ಎಸ್‌ಐಆರ್ ಪ್ರಕ್ರಿಯೆ ರಾಜಕೀಯ ಒತ್ತಡದಲ್ಲಿ ನಡೆಯುತ್ತಿದೆ: ಮೋಹನ್ ರಾಜ್ ಕೆ.ಆರ್. ಎಚ್ಚರಿಕೆ

ಎಸ್‌ಐಆರ್ ಪ್ರಕ್ರಿಯೆ ರಾಜಕೀಯ ಒತ್ತಡದಲ್ಲಿ ನಡೆಯುತ್ತಿದೆ: ಮೋಹನ್ ರಾಜ್ ಕೆ.ಆರ್. ಎಚ್ಚರಿಕೆ

ಉಳ್ಳಾಲ: ಮಂಗಳೂರು ವಿದಾನಸಭಾ ಕ್ಷೇತ್ರದಲ್ಲಿ ಎಸ್‌ಐಆರ್ ಪ್ರಕ್ರಿಯೆಯು ಸಂಪೂರ್ಣ ರಾಜಕೀಯ ಒತ್ತಡದಲ್ಲಿ ನಡೆಯುತ್ತಿದೆ. ಕಾಂಗ್ರೆಸ್ ಕಾರ್ಯಕರ್ತರು ಬಿಎಲ್‌ಒಗಳ ಮೇಲೆ ಒತ್ತಡ ಹಾಕುತ್ತಿದ್ದಾರೆ. ಜಿಲ್ಲಾಧಿಕಾರಿಗಳು ಯಾರ ಒತ್ತಡಕ್ಕೂ ಮಣಿಯದೆ ಕ್ಷೇತ್ರದಲ್ಲಿ ನಡೆದಿರುವ ಲೋಪ ದೋಷಗಳನ್ನು ತಕ್ಷಣವೇ ಸರಿಪಡಿಸದಿದ್ದಲ್ಲಿ ತೀವ್ರವಾದ ಹೋರಾಟ ನಡೆಸಲಿದ್ದೇವೆ ಎಂದು ಬಿಜೆಪಿ ಮಂಗಳೂರು ವಿಧಾನಸಭಾ ಕ್ಷೇತ್ರದ ಪ್ರಧಾನ ಕಾರ್ಯದರ್ಶಿ ಮೋಹನ್ ರಾಜ್  ಕೆ.ಆರ್. ಎಚ್ಚರಿಕೆ ನೀಡಿದರು.

ತೊಕ್ಕೊಟ್ಟಿನ ಉಳ್ಳಾಲ ಪ್ರೆಸ್‌ಕ್ಲಬ್‌ನಲ್ಲಿ ಸೋಮವಾರ ನಡೆದ ಪತ್ರಿಕಾಗೋಷ್ಟಿಯನ್ನುದ್ಧೇಶಿಸಿ ಅವರು ಮಾತನಾಡಿದರು.

ಈಗಾಗಲೇ ಕ್ಷೇತ್ರ ವ್ಯಾಪ್ತಿಯ ಅತೀ ಸೂಕ್ಷ್ಮ ಬೂತ್‌ಗಳನ್ನು ಗುರುತಿಸಿದ್ದು ಅಲ್ಲಿ ಒಂದು ಸಮುದಾಯಕ್ಕೆ ಸೇರಿದ ಬಹಳಷ್ಟು ಜನರು ಸೇರುವುದರಿಂದ ಬಿಗಿ ಪೊಲೀಸ್ ಭದ್ರತೆ ಕೊಟ್ಟು ಎಸ್‌ಐಆರ್ ಫಾರಂಗಳನ್ನು ತುಂಬುವ ಪ್ರಕ್ರಿಯೆ ನಡೆಸಬೇಕಿದೆ.ಕೆಲ ಕಡೆಗಳಲ್ಲಿ ಸಾಮೂಹಿಕವಾಗಿ ಎಸ್‌ಐಆರ್ ಫಾರಂ ಭರ್ತಿಗೊಳಿಸುವ ಪ್ರಕ್ರಿಯೆ ನಡೆಯುತ್ತಿದ್ದು, ಜಿಲ್ಲಾಧಿಕಾರಿಗಳು ಕೂಡಲೇ ಅಂತಹ ಜಾಗಗಳಿಗೆ ಪೊಲೀಸ್ ಭದ್ರತೆ ನೀಡಿ ಚುನಾವಣಾ ಆಯೋಗದ ನೀತಿ ನಿಯಮಗಳನ್ನು ಅನುಷ್ಠಾನಗೊಳಿಸಬೇಕಿದೆ ಎಂದು ಹೇಳಿದರು.

ಕೆಲ ಕಡೆಗಳಲ್ಲಿ ಬಿಎಲ್‌ಒಗಳ ವರ್ತನೆಯೂ ಅನುಮಾನಸ್ಪದವಾಗಿದ್ದು, ಇದರಿಂದ ಕೇಂದ್ರ ಸರಕಾರವು ನಡೆಸುತ್ತಿರುವ ಎಸ್‌ಐಆರ್ ಪ್ರಕ್ರಿಯೆಯ ಉದ್ಧೇಶ ನೆರವೇರಲು ಸಾಧ್ಯವಿಲ್ಲ. ಮಂಜನಾಡಿ, ಬೆಳ್ಮ, ಪುದು ಮೊದಲಾದ ಕಡೆಗಳಲ್ಲಿ ವಾಸ್ತವ್ಯ ದೃಢೀಕರಣ ಪತ್ರ ನೀಡುವಿಕೆಯಲ್ಲೂ ಅಕ್ರಮ ನಡೆಯುತ್ತಿದೆ. ಹೊರ ರಾಜ್ಯಗಳಿಂದ ವಲಸೆ ಬಂದವರನ್ನು ದುರ್ಬಳಕೆ ಮಾಡಿ ಅವರಿಗೆ ಅಕ್ರಮವಾಗಿ ವಾಸ್ತವ್ಯ ದೃಢೀಕರಣ ಪತ್ರಗಳನ್ನು ನೀಡಲಾಗುತ್ತಿದೆ ಎಂದು ಆರೋಪಿಸಿದರು.

ಬಿಜೆಪಿ ಮಂಗಳೂರು ಮಂಡಲದ ಅಧ್ಯಕ್ಷ ಜಗದೀಶ್ ಆಳ್ವ ಕುವೆತ್ತ ಬೈಲ್ ಮಾತನಾಡಿ, ಬಿಎಲ್‌ಒಗಳು ಕೆಲವು ಕಡೆ ಪ್ರಾರ್ಥನಾ ಮಂದಿರಗಳಲ್ಲಿ ಮತದಾರರನ್ನ ಗುಂಪುಗೂಡಿಸಿ ಫಾರಂ ಭರ್ತಿ ಮಾಡುತ್ತಿರುವ ಕುರಿತಂತೆ ದಾಖಲೆ ಸಮೇತ ಆರೋಪ ಬಂದಿದೆ. ಜವಬ್ದಾರಿಯುತ ಸ್ಥಾನದಲ್ಲಿರುವ ಬಿಎಲ್‌ಒಗಳು ಯಾವುದೇ ಕಾರಣಕ್ಕೂ ಅಧಿಕಾರಿಗಳು ಹಾಗೂ ರಾಜಕೀಯ ಒತ್ತಡಕ್ಕೆ ಮಣಿದು ನ್ಯಾಯ ಸಮ್ಮತವಲ್ಲದ ಕೆಲಸ ಮಾಡಬಾರದು. ಹಿಂದಿನ ಮತದಾರರ ಪಟ್ಟಿಯಲ್ಲಿ ಬಹಳಷ್ಟು ಲೋಪಗಳಿದ್ದು ಈ ಬಗ್ಗೆ ಮಂಗಳೂರು ವಿದಾನಸಭಾ ಕ್ಷೇತ್ರದ ಬಿಎಲ್‌ಒಗಳಿಗೆ ಮೇಲಾಧಿಕಾರಿಗಳು ಸೂಕ್ತ ಮಾಹಿತಿ ನೀಡಬೇಕು. ಅಕ್ರಮ ಎಸಗಿದವರ ವಿರುದ್ಧ ಕಠಿಣ ಕ್ರಮ ಜರಗಬೇಕೆಂದು ಆಗ್ರಹಿಸಿದರು. 

ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾ ಮುಖಂಡರಾದ ಕೆ. ರವೀಂದ್ರ ಶೆಟ್ಟಿ ಉಳಿದೊಟ್ಟು, ಜೀವನ್ ಕುಮಾರ್ ತೊಕ್ಕೊಟ್ಟು, ಧನಲಕ್ಷ್ಮಿ ಗಟ್ಟಿ, ಪೂಜಾ ಪೈ ಹಾಗೂ ಜಯಶ್ರೀ ಕರ್ಕೇರ ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article