ಸಾಮಾಜಿಕ ಜಾಲತಾಣದಲ್ಲಿ ಅಪಪ್ರಚಾರ, ಧಾರ್ಮಿಕ ಭಾವನೆಗಳಿಗೆ ಧಕ್ಕೆ: ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹ
ಕೆಲವು ಸಮಾಜಘಾತಕ ಶಕ್ತಿಗಳು, ಸಮಾಜದಲ್ಲಿ ಸಾಮರಸ್ಯವನ್ನು ಕದಡುವ ಹುನ್ನಾರದಿಂದ ಅವರ ಭಾವಚಿತ್ರವನ್ನು ಬಳಸಿ ಅವಹೇಳನಕಾರಿ ಮತ್ತು ನಿಂದನೀಯ ಸಂದೇಶಗಳನ್ನು ಹರಡಿದ್ದು, ಇದರಿಂದಾಗಿ ಅನಿಲ್ ಪಂಡಿತ್ ಅವರಿಗೆ ತೀವ್ರ ಮಾನಹಾನಿಯಾಗಿದ್ದಲ್ಲದೆ ಸಮಾಜದ ಧಾರ್ಮಿಕ ನಂಬಿಕೆಗಳಿಗೂ ಧಕ್ಕೆ ಉಂಟಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಅದೇ ರೀತಿ ಸಂವಿಧಾನದ ಚೌಕಟ್ಟಿನಲ್ಲಿ ಆಯೋಜಿಸಿದ್ದ ಪವಿತ್ರ ‘ಗುರುಪೂರ್ಣಿಮಾ ಮಹೋತ್ಸವ’ವನ್ನು ದೇಶದ್ರೋಹಿ ಕಾರ್ಯಕ್ರಮವೆಂದು ಬಿಂಬಿಸಿ, ಆಯೋಜಕರ ವಿರುದ್ಧ ಎಸ್‌ಡಿಪಿಐ ಸಂಘಟನೆಯು ದೂರು ದಾಖಲಿಸಿರುವುದನ್ನು ಸಮಿತಿಯು ತೀವ್ರವಾಗಿ ಖಂಡಿಸಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಅನಿಲ್ ಪಂಡಿತ್ ಅವರ ವಿರುದ್ಧ ಅಪಪ್ರಚಾರ ನಡೆಸಿ ಕೋಮು ಸೌಹಾರ್ದತೆ ಕೆಡಿಸಲು ಯತ್ನಿಸಿವರನ್ನು ತಕ್ಷಣವೇ ಪತ್ತೆಹಚ್ಚಿ ಬಂಧಿಸಬೇಕು ಹಾಗೂ ಪವಿತ್ರ ಗುರುಪೂರ್ಣಿಮಾ ಮಹೋತ್ಸವದ ವಿರುದ್ಧ ಸುಳ್ಳು ದೂರು ನೀಡಿ ದ್ವೇಷ ಭಾಷಣಕ್ಕೆ ಕಾರಣರಾದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ಆಗ್ರಹಿಸಲಾಗಿದೆ.
ಈ ಸಂದರ್ಭ ಯಕ್ಷಗಾನ ಕಲಾವಿದರಾದ ಸರಪಾಡಿ ಅಶೋಕ್ ಶೆಟ್ಟಿ, ಹಿಂದೂ ಮುಖಂಡರಾದ ಸುಕುಮಾರ್ ಶೆಟ್ಟಿ, ಶೇಖರ್ ಕೊಟ್ಟಾರಿ, ಜ್ಯೋತಿಷ್ಯರಾದ ಅನಿಲ್ ಪಂಡಿತ್, ಸುರೇಶ್ ರೈ ಮತ್ತಿತರರು ಉಪಸ್ಥಿತರಿದ್ದರು.
ಬ್ರಹ್ಮರಕೂಟ್ಲುನಲ್ಲಿರುವ ಜೋತಿಷ್ಯ ಅನಿಲ್ ಪಂಡಿತ್ ರವರು ಬಿ.ಸಿ.ರೋಡ್‌ನ ಗೀತಾಂಜಲಿ ಕಲ್ಯಾಣ ಮಂಟಪದಲ್ಲಿ ಜರಗಿದ ಗುರು ಪೂರ್ಣಿಮಾ ಕಾರ್ಯಕ್ರಮದ ಪ್ರಚಾರ ಬ್ಯಾನರ್ ಅಳವಡಿಸಿದ್ದಾರೆ ಎಂಬ ಕ್ಷುಲ್ಲಕ ಕಾರಣದಿಂದ ಅವರ ಸೇವಾ ಮನೋಭಾವನೆಯನ್ನು ಸಹಿಸದ ಕೆಲವೊಂದು ಕಿಡಿಗೇಡಿಗಳು ಜೋತಿಷ್ಯರ ವ್ಯಕ್ತಿತ್ವಕ್ಕೆ ಧಕ್ಕೆ ತರುವಂತಹ ಅವಹೇಳನ ಪದಗಳ ಸಂದೇಶವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಡಿಸಿ ತೇಜೋವಧೆಗೆ ಪ್ರಯತ್ನ ಪಟ್ಟವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಅವರು ಆಗ್ರಹಿಸಿದ್ದಾರೆ.