ಡ್ರಗ್ ಹಾವಳಿ ಬಗ್ಗೆ ನಮಗೆ ಮಾಹಿತಿ ನೀಡಿ: ಎಎಸ್‌ಐ ಸಂತೋಷ್
ಅವರು ಕೋಟೆಕಾರ್ ಪಟ್ಟಣ ಪಂಚಾಯತ್ ಅಧ್ಯಕ್ಷೆ ದಿವ್ಯ ಸತೀಶ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಮಾತನಾಡಿದರು.
ನಮ್ಮ ಇಲಾಖೆಯಿಂದ ಏನಾದರೂ ಕೆಲಸ ಆಗಬೇಕಾದರೆ ಇನ್‌ಸ್ಪೆಕ್ಟರ್ ನಝ್ಮಾ ಫಾರೂಕಿ ಅವರಿಗೆ ತಿಳಿಸಬಹುದು. ರಾಷ್ಟ್ರೀಯ ಹೆದ್ದಾರಿ ಸರ್ವಿಸ್ ರಸ್ತೆ ಬದಿಯಲ್ಲಿ ವಾಹನ ನಿಲ್ಲಿಸುವ ಬಗ್ಗೆ ಹೆದ್ದಾರಿ ಇಲಾಖೆಗೆ ಪತ್ರ ಬರೆದಿದ್ದೇವೆ. ಈ ಸಮಸ್ಯೆ ಬಗೆಹರಿಸುವ ಕೆಲಸ ಮಾಡುತ್ತೇವೆ. ತೊಕ್ಕೋಟ್ಟು ಭಾಗದಲ್ಲಿ ಹೆಲ್ಮೆಟ್ ಹಾಕುವ ಕ್ರಮ ಇಲ್ಲ. ಸರ್ಕಾರದ ನಿಯಮ ಪಾಲನೆ ಮಾಡಬೇಕು ಎಂದು ಕರೆ ನೀಡಿದರು.
ಆರೋಗ್ಯ ಅಧಿಕಾರಿ ಲಿಲ್ಲಿ ನಾಯರ್ ಮಾತನಾಡಿ, 971 ಡಯಾಬಿಟಿಸ್ ರೋಗಿಗಳಿಗೆ ಚಿಕಿತ್ಸೆ ವ್ಯವಸ್ಥೆ ಮಾಡಲಾಗಿದೆ. ಮಳೆ ಬಿಟ್ಟು ಬಿಟ್ಟು ಬರುವುದರಿಂದ ಸೊಳ್ಳೆ ಕಾಟ ಜಾಸ್ತಿ ಇದ್ದು, ಈ ಕಾರಣದಿಂದ ನಾಲ್ಕು ಡೆಂಗ್ಯೂ, ಟೈಪಾರ್ಡ್ ರೋಗ ಕಾಣಿಸಿಕೊಂಡಿದೆ. ಟ್ಯಾಂಕರ್ ನೀರು ಪರಿಶೀಲನೆ ಮಾಡಬೇಕು. ಜಾಂಡೀಸ್ ರೋಗ ನೀರಿನಿಂದ ಬರುತ್ತದೆ ಈ ಹಿನ್ನೆಲೆಯಲ್ಲಿ ನೀರಿನ ಪರಿಶೀಲನೆ ಅಗತ್ಯ ಇದೆ ಎಂದರು.
ಕೌನ್ಸಿಲರ್ ಅಹ್ಮದ್ ಅಜ್ಜಿನಡ್ಕ ಮಾತನಾಡಿ, ಏಳು ದಿನಗಳ ಮೊದಲು ಸಾಮಾನ್ಯ ಸಭೆ ನೋಟೀಸ್ ನೀಡಬೇಕು ಎಂಬ ನಿಯಮ ಇದೆ. ನೀವು ಸಭೆಯ ನಾಲ್ಕು ದಿನ ಮೊದಲು ನೋಟೀಸ್ ನೀಡಿದ್ದೀರಿ. ಇದನ್ನು ಪ್ರಶ್ನಿಸಿ ಯಾರಾದರು ಕೋರ್ಟ್‌ಗೆ ಹೋದರೆ ಸಮಸ್ಯೆ ಆಗಬಹುದು. ಸರಿಯಾದ ಸಮಯಕ್ಕೆ ನೋಟೀಸ್ ನೀಡಿ ಎಂದರು.
ಈವರೆಗೆ ಎಲ್ಲ ಸಭೆಗಳ ನೋಟೀಸ್ ಏಳು ದಿನಗಳ ಮೊದಲೇ ನೀಡಲಾಗಿದೆ. ಈ ಬಾರಿ ಎಸ್‌ಐಆರ್ ಒತ್ತಡ ಇದ್ದ ಕಾರಣ ನೋಟೀಸ್ ನೀಡುವಾಗ ವಿಳಂಬ ಆಗಿದೆ. ಮುಂದಿನ ತಿಂಗಳ ಸಾಮಾನ್ಯ ಸಭೆಯ ನೋಟೀಸ್ ಸರಿಯಾದ ಸಮಯಕ್ಕೆ ನೀಡಲಾಗುವುದು ಎಂದು ಮುಖ್ಯಾಧಿಕಾರಿ ಮಾಲಿನಿ ಹೇಳಿದರು.
ಪಂಚಾಯತ್ ನೀರಿನ ಸಂಪರ್ಕ ಇದ್ದು ಈಗ ಅಮೃತ್ 2.0 ಯೋಜನೆಯಡಿ ತುಂಬೆಯ ನೀರಿನ ಸಂಪರ್ಕ ಪಡೆದ ಕೆಲವು ಮನೆಗಳಿಗೆ ನೀರಿನ ಬಿಲ್ ಬರುತ್ತಿದೆ. ಇದೇ ಯೋಜನೆಯಡಿ ನೇರ ನೀರಿನ ಸಂಪರ್ಕ ಪಡೆದ ಮನೆಗಳಿಗೆ ನೀರಿನ ಬಿಲ್ ಬರುತ್ತಿಲ್ಲ. ಇದರಿಂದ ಜನರ ನಡುವೆ ಗಲಾಟೆ ಆಗುತ್ತದೆ. ಇದಕ್ಕೆ ಅವಕಾಶ ನೀಡಬೇಡಿ ಎಂದು ಅಹ್ಮದ್ ಅಜ್ಜಿನಡ್ಕ ಹೇಳಿದರು.
ಈ ಹಿಂದೆ ಪಂಚಾಯತ್‌ನಿಂದ ನೀರಿನ ಸಂಪರ್ಕ ಇದ್ದ ಮನೆಗಳಿಗೆ ಮಾತ್ರ ಬಿಲ್ ಕಳುಹಿಸಲಾಗಿದೆ. ಅಮೃತ್ 2.0 ಯೋಜನೆಯಡಿ ನೇರವಾಗಿ ಹೊಸ ಸಂಪರ್ಕ ಪಡೆದ ಮನೆಗಳಿಗೆ ಬಿಲ್ ಕಳುಹಿಸಿಲ್ಲ. ಕನೀರುತೋಟ ಬಳಿ ಅಮೃತ್ 2.0 ಯೋಜನೆಯಡಿ ಪೈಪ್‌ಲೈನ್ ಕಾಮಗಾರಿ ಆಗಿಲ್ಲ. ಕಾಮಗಾರಿ ಪೂರ್ಣಗೊಂಡು ಪಂಚಾಯತ್‌ಗೆ ಹಸ್ತಾಂತರ ಆದ ಬಳಿಕ ಈ ಯೋಜನೆಯಡಿ ನೀರಿನ ಸಂಪರ್ಕ ಪಡೆದ ಮನೆಗಳಿಗೆ ಬಿಲ್ ನೀಡಲಾಗುವುದು ಎಂದು ಅಧ್ಯಕ್ಷ ದಿವ್ಯ ಸತೀಶ್ ಹೇಳಿದರು.
ಅಧ್ಯಕ್ಷರ ಅನುದಾನದಲ್ಲಿ ಎರಡು ಲಕ್ಷ ರಿಕ್ಷಾ ಪಾರ್ಕ್‌ಗೆ ಇಡಲಾಗಿದೆ. ರಿಕ್ಷಾ ಪಾರ್ಕ್ ಶಾಸಕ ಅಥವಾ ಸಂಸದರ ನಿಧಿಯಿಂದ ಆಗಬೇಕು. ಅದಕ್ಕೆ ಪ್ರತ್ಯೇಕ ಅನುದಾನ ಯಾಕೆ ಇಡಬೇಕು ಎಂದು ಅಹ್ಮದ್ ಅಜ್ಜಿನಡ್ಕ ಪ್ರಶ್ನಿಸಿದರು.
ನನ್ನ ವಾರ್ಡ್‌ನಲ್ಲಿ ಬಸ್‌ಸ್ಟ್ಯಾಂಡ್ ಇಲ್ಲ. ಈ ಕಾರಣದಿಂದ ರಿಕ್ಷಾ ಪಾರ್ಕ್ ನಿರ್ಮಾಣ ಮಾಡಲು ಅನುದಾನ ಇಟ್ಟಿದ್ದೇವೆ. ಶಾಸಕ, ಸಂಸದರ ಅನುದಾನದಿಂದ ಈ ಕೆಲಸ ಆಗಬೇಕಾದರೂ, ನಮಗೆ ಅನುದಾನ ಇಟ್ಟು ಮಾಡಬಾರದು ಎಂದಿದೆಯೇ ಎಂದು ದಿವ್ಯ ಸತೀಶ್ ಪ್ರಶ್ನಿಸಿದರು.
ಮೆಸ್ಕಾಂ ಜೆಇ ಮಾರಪ್ಪ ಮಾತನಾಡಿ, ಗೃಹ ಜ್ಯೋತಿ ಪುನರ್ ಪರಿಶೀಲನೆ ಕಾರ್ಯ ಆರಂಭಗೊಂಡಿದ್ದು, 200 ಯುನಿಟ್ ಒಳಗೆ ಯುನಿಟ್ ಹೊಂದಿರುವ ಮನೆಗಳ ಅರ್ಜಿ ಮಾತ್ರ ಅಪ್ಡೇಟ್ ಆಗುತ್ತದೆ. ಪೋಟೋ, ದಾಖಲೆ ನೀಡಬೇಕು, ಕೆಲವು ಮನೆಗಳ ಪರಿಶೀಲನೆ ಆಗಿವೆ. ಬಾಕಿ ಉಳಿದ ಮನೆಗಳ ಶೀಘ್ರ ಪರಿಶೀಲನೆ ಶೀಘ್ರ ಮಾಡಲಾಗುವುದು. ನನ್ನ ವ್ಯಾಪ್ತಿಯಲ್ಲಿ 3,200 ಮನೆಗಳು ಇವೆ. 800 ಮಂದಿ ದಾಖಲೆ ನೀಡಿಲ್ಲ. ಹೊಸ ಸಂಪರ್ಕ ಪಡೆದಿರುವ ಕುಟುಂಬಗಳ ಅರ್ಜಿ ಪರಿಶೀಲನೆ ಮಾಡುವ ಬಗ್ಗೆ ಮುಂದಿನ ದಿನಗಳಲ್ಲಿ ತೀರ್ಮಾನ ಮಾಡಲಾಗುವುದು ಎಂದು ಮಾಹಿತಿ ನೀಡಿದರು.
ಸಾರ್ವಜನಿಕ ಸ್ಥಳಗಳಲ್ಲಿ ಕ್ಯಾಂಪ್ ಮಾಡಿ ಅರ್ಜಿ ಪರಿಶೀಲನೆ ಮಾಡಿದರೆ ಬಹಳಷ್ಟು ಮಂದಿಗೆ ಅನುಕೂಲ ಆಗುತ್ತದೆ. ದಿನಾಂಕ ನಿಗದಿ ಪಡಿಸಿದ ಬಳಿಕ ಒಂದು ಕ್ಯಾಂಪ್ ಮಾಡಿ ಎಂದು ಎಸ್ ಡಿಪಿಐ ಕೌನ್ಸಿಲರ್ ಸಲೀಮಾ ಬಿ. ಸಲಹೆ ನೀಡಿದರು.
ಉಪಾಧ್ಯಕ್ಷ ಪ್ರವೀಣ್, ಸ್ಥಾಯಿ ಸಮಿತಿ ಅಧ್ಯಕ್ಷ ಧೀರಜ್ ಉಪಸ್ಥಿತರಿದ್ದರು.