ವ್ಯಸನಮುಕ್ತ ಸಮಾಜ ನಿರ್ಮಾಣಕ್ಕೆ ಯುವಜನತೆ ಸ್ಪೂರ್ತಿಯಾಗಬೇಕು: ಶಾಸಕ ಹರೀಶ್ ಪೂಂಜ
ಅವರು ಜು.12 ರಂದು ಬೆಳಗ್ಗೆ ಉಜಿರೆಯ ಎಸ್.ಡಿ.ಎಂ. ಕಾಲೇಜಿನ ಆವರಣದಲ್ಲಿ, ಮಳೆಗಾಲದ ಅತಿದೊಡ್ಡ ಫಿಟ್ನೆಸ್ ಆಂದೋಲನವಾಗಿ ವಿವಿಧ ಸಂಘಟನೆಗಳ ಸಹಯೋಗದೊಂದಿಗೆ ‘ರೈನಥಾನ್’ ಮಳೆಯೊಂದಿಗೆ ಓಟದ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ನಮ್ಮ ಜೀವನಶೈಲಿ ಹಾಗೂ ಮಾದಕವಸ್ತು ಮುಕ್ತ ಸಮಾಜ ನಿರ್ಮಾಣದ ಸಂದೇಶವನ್ನು ಸಮಾಜದ ಪ್ರತಿಯೊಬ್ಬರಿಗೂ ತಲುಪಿಸುವ ಉದ್ದೇಶ ಹೊಂದಿ ಸಾವಿರಾರು ಜನರನ್ನು ಒಂದೇ ವೇದಿಕೆಯಲ್ಲಿ ಒಗ್ಗೂಡಿಸುವ ಮೂಲಕ ಆರೋಗ್ಯಕರ ಬದುಕಿನತ್ತ ಜನರನ್ನು ಪ್ರೇರೇಪಿಸುವುದರ ಜೊತೆಗೆ, ವ್ಯಸನಮುಕ್ತ ಸಮಾಜ ನಿರ್ಮಾಣಕ್ಕೆ ಸಾಮೂಹಿಕ ಸಂಕಲ್ಪ ಮಾಡುವ ಪ್ರಯತ್ನ ಶ್ಲಾಘನೀಯವೆಂದು ಅಭಿನಂದಿಸಿದರು.
ಅಂತಾರಾಷ್ಟ್ರೀಯ ರೋಟರಿ ಡಿಸ್ಟ್ರಿಕ್ಟ್ ಗವರ್ನರ್ ಸತೀಶ್ ಬೋಳಾರ್ ಎಲ್ಲರ ಸಹಕಾರದಿಂದ ನಡೆಯುತ್ತಿರುವ ಅರ್ಥಪೂರ್ಣ ಕಾರ್ಯಕ್ರಮವೆಂದು ನುಡಿದು ಸಮಾಜದಲ್ಲಿ ಮಾದಕ ವ್ಯಸನ ನಿರ್ಮೂಲನೆಯಾಗಬೇಕೆಂದರು.
ಎಸ್‌ಡಿಎಂ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಡಾ. ಸತೀಶ್ಚಂದ್ರ ಎಸ್. ಮಾತನಾಡಿ, ಯುವಜನರಲ್ಲಿ ಆರೋಗ್ಯದ ಬಗೆಗೆ ಜಾಗೃತಿ ಮೂಡಿಸಿ ವ್ಯಸನಮುಕ್ತ ಸಮಾಜ ನಿರ್ಮಾಣಕ್ಕೆ ಸ್ಪೂರ್ತಿಯಾಗಬಲ್ಲ ಆಕರ್ಷಣೀಯ ಕಾರ್ಯಕ್ರಮ ಆಯೋಜಿಸಿದ ಸಂಘಟಕರಿಗೆ ಅಭಿನಂದನೆಗಳು ಎಂದರು.
ಅಡಿಷನಲ್ ಎಸ್ಪಿ ಅನಿಲ್ ಕುಮಾರ್ ಕೆ. ಯುವಜನತೆಗೆ ಮಾದಕ ವಸ್ತು ಸೇವನೆ ವಿರುದ್ಧ ಪ್ರತಿಜ್ನಾವಿಧಿ ಬೋಧಿಸಿದರು.
ವಿವಿಧ ವಯೋಮಾನದವರಿಗಾಗಿ 4 ಕಿ.ಮೀ ಹಾಗೂ 8 ಕಿ.ಮೀ ವಿಭಾಗಗಳಲ್ಲಿ ಸುಮಾರು 5 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು. ಮಹಿಳೆಯರು ಹಾಗೂ ಹಿರಿಯ ನಾಗರಿಕರು ಸ್ಪರ್ಧೆಯಲ್ಲಿ ಉತ್ಸಾಹದಿಂದ ಪಾಲ್ಗೊಂಡು ವಿಶೇಷ ಅನುಭವ ಆಸ್ವಾದಿಸಿದರು. ಕಾರ್ಯಕ್ರಮದ ಮಧ್ಯೆ ಡಿಡಿಎಫ್ ತಂಡದವರಿಂದ ಸಂಗೀತ ಮನರಂಜನೆ ಹಾಗು ಡಾನ್ಸ್ ಕಾರ್ಯಕ್ರಮ ಸ್ಪರ್ದಿಗಳನ್ನು ಉತ್ತೇಜಿಸಿತ್ತು. ನಿಧನರಾದ ಸಂಗೀತ ಗಾಯಕಿ ಎಸ್ ಜಾನಕಿ ಅವರ ಆತ್ಮಕ್ಕೆ ಶಾಂತಿ ಕೋರಿ ಸಮಾರಂಭದಲ್ಲಿ ಮೌನ ಪ್ರಾರ್ಥನೆ ಸಲ್ಲಿಸಲಾಯಿತು.
ಬೆಳ್ತಂಗಡಿ ರೋಟರಿ ಕ್ಲಬ್ ಅಧ್ಯಕ್ಷ ಶ್ರೀಧರ್ ಕೆ.ವಿ, ಕಾರ್ಯದರ್ಶಿ ರಾಘವೇಂದ್ರ ಪಿದಮೇಲೆ, ಬೆಂಗಳೂರು ಇಂದಿರಾನಗರ ರೋಟರಿ ಕ್ಲಬ್ಬಿನ ಜಗದೀಶ್ ಮುಗಳಿ,ಪೂರ್ವಧ್ಯಕ್ಷೆ ಸುಪ್ರಿಯಾ ಕಂದಾರಿ, ಬೆನಕ ಆಸ್ಪತ್ರೆಯ ಡಾ. ಗೋಪಾಲಕೃಷ್ಣ, ಎಸ್‌ಡಿಎಂ ಕಾಲೇಜು ಪ್ರಾಚಾರ್ಯ ಪ್ರೊ. ವಿಶ್ವನಾಥ ಪಿ., ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರ ಶರತ್ ಕೃಷ್ಣ ಪಡುವೆಟ್ನಾಯ, ಡಿವೈಎಸ್ಪಿ ರೋಹಿಣಿ, ಅಡಿಷನಲ್ ಎಸ್ಪಿ ಅನಿಲ್ ಕುಮಾರ್ ಕೆ., ಎಕ್ಸೆಲ್ ಶಿಕ್ಷಣ ಸಂಸ್ಥೆ ಅಧ್ಯಕ್ಷ ಸುಮಂತ್ ಕುಮಾರ್ ಜೈನ್, ಡಾ. ಶಶಿಧರ ಡೋಂಗ್ರೆ, ಮಾಜಿ ವಿ.ಪ. ಸದಸ್ಯ ಪ್ರತಾಪಸಿಂಹ ನಾಯಕ್, ಎಸ್‌ಡಿಎಂ ಆಸ್ಪತ್ರೆಯ ಜನಾರ್ದನ ಎಂ., ರೋಟರಿ ಕ್ಲಬ್ ನಿಕಟ ಪೂರ್ವ ಅಧ್ಯಕ್ಷ ಪ್ರಕಾಶ್ ಪ್ರಭು, ಉದ್ಯಮಿ ಕಿರಣಚಂದ್ರ ಪುಷ್ಪಗಿರಿ, ರಕ್ಷಿತ್ ಶಿವರಾಂ, ಪೀತಾಂಬರ ಹೆರಾಜೆ, ಪೂರನ್ ವರ್ಮಾ, ಮೋಹನ ಕುಮಾರ್, ರಾಜೇಶ್ ಪೈ, ಅನಂತ ಭಟ್ ಮಚ್ಚಿಮಲೆ, ಮೇ. ಜ. ಎಂ.ವಿ. ಭಟ್, ಸೋನಿಯಾ ವರ್ಮಾ, ಪ್ರಮೋದ್ ಕುಮಾರ್, ರಾಘ್ನೇಷ್, ಡಿಡಿಎಫ್‌ನ ರವಿ ಚಕ್ಕಿತ್ತಾಯ, ಎಸ್‌ಡಿಎಂ ಕ್ರೀಡಾ ಸಂಘದ ರಮೇಶ್ ಮತ್ತಿತರರು ಉಪಸ್ಥಿತರಿದ್ದರು.