ವಸ್ತುನಿಷ್ಠ ವರದಿಯಿಂದ ಮಾತ್ರ ಸಮಾಜ ಪತ್ರಕರ್ತರನ್ನು ಗುರುತಿಸಿ, ಗೌರವಿಸುತ್ತದೆ: ಶಾಸಕ ಹರೀಶ್ ಪೂಂಜ
ಅವರು ಜು.4 ರಂದು ಬೆಳ್ತಂಗಡಿ ಲಯನ್ಸ್ ಸೇವಾ ಭವನದಲ್ಲಿ ಬೆಳ್ತಂಗಡಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ಮತ್ತು ಬೆಳ್ತಂಗಡಿ ತಾಲೂಕು ಪತ್ರಕರ್ತರ ಸಂಘದ ವತಿಯಿಂದ ನಡೆದ ಪತ್ರಿಕಾ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು.
ಯಾವುದೇ ಸಾಮಾಜಿಕ ಮಾಧ್ಯಮಗಳ ವರದಿಗಿಂತ ಪತ್ರಿಕಾ ಮಾಧ್ಯಮದ ಸತ್ಯದ ವರದಿಗಳನ್ನು ಜನರು ನಂಬಿ, ಸ್ಪಂದಿಸುತ್ತಾರೆ. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿಯೂ ಸಮಾಜಕ್ಕೆ ಸ್ಪಂದಿಸಿದರೆ ಮಾತ್ರ ಪರಿವರ್ತನೆ ಸಾಧ್ಯ ಎಂದರು.
ಪತ್ರಕರ್ತರ ಸಮಸ್ಯೆ ಮತ್ತು ಬವಣೆಗಳನ್ನು ವಿಧಾನಸಭೆಯಲ್ಲಿ ಪ್ರಸ್ತಾಪಿಸುತ್ತೇನೆ ಎಂದ ಅವರು ತಾಲೂಕು ಸಂಘದ ಕಟ್ಟಡದ ಜಾಗ ಖರೀದಿಗೆ ವೈಯಕ್ತಿಕವಾಗಿ 2 ಲಕ್ಷ ರೂ. ಹಾಗೂ ಕಟ್ಟಡ ನಿರ್ಮಾಣಕ್ಕೆ ಶಾಸಕರ ನಿಧಿಯಿಂದ 20 ಲಕ್ಷ ರೂ. ನೀಡುವ ಭರವಸೆ ನೀಡಿ, ವಿವಿಧ ಕಂಪನಿಗಳ ಸಿ.ಎಸ್.ಆರ್. ನಿಧಿಗಳನ್ನು ಒದಗಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಭರವಸೆ ನೀಡಿದರು.
ಮುಖ್ಯ ಅತಿಥಿ ಮೆಸ್ಕಾಂ ಅಧ್ಯಕ್ಷ ಹರೀಶ್ ಕುಮಾರ್ ಮಾತನಾಡಿ, ಸಂಘದ ಜಾಗಕ್ಕೆ 1 ಲಕ್ಷ ರೂ. ಹಾಗೂ ಪೀಠೋಪಕರಣಗಳ ಖರೀದಿಗೆ 1 ಲಕ್ಷ ರೂ. ನೀಡುವುದಾಗಿ ಆಶ್ವಾಸನೆ ನೀಡಿದರು.
ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಪುಷ್ಪರಾಜ್ ಜೈನ್ ಮಾತನಾಡಿ, ಸಮಾಜದ ಸಮಸ್ಯೆಗಳಿಗೆ ಸ್ಪಂದಿಸುವುದು ಪತ್ರಕರ್ತರ ಕೆಲಸ. ಸರ್ಕಾರ ಪತ್ರಕರ್ತರ ಸಮಸ್ಯೆ, ಬೇಡಿಕೆಗಳಿಗೆ ಸ್ಪಂದಿಸಬೇಕು. ಪತ್ರಕರ್ತರು ಮತ್ತು ಅವರ ಕುಟುಂಬದ ಸದಸ್ಯರಿಗೆ ಸಂಪೂರ್ಣ ಆರೋಗ್ಯ ತಪಾಸಣೆಯನ್ನು ಪ್ರತಿ ತಿಂಗಳು ಜಿಲ್ಲಾ ಸಂಘದಿಂದ ನಿರಂತರವಾಗಿ ನಡೆಸಲಾಗುತ್ತಿದೆ ಎಂದರು.
ದಾಂಡೇಲಿ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಸಂದೇಶ್ ಜೈನ್ ಉಪನ್ಯಾಸ ನೀಡಿದರು. ಮಂಜುವಾಣಿ ಮಾಸಪತ್ರಿಕೆಯ ಸಂಪಾದಕ ಭಾಸ್ಕರ್ ಹೆಗಡೆ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಶ್ರೀನಿವಾಸ ನಾಯಕ್ ಇಂದಾಜೆ, ಜಿಲ್ಲಾ ಸಮಿತಿ ಸದಸ್ಯ ಭುವನೇಶ್ವರ ಜಿ., ಪತ್ರಕರ್ತರ ಸಂಘದ ಅಧ್ಯಕ್ಷ ಪುಷ್ಪರಾಜ್ ಶೆಟ್ಟಿ ಉಪಸ್ಥಿತರಿದ್ದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ತುಕಾರಾಮ್ ಬಿ. ವಹಿಸಿ ಪತ್ರಿಕಾ ಭವನ ಕಟ್ಟಡ ನಿರ್ಮಾಣಕ್ಕೆ ಎಲ್ಲರ ಸಹಕಾರ ಕೋರಿದರು.
ಕಾರ್ಯಕ್ರಮದಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ತಾಲೂಕಿನ ಸರ್ಕಾರಿ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಅತಿ ಹೆಚ್ಚು ಅಂಕ ಪಡೆದ ವೇಣೂರು ಪ್ರೌಢಶಾಲೆಯ ಸಮೃದ್ಧಿ ಜೈನ್, ಗುರುವಾಯನಕೆರೆ ಪ್ರೌಢ ಶಾಲೆಯ ಮೊಹಮ್ಮದ್ ಶಹಜಾದ್ ಹಾಗೂ ಸವಣಾಲು ಪ್ರೌಢಶಾಲೆಯ ಅಪೇಕ್ಷಾ ಅವರನ್ನು ಸನ್ಮಾನಿಸಿ ಪುರಸ್ಕರಿಸಲಾಯಿತು. ಉಜಿರೆ ಎಸ್.ಡಿ.ಎಂ. ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥರಾಗಿ ನೇಮಕಗೊಂಡ ಸುನಿಲ್ ಹೆಗ್ಡೆ ಅವರನ್ನು ಗೌರವಿಸಲಾಯಿತು.
ನಾಲ್ಕು ಅಸಹಾಯಕ ಕುಟುಂಬಗಳಿಗೆ ‘ದಿತಿ ಸಾಂತ್ವನ ನಿಧಿ’ಯನ್ನು ಶಾಸಕರು ಹಸ್ತಾಂತರಿಸಿದರು. ಪ್ರಧಾನ ಕಾರ್ಯದರ್ಶಿ ಮನೋಹರ ಬಳಂಜ ಸ್ವಾಗತಿಸಿ, ಪ್ರಸ್ತಾವಿಸಿದರು. ಕಾರ್ಯದರ್ಶಿ ಶಿಬಿ ಧರ್ಮಸ್ಥಳ ವಂದಿಸಿ, ಸದಸ್ಯ ಅಶ್ರಫ್ ಆಲಿಕುಂಞ ಕಾರ್ಯಕ್ರಮ ನಿರ್ವಹಿಸಿದರು.