ಕೊಣಾಜೆ ಮಂಗಳೂರು ವಿ.ವಿ ಎಂಬಿಎ-ಎಂಸಿಎ ವಿದ್ಯಾರ್ಥಿಗಳಿಂದ ಆಡಳಿತ ಕಚೇರಿಗೆ ಮುತ್ತಿಗೆ

ಕೊಣಾಜೆ ಮಂಗಳೂರು ವಿ.ವಿ ಎಂಬಿಎ-ಎಂಸಿಎ ವಿದ್ಯಾರ್ಥಿಗಳಿಂದ ಆಡಳಿತ ಕಚೇರಿಗೆ ಮುತ್ತಿಗೆ


ಉಳ್ಳಾಲ: ನೂತನ ಕುಲಸಚಿವರ ಮೇಲೆ ಗೌರವವಿದೆ, ಸಲ್ಲಿಸಿರುವ ಮನವಿಗೆ ಒಂದು ವಾರದ ಅವಧಿಯನ್ನು ಕೇಳಿದ್ದಾರೆ. ಮುಂದಿನ ದಿನಗಳಲ್ಲಿ ಮನವಿಗೆ ಸರಿಯಾದ ಪ್ರತಿಕ್ರಿಯೆ ಸಿಗದೇ ಇದ್ದಲ್ಲಿ ಶಾಂತಿಯುತ ಪ್ರತಿಭಟನೆ ನಿಲ್ಲಿಸಿ ಯುವಕ-ಯುವತಿಯರ ರೀತಿಯಲ್ಲಿ ಪ್ರತಿಭಟನೆ ನಡೆಸುವುದು ಅನಿವಾರ್ಯ ಎಂದು ವಿದ್ಯಾರ್ಥಿ ನಾಯಕ ಮಂಜುನಾಥ್ ಮ್ಯಾಗೇರಿ ಹೇಳಿದ್ದಾರೆ.

ಕೊಣಾಜೆ ಮಂಗಳೂರು ವಿಶ್ವವಿದ್ಯಾನಿಲಯದ ಎಂಬಿಎ-ಎಂಸಿಎ ವಿದ್ಯಾರ್ಥಿಗಳ ಹಾಸ್ಟೆಲ್ ಶುಲ್ಕ, ಎಸ್‌ಸಿ-ಎಸ್‌ಟಿ ವಿದ್ಯಾರ್ಥಿಗಳ ಶುಲ್ಕ, ದಾಖಲಾತಿಗಳನ್ನು ಹಿಡಿದಿಟ್ಟುಕೊಳ್ಳುವಿಕೆ ವಿರುದ್ಧ ವಿದ್ಯಾರ್ಥಿಗಳು ಕೊಣಾಜೆ ಮಂಗಳೂರು ವಿ.ವಿ. ಆಡಳಿತ ಕಚೇರಿ ಎದುರು ಸೋಮವಾರ ನಡೆಸಿದ ಪ್ರತಿಭಟನೆ ಉದ್ದೇಶಿಸಿ ಮಾತನಾಡಿದರು.

ಎಂಬಿಎ ಎಂಸಿಎ ವಿದ್ಯಾರ್ಥಿಗಳ ಶೈಕ್ಷಣಿಕ ವರ್ಷ ಎರಡು ತಿಂಗಳು ತಡವಾಗಿ ಆರಂಭವಾದರೂ ಹಾಸ್ಟೆಲ್ ಶುಲ್ಕ ಪಾವತಿ, ಮೆಸ್ ಸೌಲಭ್ಯ ಇಲ್ಲದೇ ಇರುವುದು ತೊಂದರೆಗೀಡು ಮಾಡುತ್ತಿದೆ. ಇಂತಹ ಸಮಸ್ಯೆಗಳ ಕುರಿತು ಹಿಂದೆ ಹಲವು ಬಾರಿ ಆಡಳಿತ ಕಚೇರಿಗೆ ಮನವಿ ಸಲ್ಲಿಸಿದರೂ ಸ್ಪಂಧನೆ ಸಿಗಲಿಲ್ಲ. ಇದೀಗ ನೂತನ ಕುಲಸಚಿವರಿಗೆ ಮುತ್ತಿಗೆ ಹಾಕುವ  ಮೂಲಕ ಮನವಿ ಸಲ್ಲಿಸಲಾಗಿದೆ. ವಾರದಲ್ಲಿ ಸಮಸ್ಯೆಗಳ ಕುರಿತು ಪರಿಹಾರ ಒದಗಿಸದೇ ಇದ್ದಲ್ಲಿ ಶಾಂತಿಯುತವಾಗಿ ಪ್ರತಿಭಟನೆಯನ್ನು ಮುಂದುವರಿಸುವುದಿಲ್ಲ ಎಂದು ಎಚ್ಚರಿಸಿದರು.

ವಿದ್ಯಾರ್ಥಿ ನಾಯಕ ಅಭಿಷೇಕ್ ವಾಲ್ಮೀಕಿ ಮಾತನಾಡಿ, ಎಂಬಿಎ, ಎಂಸಿಎ ವಿದ್ಯಾರ್ಥಿಗಳು ರೂ.10,000 ಹೆಚ್ಚುವರಿ ಪಡೆದುಕೊಳ್ಳಲಾಗಿದೆ. ನೂತನ ಕುಲಸಚಿವರಿಗೆ ಮನವಿ ಸಲ್ಲಿಸಲಾಗಿದೆ. ಒಂದು ವಾರದ ಒಳಗೆ ಪ್ರತಿಕ್ರಿಯೆ ನೀಡುವ ಭರವಸೆ ನೀಡಿದ್ದಾರೆ. ಶೈಕ್ಷಣಿಕ ವರ್ಷ ವ್ಯತ್ಯಾಸ ಇದೆ, ಎಂಬಿಎ, ಎಂಸಿಎ ಆದರೂ ಹಾಸ್ಟೆಲ್ ಶುಲ್ಕ ಎಲ್ಲರಂತೆ ಪಾವತಿಸಬೇಕಿದೆ.  ಎಸ್ ಸಿ ಎಸ್ ಟಿ ವಿದ್ಯಾರ್ಥಿಗಳಿಂದ ಹೆಚ್ಚು ಪರೀಕ್ಷಾ ಶುಲ್ಕ ಪಡೆಯಲಾಗುತ್ತಿದೆ. ಹೆಚ್ಚುವರಿ ಶುಲ್ಕ ಪಡೆಯುವ ಕುರಿತು ದಾಖಲಾತಿಗಳನ್ನು ನೀಡುತ್ತಿಲ್ಲ. ಶುಲ್ಕ ಕಟ್ಟದೇ ಇದ್ದಲ್ಲಿ ಪರೀಕ್ಷೆ ಬರೆಯಲು ಬಿಡುವುದಿಲ್ಲ, ಸರ್ಟಿಫಿಕೇಟ್ ದಾಖಲೆಗಳನ್ನು ಹಿಡಿದುಕೊಳ್ಳುವ ಕೆಲಸವನ್ನು ಮಾಡುತ್ತಿದ್ದಾರೆ ಎಂದರು.

ಸಲ್ಲಿಸಿದ ಮನವಿಯಲ್ಲಿ ಹಾಸ್ಟೆಲ್ ಠೇವಣಿ, ಮೆಸ್ ಸಹಿತ ವಿವಿಧ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ವಿದ್ಯಾರ್ಥಿಗಳು ಕೊಣಾಜೆಯ ಮಂಗಳೂರು ವಿಶ್ವವಿದ್ಯಾನಿಲಯದ ಆಡಳಿತ ಸೌಧಕ್ಕೆ ಸೋಮವಾರ ಮುತ್ತಿಗೆ ಹಾಕಿದರು. ಪ್ರತಿ ಶೈಕ್ಷಣಿಕ ವರ್ಷದ ಆರಂಭದಲ್ಲಿ, ಪ್ರತಿ ಹಾಸ್ಟೆಲ್ ವಿದ್ಯಾರ್ಥಿಯು ರೂ. 10,000 ಹಾಸ್ಟೆಲ್ ಠೇವಣಿ ಪಾವತಿಸಬೇಕಾಗುತ್ತದೆ. ಇತರ ವಿಭಾಗಗಳ ಶೈಕ್ಷಣಿಕ ತರಗತಿ ಎಂಬಿಎ ಮತ್ತು ಎಂಸಿಎ ವಿಭಾಗಗಳಿಗಿಂತ ಮೊದಲೇ ಮುಕ್ತಾಯಗೊಳ್ಳುತ್ತವೆ. ಶೈಕ್ಷಣಿಕ ವರ್ಷದ ಕೊನೆಯ ಎರಡು ತಿಂಗಳುಗಳಲ್ಲಿ, ಎಂಬಿಎ ಮತ್ತು ಎಂಸಿಎ ವಿಭಾಗಗಳ ವಿದ್ಯಾರ್ಥಿಗಳು ಮಾತ್ರ ಹಾಸ್ಟೆಲ್‌ನಲ್ಲಿ ಉಳಕೊಳ್ಳುತ್ತಾರೆ. 

ಈ ಅವಧಿಯಲ್ಲಿ ಸೀಮಿತ ಸಂಖ್ಯೆಯ ವಿದ್ಯಾರ್ಥಿಗಳ ಕಾರಣದಿಂದಾಗಿ ಹಾಸ್ಟೆಲ್ ಮೆಸ್‌ನ್ನು ನಿಲ್ಲಿಸಲಾಗುತ್ತದೆ. ಹಾಸ್ಟೆಲ್‌ನಲ್ಲಿ ವಿದ್ಯಾರ್ಥಿಗಳು ಇದ್ದರೂ ಮೆಸ್ ಸೌಲಭ್ಯಗಳಿರುವುದಿಲ್ಲ. ಈ ಕಾರಣಕ್ಕಾಗಿ ಮುಂದಿನ 2 ತಿಂಗಳು ಮೆಸ್ ಸೌಲಭ್ಯ ಕಲ್ಪಿಸುವಂತೆ ವಿದ್ಯಾರ್ಥಿಗಳು ಒತ್ತಾಯಿಸಿದರು. ಈ ವಿಚಾರವನ್ನು ಗಮನದಲ್ಲಿಟ್ಟುಕೊಂಡು, ಒಂದು ವೇಳೆ ಮೆಸ್ ಸೌಲಭ್ಯ ಕಲ್ಪಿಸಲು ಸಾಧ್ಯವಾಗದೆ ಇದ್ದ ಪಕ್ಷದಲ್ಲಿ ಹಾಸ್ಟೆಲ್‌ನಲ್ಲಿ ಊಟದ ಸೌಲಭ್ಯಗಳು ಲಭ್ಯವಿಲ್ಲದ ಕಾರಣ, ಹಾಸ್ಟೆಲ್‌ನ ಒಟ್ಟು ಮರುಪಾವತಿಸಬಹುದಾದ ಠೇವಣಿ ರೂ. 4,000 ಬದಲಿಗೆ ರೂ.6,000 ಆಗುವಂತೆ ಅಂದರೆ ಹೆಚ್ಚುವರಿಯಾಗಿ ರೂ. 2,000 ಮರುಪಾವತಿಸಬೇಕು. 

ಒಂದು ವೇಳೆ, ಹೆಚ್ಚುವರಿ ಮರುಪಾವತಿಯನ್ನು ಮಂಜೂರು ಮಾಡಲು ಸಾಧ್ಯವಾಗದಿದ್ದರೆ, ಈ ಕೊನೆಯ ಎರಡು ತಿಂಗಳುಗಳಲ್ಲಿ ಎಂಬಿಎ ಮತ್ತು ಎಂಸಿಎ ವಿದ್ಯಾರ್ಥಿಗಳಿಂದ ಸಂಗ್ರಹಿಸಲಾಗುವ ಬೋರ್ಡಿಂಗ್ ಮತ್ತು ವಿದ್ಯುತ್ ಶುಲ್ಕವನ್ನು ಮನ್ನಾ ಮಾಡಬೇಕು. ಇತರ ವಿಭಾಗಗಳ ಎಸ್ಸಿ/ಎಸ್‌ಟಿ ವಿದ್ಯಾರ್ಥಿಗಳು ಸಾಮಾನ್ಯವಾಗಿ ಹಾಸ್ಟೆಲ್ ಶುಲ್ಕಗಳಿಗೆ ರೂ.6,000-ರೂ.8,200 ಮಾತ್ರ ಪಾವತಿಸಬೇಕಾಗುತ್ತದೆ. ಎಂಬಿಎ ಮತ್ತು ಎಂಸಿಎ ವಿಭಾಗಗಳ ಎಸ್ಸಿ ಎಸ್‌ಟಿ ವಿದ್ಯಾರ್ಥಿಗಳು ಸಂಪೂರ್ಣ ಹಾಸ್ಟೆಲ್ ಶುಲ್ಕ ಮೊತ್ತ ರೂ.13,500 ಪಾವತಿಸಬೇಕಾಗಿದೆ. 

2024-2026 ರ ಸಾಲಿನ ಎಂ.ಬಿ.ಎ ವಿದ್ಯಾರ್ಥಿಗಳ ಶುಲ್ಕ-ಸಂಬಂಧಿತ ವಿಷಯಗಳಲ್ಲಿ ಸ್ಪಷ್ಟಿಕರಣ ನೀಡಬೇಕು. 2024-2026 ರ ಎಂಬಿಎ ಬ್ಯಾಚ್‌ನ ಪ್ರತಿಯೊಬ್ಬ ವಿದ್ಯಾರ್ಥಿಯಿಂದ ರೂ. 10,000 ಹೆಚ್ಚುವರಿ ಮೊತ್ತವನ್ನು ಸಂಗ್ರಹಿಸಲಾಗಿದೆ ಎಂದು ವಿದ್ಯಾರ್ಥಿಗಳ ಆರೋಪಿಸಿದರು. ಆದಾಗ್ಯೂ ಈ ಮೊತ್ತವು ಪ್ರವೇಶದ ಸಮಯದಲ್ಲಿ ಅಧಿಕೃತವಾಗಿ ಪ್ರಕಟವಾದ ಶುಲ್ಕ ರಚನೆಯಲ್ಲಿ ನಮೂದು ಆಗಿಲ್ಲ. ಒಂದು ವೇಳೆ ಅನುಮೋದಿತ ಶುಲ್ಕ, ರಚನೆಯ ಭಾಗವಾಗದೆ ಅಥವಾ ಸರಿಯಾದ ಅಧಿಸೂಚನೆಯಿಲ್ಲದೆ ಮೊತ್ತವನ್ನು ಸಂಗ್ರಹಿಸಿದ್ದರೆ, ಸಾಮಾನ್ಯ ವರ್ಗದ ವಿದ್ಯಾರ್ಥಿಗಳಿಂದ ಸಂಗ್ರಹಿಸಿದ ರೂ.10,000 ಅನ್ನು ಆದಷ್ಟು ಬೇಗ ಮರುಪಾವತಿಸಬೇಕು. 

ಪರಿಶಿಷ್ಟ ಜಾತಿ  ಮತ್ತು ಪರಿಶಿಷ್ಟ ಪಂಗಡ ವಿದ್ಯಾರ್ಥಿಗಳಿಂದ ಸಂಗ್ರಹಿಸಲಾಗುತ್ತಿರುವ ಪರೀಕ್ಷಾ ಶುಲ್ಕದ ಬಗ್ಗೆ ಸ್ಪಷ್ಟೀಕರಣ ನೀಡಬೇಕು. ಪ್ರಸ್ತುತ ವಿದ್ಯಾರ್ಥಿಗಳಿಗೆ ತಿಳಿಸಲಾದ ಶುಲ್ಕ ರಚನೆಯ ಪ್ರಕಾರ, ಪರೀಕ್ಷಾ ಶುಲ್ಕ ಸಾಮಾನ್ಯ ವರ್ಗದ ವಿದ್ಯಾರ್ಥಿಗಳಿಗೆ 3,150 ಮತ್ತು SC/ST ವಿದ್ಯಾರ್ಥಿಗಳಿಗೆ 950 ಆಗಿದೆ. SC/ST ವಿದ್ಯಾರ್ಥಿಗಳು ಪ್ರತಿ ಸೆಮಿಸ್ಟರ್‌ಗೆ ಹೆಚ್ಚುವರಿಯಾಗಿ ರೂ 2,200 ಪಾವತಿಸಲು ಹೇಳಲಾಗುತ್ತಿದೆ. ಇದು ವಿದ್ಯಾರ್ಥಿಗಳಲ್ಲಿ ಗೊಂದಲವನ್ನು ಸೃಷ್ಟಿಸಿದೆ.

ಹೆಚ್ಚುವರಿ ಸಂಗ್ರಹ ಸರಕಾರಿ ಆದೇಶದ ಅನ್ವಯವೊ ಅಥವಾ ವಿಶ್ವವಿದ್ಯಾನಿಲಯದ ಆದೇಶ ಅಥವಾ ಅಧಿಕೃತ ಅಧಿಸೂಚನೆಯಿಂದ ನಡೆಯುತ್ತಿದೆಯೋ, ಹಾಗೆಯೇ ಸಾಮಾನ್ಯ ವರ್ಗ ಮತ್ತು SC/ST ವಿದ್ಯಾರ್ಥಿಗಳು ಪಾವತಿಸಬೇಕಾದ ಒಟ್ಟು ಮೊತ್ತದಲ್ಲಿ, ಸೇರಿಸಲಾದ ಎಲ್ಲಾ ಶುಲ್ಕಗಳನ್ನು ಸ್ಪಷ್ಟವಾಗಿ ಸೂಚಿಸುವ ಘಟಕವಾರು ವಿಂಗಡಿಸಬೇಕು ಎಂಬ ಬೇಡಿಕೆ ಮುಂದಿರಿಸಿದ್ದಾರೆ.

ಈ ಸಂದರ್ಭ ಪ್ರಜ್ವಲ್ ಆರಾಧ್ಯ, ಮೊಹಮ್ಮದ್ ರಾಝಿಕ್, ಸಂತೋಷ್, ವಿನೀತ್, ಕಾರ್ತಿಕ್, ಮಾಹಿರ್ ಉಪಸ್ಥಿತರಿದ್ದರು.

ಕುಲಸಚಿವ ಸಂತೋಷ್ ಬಿ ಜಗಲಸಾರ ಕೆಎಎಸ್ ವಿದ್ಯಾರ್ಥಿಗಳ ಮನವಿಯನ್ನು ಸ್ವೀಕರಿಸಿ ದಾಖಲಾತಿಗಳಂತೆ ಎಲ್ಲಿಯೂ ಶುಲ್ಕ ಕಟ್ಟದೇ ಇದ್ದಲ್ಲಿ ದಾಖಲಾತಿಗಳನ್ನು ತಡೆಹಿಡಯುವಂತಿಲ್ಲ. ಅಂತಹ ಸಮಸ್ಯೆಗಳು ಕಂಡುಬಂದಲ್ಲಿ ಗಮನಿಸುವುದಾಗಿಯೂ, ಹಾಸ್ಟೆಲ್ ಶುಲ್ಕದ ವಿಚಾರವಾಗಿ ಒಂದು ವಾರದ ನಂತರ ಚರ್ಚಿಸಿ ಪರಿಹರಿಸುವ ಭರವಸೆಯನ್ನು ನೀಡಿದರು. ಕೊಣಾಜೆ ಪೊಲೀಸರು ಬಂದೋಬಸ್ತ್ ಏರ್ಪಡಿಸಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article