ಅಧಿಕಾರಿಗಳ ಗೈರುಹಾಜರಿ: ಮುಂಡಾಜೆ ಗ್ರಾಮ ಸಭೆ ರದ್ದು, ಗ್ರಾಮಸ್ಥರ ಧರಣಿ
ಗ್ರಾಮದ ವಿವಿಧ ಸಮಸ್ಯೆಗಳ ಕುರಿತು ಸಮಗ್ರ ಚರ್ಚೆ ನಡೆಸಲು ಅಧಿಕಾರಿಗಳು ಹಾಜರಿರದಿರುವುದನ್ನು ತೀವ್ರವಾಗಿ ಕುಳಿತು ಖಂಡಿಸಿ ಗ್ರಾಮಸ್ಥರು ಸಭೆಯ ಎದುರೇ ಕುಳಿತು ಧರಣಿ ನಡೆಸಿ, ಘೋಷಣೆಗಳನ್ನು ಕೂಗಿ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಆಡಳಿತಾಧಿಕಾರಿ ಡಾ. ರವಿಕುಮಾರ್ ಅವರ ಅಧ್ಯಕ್ಷತೆಯಲ್ಲಿ ಗ್ರಾಮಸಭೆ ಆರಂಭವಾಗುತ್ತಿದ್ದಂತೆಯೇ, ಗ್ರಾಮದ ರಸ್ತೆ, ಕುಡಿಯುವ ನೀರು, ಮೂಲಸೌಕರ್ಯ ಸೇರಿದಂತೆ ಹಲವು ಸಮಸ್ಯೆಗಳ ಬಗ್ಗೆ ಚರ್ಚಿಸಲು ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳು ಗೈರು ಹಾಜರಾಗಿರುವುದನ್ನು ಗ್ರಾಮಸ್ಥರು ಸಭೆಯಲ್ಲಿ ಪ್ರಶ್ನಿಸಿದರು. ಅಧಿಕಾರಿಗಳ ಅನುಪಸ್ಥಿತಿಯಲ್ಲಿ ಗ್ರಾಮಸಭೆ ನಡೆಸುವುದಕ್ಕೆ ಅರ್ಥವೇ ಇಲ್ಲ ಎಂದು ಸುಮಾರು 250ಕ್ಕೂ ಅಧಿಕ ಗ್ರಾಮಸ್ಥರು ಸಭೆಯನ್ನು ಬಹಿಷ್ಕರಿಸಿ, ಅಧಿಕಾರಿಗಳು ಹಾಜರಾಗುವವರೆಗೆ ಸಭೆ ನಡೆಸಬಾರದು ಎಂದು ಪಟ್ಟು ಹಿಡಿದರು.
ಗ್ರಾಮಸ್ಥರ ನಿರಂತರ ಪ್ರತಿಭಟನೆ ಮತ್ತು ಧರಣಿಯಿಂದ ಸಭೆ ಮುಂದುವರಿಸಲು ಸಾಧ್ಯವಾಗದೆ, ಅಧಿಕಾರಿಗಳು ಗ್ರಾಮಸಭೆಯನ್ನು ರದ್ದುಗೊಳಿಸಿ ಮುಂದೂಡಿದರು. ಶಿಶು ಅಭಿವೃದ್ಧಿ ಯೋಜನಾಧಿಕಾರಿ ಪ್ರಿಯಾ ಆಗ್ನೇಸ್ ಅವರು ನೋಡಲ್ ಅಧಿಕಾರಿಯಾಗಿ ಸಭೆಯಲ್ಲಿ ಭಾಗವಹಿಸಿದ್ದರು. ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಗಾಯತ್ರಿ ಉಪಸ್ಥಿತರಿದ್ದರು.
ವಾರ್ಡ್ ಸಭೆಯಲ್ಲೇ ಎಚ್ಚರಿಕೆ:
ಗ್ರಾಮಸಭೆಯಲ್ಲಿ ನಡೆದ ಪ್ರತಿಭಟನೆಗೆ ಮುನ್ನ ಮಂಗಳವಾರ ನಡೆದ ವಾರ್ಡ್ ಸಭೆಯಲ್ಲಿಯೇ ಗ್ರಾಮಸ್ಥರು ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದರು. ಗ್ರಾಮದ ಅಭಿವೃದ್ಧಿಗೆ ಸಂಬಂಧಿಸಿದ ರಸ್ತೆ, ಮೂಲಭೂತ ಸೌಕರ್ಯ ಹಾಗೂ ವಿವಿಧ ಇಲಾಖೆಗಳ ಸಮಸ್ಯೆಗಳ ಕುರಿತು ಚರ್ಚೆ ನಡೆಸಲು ಎಲ್ಲಾ ಇಲಾಖೆಗಳ ಅಧಿಕಾರಿಗಳು ಕಡ್ಡಾಯವಾಗಿ ಗ್ರಾಮಸಭೆಗೆ ಹಾಜರಾಗಬೇಕು. ಇಲ್ಲದಿದ್ದರೆ ಗ್ರಾಮಸಭೆ ನಡೆಯಲು ಅವಕಾಶ ನೀಡುವುದಿಲ್ಲ ಎಂದು ಸ್ಪಷ್ಟ ಎಚ್ಚರಿಕೆ ನೀಡಿದ್ದರು. ಆದರೂ ಸಂಬಂಧಪಟ್ಟ ಇಲಾಖೆಗಳ ಬಹುತೇಕ ಅಧಿಕಾರಿಗಳು ಗ್ರಾಮಸಭೆಗೆ ಗೈರು ಹಾಜರಾದ ಹಿನ್ನೆಲೆಯಲ್ಲಿ ಗ್ರಾಮಸ್ಥರು ತಮ್ಮ ಎಚ್ಚರಿಕೆಯನ್ನು ಕಾರ್ಯರೂಪಕ್ಕೆ ತಂದು ಸಭೆಯ ವಿರುದ್ಧ ಧರಣಿ ನಡೆಸಿದರು.
ಗ್ರಾಮಸಭೆ ರದ್ದಾದ ಹಿನ್ನೆಲೆಯಲ್ಲಿ ಗ್ರಾಮದ ಪ್ರಮುಖ ಸಮಸ್ಯೆಗಳ ಪರಿಹಾರ ಮತ್ತಷ್ಟು ವಿಳಂಬವಾಗುವ ಆತಂಕ ವ್ಯಕ್ತವಾಗಿದ್ದು, ಮುಂದಿನ ಸಭೆಗೆ ಎಲ್ಲಾ ಇಲಾಖೆಗಳ ಅಧಿಕಾರಿಗಳು ಕಡ್ಡಾಯವಾಗಿ ಹಾಜರಾಗುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.