ಹಿ.ಜಾ.ವೇ. ಮುಖಂಡ ನರಸಿಂಹ ಮಾಣಿಗೆ ಉಡುಪಿ ಜಿಲ್ಲೆ ಪ್ರವೇಶ ನಿರ್ಬಂಧಿಸಿ ನೋಟೀಸ್
ಬಂಟ್ವಾಳ: ಹಿಂದೂ ಜಾಗರಣ ವೇದಿಕೆಯ ಮಂಗಳೂರು ಗ್ರಾಮಾಂತರ ಜಿಲ್ಲಾ ಸಂಯೋಜಕ ನರಸಿಂಹ ಮಾಣಿ ಅವರಿಗೆಅವರಿಗೆ 3 ತಿಂಗಳ ಕಾಲ ಉಡುಪಿ ಜಿಲ್ಲೆಗೆ ಪ್ರವೇಶ ನಿರ್ಬಂಧಿಸಿ ಉಡುಪಿ ಜಿಲ್ಲಾಡಳಿತ ನೋಟಿಸ್ ಜಾರಿಗೊಳಿಸಿದೆ.
ಬಂಟ್ವಾಳ ತಾಲೂಕು ಮಾಣಿಗ್ರಾಮದ ನಿವಾಸಿಯಾಗಿರುವ ನರಸಿಂಹ ಮಾಣಿ ಅವರು ಪ್ರಸ್ತುತ ಹಿ.ಜಾ.ವೇ.ಯ ಮಂಗಳೂರು ಗ್ರಾಮಾಂತರ ಜಿಲ್ಲೆಯ ಸಂಯೋಕರಾಗಿ ಕಾರ್ಯನಿರ್ವಹಿಸುತ್ತಿದ್ದು, ಪ್ರಖರ ಭಾಷಣಕಾರರು ಆಗಿದ್ದಾರೆ.
ಗುರುವಾರ ಉಡುಪಿಜಿಲ್ಲೆಯ ಬೆಳ್ಮಣ್ಣ್‌ನಲ್ಲಿ ಆಯೋಜಿಸಲಾಗಿದ್ದ ಅಖಂಡ ಭಾರತ ಸಂಕಲ್ಪ ದಿನ ಕಾರ್ಯಕ್ರಮದಲ್ಲಿ ಪ್ರಮುಖ ಭಾಷಣಕಾರರಾಗಿ ಭಾಗವಹಿಸಬೇಕಿದ್ದ ಅವರನ್ನು ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ 2023 ರ ಕಲಂ 163 ರ ಅಡಿಯಲ್ಲಿ ಆ.12 ರಿಂದ ನ.12 ರವರೆಗೆ (03 ತಿಂಗಳ ಕಾಲ) ಉಡುಪಿ ಜಿಲ್ಲೆಯಾದ್ಯಂತ ಪ್ರವೇಶ ನಿರ್ಬಂಧಿಸಿ ಉಡುಪಿ ಜಿಲ್ಲಾಡಳಿತವು ಅವರಿಗೆ ನೋಟೀಸ್ ಜಾರಿಗೊಳಿಸಿದೆ.
ಉಡುಪಿ ಜಿಲ್ಲಾಡಳಿತದ ಈ ಕ್ರಮವನ್ನು ಅವರು ರಾಜ್ಯ ಹೈಕೋರ್ಟಿನಲ್ಲಿ ಪ್ರಶ್ನಿಸಲು ಮುಂದಾಗಿದ್ದಾರೆ.
‘ಅಖಂಡ ಭಾರತ ಸಂಕಲ್ಪ ದಿನ’ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲಾಡಳಿತವು ಹಿ.ಜಾ.ವೇ.ಯ ಮುಖಂಡ ನರಸಿಂಹ ಮಾಣಿ ಅವರ ಮೇಲೆ ಹೇರಿರುವ ಜಿಲ್ಲಾ ಪ್ರವೇಶ ನಿರ್ಬಂಧಕ್ಕೆ ಹಿ.ಜಾ.ವೇ.ಯ ಮಂಗಳೂರು ಗ್ರಾಮಾಂತರ ಜಿಲ್ಲಾ ಘಟಕ ತೀವ್ರವಾಗಿ ಖಂಡಿಸಿದೆಯಲ್ಲದೆ. ನರಸಿಂಹ ಮಾಣಿ ಅವರಿಗೆ ಉಡುಪಿ ಜಿಲ್ಲೆಗೆ ಪ್ರವೇಶಿಸದಂತೆ ತಡೆದು ಆಜ್ಞೆ ಹೊರಡಿಸಿರುವುದು ಹಿಂದೂ ವಿರೋಧಿ ಮತ್ತು ಪ್ರಜಾಪ್ರಭುತ್ವ ವಿರೋಧಿ ನಡೆಯಾಗಿದೆ ಎಂದು ಹಿ.ಜಾ.ವೇ. ಟೀಕಿಸಿದೆ.