ಐನೆಕಿದು-ಕೋಟೆ-ಬಾಳುಗೋಡು ರಸ್ತೆ ವಿವಾದ: ಸ್ಪಷ್ಟನೆ

ಐನೆಕಿದು-ಕೋಟೆ-ಬಾಳುಗೋಡು ರಸ್ತೆ ವಿವಾದ: ಸ್ಪಷ್ಟನೆ


ಸುಬ್ರಹ್ಮಣ್ಯ: ಸುಬ್ರಹ್ಮಣ್ಯ ಸಮೀಪದ ಐನೆ ಕಿದು-ಕೋಟೆ-ಬಾಳುಗೋಡು ರಸ್ತೆ ಕುರಿತು ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ವೀಡಿಯೊದಲ್ಲಿ ಮಾಡಲಾದ ಆರೋಪಗಳಿಗೆ ಸಂಬಂಧಿಸಿದಂತೆ ಬಿಜೆಪಿ ಮುಖಂಡರು ಪತ್ರಿಕಾಗೋಷ್ಠಿಯಲ್ಲಿ ಸ್ಪಷ್ಟನೆ ನೀಡಿದರು.

ಬಿಜೆಪಿ ಮುಖಂಡ ಕಿಶೋರ್ ಕುಮಾರ್ ಕೂಜು ಗೋಡು ಮಾತನಾಡಿ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಾರ್ವಜನಿಕ ಸಮಸ್ಯೆಗಳ ಬಗ್ಗೆ ಮಾತನಾಡುವುದು ಪ್ರತಿಯೊಬ್ಬ ನಾಗರಿಕನ ಹಕ್ಕಾಗಿದೆ. ಐನೆಕ್ಕಿದು-ಕೋಟೆ-ಬಾಳುಗೋಡು ರಸ್ತೆ ಸಮಸ್ಯೆಯನ್ನು ಸಾಮಾಜಿಕ ಜಾಲತಾಣಗಳ ಮೂಲಕ ಜನರಿಗೆ ತಲುಪಿಸಿರುವುದು ಸ್ವಾಗತಾರ್ಹವಾದರೂ, ಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯ ನಡೆದಿಲ್ಲ ಹಾಗೂ ಶಾಸಕಿ ಸ್ಪಂದನೆ ನೀಡುತ್ತಿಲ್ಲ ಎಂಬ ಹೇಳಿಕೆ ಬೇಸರ ಮೂಡಿಸಿದೆ ಎಂದು ಹೇಳಿದರು. ಕ್ಷೇತ್ರ ವ್ಯಾಪಕವಾಗಿದ್ದು, ಅನುದಾನದ ಕೊರತೆ ಕುರಿತು ಈ ಹಿಂದೆಯೇ ಸರ್ಕಾರದ ಮಟ್ಟದಲ್ಲಿ ಪ್ರಸ್ತಾಪಿಸಲಾಗಿದೆ ಎಂದರು.

ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ಮಾಜಿ ಸದಸ್ಯ ಗಿರೀಶ್ ಪೈಲಾಜೆ ಮಾತನಾಡಿ, ವಿಡಿಯೊದಲ್ಲಿ ಕಾಣಿಸಿಕೊಂಡಿರುವವರು ನಮ್ಮದೇ ಪಕ್ಷದ ಕಾರ್ಯಕರ್ತರಾಗಿದ್ದು, ಸಮಾಜದ ಪರವಾಗಿ ಧ್ವನಿ ಎತ್ತುವುದು ಉತ್ತಮ ಬೆಳವಣಿಗೆಯಾಗಿದೆ. ಆದರೆ ಕಳೆದ 20 ವರ್ಷಗಳಿಂದ ಯಾವುದೇ ಅಭಿವೃದ್ಧಿ ನಡೆದಿಲ್ಲ ಎಂಬ ಆರೋಪವನ್ನು ತೀವ್ರವಾಗಿ ಖಂಡಿಸಿದರು.

ಮಾಜಿ ಸಚಿವ ಅಂಗಾರ ಶಾಸಕರಾಗಿದ್ದ ಅವಧಿಯಲ್ಲಿ ಸುಮಾರು 4.5 ಕೋಟಿ ರೂ. ವೆಚ್ಚದಲ್ಲಿ ಮಾಲಿಯಾಳ-ಐನೆಕ್ಕಿ-ಹರಿಹರ ಸಂಪರ್ಕ ರಸ್ತೆಗೆ ಕಾಂಕ್ರೀಟ್ ಹಾಗೂ ಡಾಂಬರೀಕರಣ, ಐನೆಕ್ಕಿ ಕೋಟೆಬೈಲು ಪ್ರದೇಶದಲ್ಲಿ ಸುಮಾರು 30 ಲಕ್ಷ ವೆಚ್ಚದ ರಸ್ತೆ ಕಾಮಗಾರಿ, ಕತ್ತಿಮಜಲು ಕಿರು ಸೇತುವೆಗೆ 25 ಲಕ್ಷ ವೆಚ್ಚ, ಪ್ರಸ್ತುತ ಶಾಸಕಿ ಭಾಗೀರಥಿ ಮುರುಳ್ಯ ಅವರ ಅವಧಿಯಲ್ಲಿ ಸುಬ್ರಹ್ಮಣ್ಯ-ಅಜ್ಜಿಗುಡ್ಡೆ ಸಂಪರ್ಕ ರಸ್ತೆಯ ಮನಾಡು ಬಳಿ 20 ಲಕ್ಷ ವೆಚ್ಚದಲ್ಲಿ ಕಿರು ಸೇತುವೆ, ಕೂಜುಗೂಡು ಕಟ್ರಮನೆ ಬಳಿ 5 ಲಕ್ಷ ವೆಚ್ಚದಲ್ಲಿ ಸೇತುವೆ ಹಾಗೂ ಐನೆಕ್ಕಿ ನವಗ್ರಾಮ ಸಮುದಾಯ ಭವನಕ್ಕೆ 10 ಲಕ್ಷ ವೆಚ್ಚದಲ್ಲಿ ಮೇಲ್ಚಾವಣಿ, ಶೀಟ್ ಅಳವಡಿಕೆ ಮತ್ತು ನೆಲಹಾಸು ಕಾಮಗಾರಿಗಳು ನಡೆದಿವೆ ಎಂದು ವಿವರಿಸಿದರು.

ಇದಲ್ಲದೆ, ಬಹುಕಾಲದ ಬೇಡಿಕೆಯಾಗಿದ್ದ ಐನೆಕ್ಕಿ ಗ್ರಾಮದ ಕುಜಂಬಾರು-ಈಜಿನಡ್ಕ ಸಂಪರ್ಕ ರಸ್ತೆಯ ಸೇತುವೆ ನಿರ್ಮಾಣಕ್ಕೆ ಸುಮಾರು 60 ಲಕ್ಷ ಅನುದಾನ ಮಂಜೂರಾಗಿದ್ದು, ಮಳೆಗಾಲದ ಬಳಿಕ ಕಾಮಗಾರಿ ಆರಂಭವಾಗಲಿದೆ ಎಂದು ತಿಳಿಸಿದರು.

ಇಷ್ಟೆಲ್ಲಾ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಮಾಹಿತಿ ನೀಡದೆ ಆರೋಪ ಮಾಡುವುದು ಸರಿಯಲ್ಲ. ದಾಖಲೆಗಳೊಂದಿಗೆ ಎಲ್ಲ ಮಾಹಿತಿಯನ್ನು ಆರ್‌ಜೆ ತ್ರಿಶೂಲ್ ಅವರ ಮುಂದೆ ಇಡಲು ಸಿದ್ಧರಾಗಿದ್ದೇವೆ. ಅವರು ಸಾರ್ವಜನಿಕ ಚರ್ಚೆಗೆ ಬರಬೇಕು ಎಂದು ಗಿರೀಶ್ ಪೈಲಾಜೆ ಸವಾಲು ಹಾಕಿದರು.

ಪದ್ಮನಾಭ ಗುಂಡಡ್ಕ ಮಾತನಾಡಿ, ಸಾಮಾಜಿಕ ಜಾಲತಾಣದ ವಿಡಿಯೊದಲ್ಲಿ ಶಾಸಕರ ಬಗ್ಗೆ ವೈಯಕ್ತಿಕವಾಗಿ ಅವಮಾನಿಸುವ ರೀತಿಯ ಮಾತುಗಳು ಕೇಳಿಬಂದಿರುವುದು ಖಂಡನೀಯ. ಭಿನ್ನಾಭಿಪ್ರಾಯಗಳಿದ್ದರೂ ವೈಯಕ್ತಿಕ ನಿಂದನೆಗೆ ಅವಕಾಶ ಇರಬಾರದು ಎಂದರು.

ಜಯಪ್ರಕಾಶ್ ಕೂಜುಗೋಡು ಮಾತನಾಡಿ, ತಾವು ಇದೇ ರಸ್ತೆಯ ನಿತ್ಯದ ಪ್ರಯಾಣಿಕರಾಗಿದ್ದು, ಹಲವು ಬಾರಿ ರಸ್ತೆ ದುರಸ್ತಿ ಹಾಗೂ ಡಾಂಬರೀಕರಣ ಕಾಮಗಾರಿಗಳು ನಡೆದಿರುವುದನ್ನು ಕಂಡಿದ್ದೇನೆ. ಆದ್ದರಿಂದ ವಿಡಿಯೊದಲ್ಲಿ ಮಾಡಲಾದ ಕೆಲವು ಆರೋಪಗಳು ವಾಸ್ತವಕ್ಕೆ ದೂರವಾಗಿವೆ ಎಂದು ಹೇಳಿದರು.

ಕಿರಣ ಪೈಲಾಜೆ, ಪ್ರಸಾದ ಕೋಡಿಯಡ್ಕ,ಯಶವಂತ ಕೊಪ್ಪಳಗದ್ದೆ,ರಮೇಶ ಕೊನಡ್ಕ, ಹಾಗೂ ಲಕ್ಷ್ಮೀಶ ಇಜಿನಡ್ಕ ಇದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article