ಕಾಡಾನೆ ದಾಳಿ: ಕೃಷಿ ನಾಶ
Saturday, July 18, 2026
ಉಜಿರೆ: ಪುದುವೆಟ್ಟು ಗ್ರಾಮದ ಮೇಲಿನಡ್ಕ ಪರಿಸರದಲ್ಲಿ ಕಾಡಾನೆ ನಿರಂತರ ದಾಳಿ ನಡೆಸಿ ಬಾಳೆ ಗಿಡ, ಅಡಕೆ ಗಿಡ, ತೆಂಗಿನ ಗಿಡ, ಕೃಷಿಯನ್ನು ನಾಶಪಡಿಸಿ ದಾಂಧಲೆ ನಡೆಸುತ್ತಿದೆ. ದಡ್ ಹಿತ್ತಿಲು ಗಿರಿಧರ್ ರಾವ್, ಪಡ್ಡಡ್ಕ ಸುಬ್ರಾಯ ಭಟ್, ಬೆಳ್ಳಿಯಪ್ಪ ಗೌಡ, ಸೂರ್ಯಕಾಂತ ಭಟ್ ಮೊದಲಾದವರ ತೋಟಕ್ಕೆ ನುಗ್ಗಿ ಬಾಳೆ,ತೆಂಗು, ಅಡಕೆ ಕೃಷಿಗಳನ್ನು ಪುಡಿಗೈದಿವೆ. ಕಳೆದ ಮಂಗಳವಾರ ರಾತ್ರಿ ಹಾಗು ಬುಧವಾರ ಬೆಳಗಿನ ಜಾವ ಒಂದಕ್ಕಿಂತ ಹೆಚ್ಚು ಆನೆಗಳು ದಾಳಿ ನಡೆಸಿವೆ ಎಂದು ಸ್ಥಳೀಯರು ಹೇಳುತ್ತಾರೆ.
ಮೇಲಿನಡ್ಕ ಪರಿಸರದಲ್ಲಿ ಕಳೆದ 15 ದಿನಗಳಿಂದಲೂ ಆನೆಗಳು ಅಲ್ಲಲ್ಲಿ ಸುತ್ತಾಡಿದ ಕುರುಹು ದೊರೆಯುತ್ತಿದೆ. ಸುರಳ್ಳಿ, ಮುಳಿಮಜಲು ಪ್ರದೇಶದಲ್ಲೂ ಆನೆಗಳ ಹಾವಳಿ ಅಧಿಕವಾಗಿದೆ. ನಿರಂತರ ಆನೆಗಳು ದಾಳಿ ನಡೆಸುತ್ತಿದ್ದರೂ ಅರಣ್ಯ ಇಲಾಖೆ ಯಾವುದೇ ಕ್ರಮ ಕೈಗೊಳ್ಳದಿರುವುದು ವಿಷಾದಕರ. ಪರಿಸರದ ಗುಡಿಸಲುಗಳಲ್ಲಿ ವಾಸಿಸುವ ಕೃಷಿಕರು ಆನೆಗಳ ದಾಳಿಯಿಂದ ಭಯಭೀತಿಯಿಂದ ಆತಂಕಿತರಾಗಿದ್ದಾರೆ.
ರೈತರ ಬೆಳೆ ಹಾನಿಗೊಳಿಸುತ್ತಿರುವ ಆನೆಗಳ ವಿಪರೀತ ಹಾವಳಿಯಿಂದ ಜನರು ಕಂಗಾಲಾಗಿದ್ದಾರೆ. ದಲಿತರ ಕಾಲೋನಿ ಪ್ರದೇಶದಲ್ಲಿ ಆನೆಗಳು ಬಾಳೆ ಗಿಡಗಳನ್ನು ನಾಶಗೈದು ಹಲಸಿನ ಹಣ್ಣು ತಿಂದು ಹೋದ ಕುರುಹಿದೆ. ಆನೆಗಳ ನಿರಂತರ ಹಾವಳಿಗೆ ಅರಣ್ಯ ಇಲಾಖೆ ತಕ್ಷಣ ಸೂಕ್ತ ಕ್ರಮ ಗೈಗೊಳ್ಳಬೇಕೆಂದು ನಾಗ ರಿಕರು ಆಗ್ರಹ ವ್ಯಕ್ತಪಡಿಸುತ್ತಿದ್ದಾರೆ.