರಿಸ್ಥಿತಿಯ ಮೇಲೆ ನಿರಂತರ ನಿಗಾ ವಹಿಸುವಂತೆ ಮನವಿ ಮಾಡಿದರು.
ಈ ವಿಷಯವನ್ನು ರಾಜ್ಯ ಸರ್ಕಾರದ ಗಮನಕ್ಕೂ ತರುವುದಾಗಿ ತಿಳಿಸಿರುವ ಐವನ್ ಡಿ’ಸೋಜಾ ಅವರು, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರೊಂದಿಗೂ ಚರ್ಚಿಸಿ, ಈ ದುರಂತದ ಕುರಿತು ಸರ್ಕಾರದ ಮಟ್ಟದಲ್ಲಿ ಅಗತ್ಯ ಕ್ರಮ ಕೈಗೊಳ್ಳುವಂತೆ ಮನವಿ ಮಾಡುವುದಾಗಿ ತಿಳಿಸಿದ್ದಾರೆ.
ಇದೇ ವೇಳೆ ಸಂಬಂಧಪಟ್ಟ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿರುವ ಐವನ್ ಡಿ’ಸೋಜಾ ಅವರು, ‘ಮಂಗಳೂರು ನಗರ ಹಾಗೂ ಸುತ್ತಮುತ್ತ ಭೂಕುಸಿತ, ತಡೆಗೋಡೆ ಕುಸಿತ ಮತ್ತು ಅಪಾಯ ಸಂಭವಿಸುವ ಸಾಧ್ಯತೆಯಿರುವ ಪ್ರದೇಶಗಳನ್ನು ತಕ್ಷಣ ಗುರುತಿಸಿ ಪರಿಶೀಲನೆ ನಡೆಸಬೇಕು. ಇಂತಹ ದುರ್ಘಟನೆಗಳು ಮತ್ತೆ ಎಲ್ಲಿಯೂ ನಡೆಯದಂತೆ ಮುನ್ನೆಚ್ಚರಿಕಾ ಕ್ರಮಗಳನ್ನು ಯುದ್ಧೋಪಾದಿಯಲ್ಲಿ ಕೈಗೊಳ್ಳಬೇಕು. ಸಾರ್ವಜನಿಕರ ಜೀವ ರಕ್ಷಣೆಗೆ ಮೊದಲ ಆದ್ಯತೆ ನೀಡಬೇಕು’ ಎಂದು ಸೂಚಿಸಿದ್ದಾರೆ.
ಮೂರು ಅಮೂಲ್ಯ ಜೀವಗಳನ್ನು ಕಳೆದುಕೊಂಡಿರುವ ಈ ದುರಂತ ಇಡೀ ಮಂಗಳೂರನ್ನು ದುಃಖದಲ್ಲಿ ಮುಳುಗಿಸಿದೆ. ಇಂತಹ ಘಟನೆಗಳು ಮತ್ತೆ ಮರುಕಳಿಸದಂತೆ ಆಡಳಿತ ವ್ಯವಸ್ಥೆ ಸಂಪೂರ್ಣ ಎಚ್ಚರಿಕೆಯಿಂದ ಕಾರ್ಯನಿರ್ವಹಿಸಬೇಕು ಎಂದು ಐವನ್ ಡಿ’ಸೋಜಾ ಹೇಳಿದ್ದಾರೆ.