ಸಾಮೂಹಿಕ ಅತ್ಯಾಚಾರ: ನಾಲ್ವರಿಗೆ 20 ವರ್ಷಗಳ ಕಠಿಣ ಸಜೆ
ಪ್ರಕರಣದಲ್ಲಿ ಪ್ರಜ್ವಲ್ (33), ಅರುಣ್ ಅಮೀನ್ (34), ಆದಿತ್ಯ ಸಾಲ್ಯಾನ್ (28) ಹಾಗೂ ಅಬ್ದುಲ್ ರಿಯಾಜ್ (೪೦) ಶಿಕ್ಷೆಗೆ ಗುರಿಯಾದ ಅಪರಾಧಿಗಳಾಗಿದ್ದಾರೆ.
2018ರ ನವೆಂಬರ್ ೧೮ರಂದು ಯುವತಿಯೊಬ್ಬಳು ತನ್ನ ಗೆಳೆಯನೊಂದಿಗೆ ಬೀಚ್‌ಗೆ ತೆರಳಿದ್ದ ವೇಳೆ, ಮೂವರು ಅಪ್ರಾಪ್ತ ವಯಸ್ಸಿನ ಬಾಲಕರು ಸೇರಿದಂತೆ ಒಟ್ಟು ಏಳು ಮಂದಿ ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದರು. ಈ ಸಂಬಂಧ ಮಂಗಳೂರಿನ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣದ ತನಿಖೆಯನ್ನು ಮಹಿಳಾ ಠಾಣೆಯ ಅಂದಿನ ಪೊಲೀಸ್ ನಿರೀಕ್ಷಕಿ ಕಲಾವತಿ ಕೆ. ಹಾಗೂ ಅಂದಿನ ಎಸಿಪಿ ಮಂಜುನಾಥ ಶೆಟ್ಟಿ ಸಮಗ್ರವಾಗಿ ನಡೆಸಿದ್ದರು. ಬಳಿಕ ಅಂದಿನ ಎಸಿಪಿ ಶ್ರೀನಿವಾಸ ಗೌಡ ಆರ್. ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶ ಜಗದೀಶ ವಿ.ಎನ್., ಆರೋಪಿತರ ವಿರುದ್ಧದ ಆರೋಪಗಳು ಸಾಬೀತಾಗಿವೆ ಎಂದು ತೀರ್ಮಾನಿಸಿ, ನಾಲ್ವರಿಗೆ 20 ವರ್ಷಗಳ ಕಠಿನ ಕಾರಾಗೃಹ ಶಿಕ್ಷೆ ಹಾಗೂ ದಂಡ ವಿಧಿಸಿ ತೀರ್ಪು ಪ್ರಕಟಿಸಿದ್ದಾರೆ.
ಅಭಿಯೋಜನೆ ಪರವಾಗಿ ಸರ್ಕಾರಿ ಅಭಿಯೋಜಕಿ ಜ್ಯೋತಿ ಪ್ರಮೋದ್ ನಾಯಕ್ ಸಾಕ್ಷಿಗಳ ವಿಚಾರಣೆ ನಡೆಸಿ ವಾದ ಮಂಡಿಸಿದ್ದರು. ಇದೇ ಪ್ರಕರಣದಲ್ಲಿ ಆರೋಪಿಗಳಾಗಿರುವ ಮೂವರು ಅಪ್ರಾಪ್ತ ವಯಸ್ಸಿನ ಬಾಲಕರ ವಿರುದ್ಧದ ವಿಚಾರಣೆ ಪ್ರಸ್ತುತ ಬಾಲ ನ್ಯಾಯ ಮಂಡಳಿಯಲ್ಲಿ ಮುಂದುವರಿಯುತ್ತಿದೆ.