ಆ.12 ರಂದು ನರಹರಿ, ಕಾರಿಂಜ ಕ್ಷೇತ್ರಗಳಲ್ಲಿ ಆಟಿ ಅಮಾವಾಸ್ಯೆಯ ತೀರ್ಥಸ್ನಾನ
Monday, August 10, 2026
ಬಂಟ್ವಾಳ: ‘ಭೂಲೋಕದ ಕೈಲಾಸ’ ಎಂದೇ ಪ್ರಸಿದ್ಧವಾಗಿರುವ ಹಚ್ಚ ಹಸಿರಿನ ಪ್ರಕೃತಿಯ ಸೌಂದರ್ಯ ತಾಣ ನರಹರಿ ಪರ್ವತ ಸದಾಶಿವ ದೇವಸ್ಥಾನ ಹಾಗೂ ಮಹತೋಬಾರ ಶ್ರೀಕ್ಷೇತ್ರ ಕಾರಿಂಜದಲ್ಲಿ ಆಗಸ್ಟ್ 12ರಂದು ಆಟಿ ಅಮಾವಾಸ್ಯೆ ತೀರ್ಥಸ್ನಾನ ಜರಗಲಿದೆ.
ಏಳು ಎಲೆಗಳ ವೃತ್ತಾಕಾರದ ಜೋಡಣೇಯ ‘ಸಪ್ತವರ್ಣ’ ಪಾಲೆಯ ಮರದ ರಸವನ್ನು ಸೂರ್ಯೋದಯದ ಮೊದಲು ಸೇವಿಸುವ ತುಳುನಾಡಿನ ಪರಂಪರೆಯ ದಿನ ಆಟಿ ಅಮವಾಸ್ಯೆ ತೀರ್ಥಸ್ನಾನದ ಪವಿತ್ರದಿನ ಅಂದು ಮುಂಜಾನೆಯೇ ಅಸಂಖ್ಯಾತ ಭಕ್ಯರು ಮುಖ್ಯವಾಗಿ ನವ ವಧುವರರು ನರಹರಿ ಮತ್ತು ಶ್ರೀಕಾರಿಂಜ ಕ್ಷೇತ್ರದಲ್ಲಿರುವ ಪವಿತ್ರಕೆರೆಯಲ್ಲಿ ತೀರ್ಥಸ್ನಾನಗೈದು, ದೇವರಿಗೆ ವಿಧ-ವಿಧವಾದ ಸೇವೆ ಸಲ್ಲಿಸಿ ಪುನೀತರಾಗುತ್ತಾರೆ.
ತಾಲೂಕಿನ ಈ ಎರಡೂ ಕ್ಷೇತ್ರಗಳು ಬರಿಯ ದೇಗುಲಗಳ ಬೀಡಲ್ಲ. ನಿಸರ್ಗ ಪ್ರಿಯರಿಗೆ ಪ್ರಕೃತಿ ಸೌಂದರ್ಯದ ಮಡಿಲು ಭಾವುಕರಿಗೆ-ನಂದ ಗೋಕುಲ ನೊಂದವರಿಗೆ-ಶಾಂತಿ ಧಾಮ ವಿವಾಹರಿಗಳಿಗೆ-ಹಚ್ಚ ಹಸಿರುವಿನ ಸುಂದರ ತಾಣ ಬಾಳಿನಲ್ಲಿ ಬಳಲಿದವರಿಗೆ ಪ್ರಶಾಂತ ಶಾಂತಿ ಧಾಮವಾಗಿದೆ.