ಕೆಂಪು ಕಲ್ಲು ಅಕ್ರಮ ಗಣಿಗಾರಿಕೆ: ದಾಳಿ
ವಿಟ್ಲ: ಅಕ್ರಮ ಕೆಂಪುಕಲ್ಲು ಹಾಗೂ ಮಣ್ಣು ಗಣಿಗಾರಿಕೆ ನಡೆಯುತ್ತಿದ್ದ ಸ್ಥಳಕ್ಕೆ ವಿಟ್ಲ ಠಾಣಾ ಪೊಲೀಸರು ದಾಳಿ ನಡೆಸಿ ವಾಹನ ಹಾಗೂ ಯಂತ್ರೋಪಕರಣಗಳನ್ನು ವಶಕ್ಕೆ ಪಡೆದ ಘಟನೆ ಬಂಟ್ವಾಳ ಕರೋಪಾಡಿ ಗ್ರಾಮದ ಮುಗುಳಿ ಎಂಬಲ್ಲಿ ನಡೆದಿದೆ. ವಿಟ್ಲ ಠಾಣಾ ಪೊಲೀಸ್ ಉಪನಿರೀಕ್ಷಕರಾದ ರಾಮಕೃಷ್ಣರವರಿಗೆ ಜುಲೈ 2 ರ ಸಂಜೆ ಅಕ್ರಮ ಗಣಿಗಾರಿಕೆ ಬಗ್ಗೆ ಮಾಹಿತಿ ಬಂದ ಮೇರೆಗೆ, ಠಾಣಾ ಸಿಬ್ಬಂದಿಗಳೊಂದಿಗೆ ಬಂಟ್ವಾಳ ಕರೋಪಾಡಿ ಗ್ರಾಮದ ಮುಗುಳಿ ಎಂಬಲ್ಲಿಗೆ ತೆರಳುತ್ತಾರೆ. ಈ ವೇಳೆ ಪೊಲೀಸ್ ವಾಹನವನ್ನು ನೋಡಿ ಕೆಂಪು ಕಲ್ಲು ಗಣಿಗಾರಿಕೆ ಮಾಡುತ್ತಿದ್ದವರು ಅಲ್ಲಿಂದ ಪರಾರಿಯಾಗಿದ್ದಾರೆ.
ಘಟನಾ ಸ್ಥಳವನ್ನು ಪರಿಶೀಲಿಸಿದಾಗ ಅಕ್ರಮ ಕೆಂಪು ಕಲ್ಲು ಗಣಿಗಾರಿಕೆ ಮಾಡುತ್ತಿರುವುದು ಕಂಡುಬಂದಿದ್ದು, ಕೃತ್ಯಕ್ಕೆ ಬಳಸಿದ ಯಂತ್ರೋಪಕರಣಗಳು ಸ್ಥಳದಲ್ಲಿರುತ್ತದೆ. ಈ ಸ್ಥಳದ ಸಮೀಪದಲ್ಲೇ ಅಕ್ರಮವಾಗಿ ಮಣ್ಣು ಗಣಿಗಾರಿಕೆ ನಡೆಸುತ್ತಿರುವುದು ಹಾಗೂ ಮಣ್ಣು ಗಣಿಗಾರಿಕೆಯ ಮಣ್ಣನ್ನು ತುಂಬಿಸಿಕೊಂಡು ಹೋಗುವ ಲಾರಿಗಳ ತೂಕ ಮಾಡಲು ವೇ ಬ್ರಿಡ್ಜ್ ಮತ್ತು ಕಟ್ಟಡ ಮಾಡಿರುವುದು ಹಾಗೂ ಯಂತ್ರೋಪಕರಣಗಳು ಪತ್ತೆಯಾಗಿರುತ್ತದೆ. ಈ ಸೋತ್ತುಗಳನ್ನು ಪೊಲೀಸರು ಸ್ವಾಧೀನ ಪಡಿಸಿಕೊಂಡಿದ್ದಾರೆ.
ಯಾವುದೇ ಪರವಾನಗಿ ಇಲ್ಲದೇ ಗಣಿಗಾರಿಕೆ ಮಾಡುತ್ತಿದ್ದ ಆರೋಪಿ ಮುಳಿಗದ್ದೆ ಝಕಾರಿಯಾ ಮತ್ತು ಇತರರ ವಿರುದ್ಧ ವಿಟ್ಲ ಪೊಲೀಸ್ ಠಾಣೆಯಲ್ಲಿ ಅ.ಕ್ರ: 148/2026, ಕಲಂ:303(2) BNS 2023, ಕಲಂ: 4(1), 21 MMDR (MINES AND MINERALS REGULATION OF DEVELOPMENT) ACT 1957, ಕಲಂ: 3, 44 KARNATAKA MINOR MINERAL CONSISTENT RULE 1994 ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.