ಗುಟ್ಕಾ ನಿಷೇಧ-ಅಡಿಕೆ ಕೃಷಿಕರ ಬದುಕಿಗೆ ಹೊರೆಯಾಗದಂತೆ ಸರ್ಕಾರ ಕ್ರಮಕ್ಕೆ-ಅಡಿಕೆ ಬೆಳೆಗಾರರ ಸಂಘ ಆಗ್ರಹ

ಗುಟ್ಕಾ ನಿಷೇಧ-ಅಡಿಕೆ ಕೃಷಿಕರ ಬದುಕಿಗೆ ಹೊರೆಯಾಗದಂತೆ ಸರ್ಕಾರ ಕ್ರಮಕ್ಕೆ-ಅಡಿಕೆ ಬೆಳೆಗಾರರ ಸಂಘ ಆಗ್ರಹ

ಪುತ್ತೂರು: ಸರ್ಕಾರ ತಂಬಾಕು ಹಾಗೂ ನಿಕೋಟಿನ್ ಹೊಂದಿರುವ ಗುಟ್ಕಾ ಮತ್ತು ಪಾನ್‌ಮಸಾಲಾ ಉತ್ಪನ್ನಗಳ ಮಾರಾಟ ಹಾಗೂ ವಿತರಣೆಗೆ ಒಂದು ವರ್ಷದ ನಿಷೇಧ ಹೇರಿದ್ದು, ಇದನ್ನು ಸಾರ್ವಜನಿಕ ಆರೋಗ್ಯದ ಹಿತ ದೃಷ್ಟಿಯಿಂದ ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘ ಸ್ವಾಗತಿಸುತ್ತದೆ. ಆದರೆ ಇದರಿಂದ ಅಡಿಕೆ ಬೆಳೆಗಾರರ ಬದುಕಿನ ಮೇಲೆ ಯಾವುದೇ ದುಷ್ಪರಿಣಾಮ ಬೀರದಂತೆ ಸರ್ಕಾರ ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು ಎಂದು ಸಂಘ ಆಗ್ರಹಿಸಿದೆ. 

ಸಾಂಪ್ರದಾಯಿಕ ಕೃಷಿಯಾಗಿರುವ ಅಡಿಕೆ ಹಾಗೂ ತಂಬಾಕು, ನಿಕೋಟಿನ್ ಉತ್ಪನ್ನಗಳನ್ನು ಏಕದೃಷ್ಟಿಯಿಂದ ಕಾಣಬಾರದು. ಗುಟ್ಕಾ ನಿಷೇಧವೆಂದರೆ ಅಡಿಕೆ ನಿಷೇಧವಲ್ಲ.  ತಂಬಾಕು, ನಿಕೋಟಿನ್ ಉತ್ಪನ್ನಗಳ ವಿರುದ್ಧ ಸರಕಾರ ಕೈಗೊಳ್ಳುವ ಸಾರ್ವಜನಿಕ ಆರೋಗ್ಯ ಕ್ರಮಗಳನ್ನು ಅಡಿಕೆಯ ಕೃಷಿ, ಮಾರುಕಟ್ಟೆ ಮತ್ತು ಬೆಳೆಗಾರರ ಜೀವನೋಪಾಯದ ಮೇಲಿನ ಕ್ರಮವಾಗಿ ಪರಿಗಣಿಸಬಾರದು. 

 ಗುಟ್ಕಾ ನಿಷೇಧದಿಂದ ಅಡಿಕೆ ಮಾರುಕಟ್ಟೆಯಲ್ಲಿ ಕುಸಿತ ಉಂಟಾಗುತ್ತದೆ ಎಂಬುವುದು ಸರಿಯಾದ ವಿಚಾರವಲ್ಲ. ಈ ಹಿಂದೆ 2014 ರಲ್ಲಿ ದೇಶದ ಹಲವು ರಾಜ್ಯಗಳಲ್ಲಿ ಗುಟ್ಕಾ ನಿಷೇಧ ಜಾರಿಯಲ್ಲಿದ್ದ ಸಂದರ್ಭದಲ್ಲಿಯೇ ಅಡಿಕೆ ಬೆಲೆಯಲ್ಲಿ ಏರಿಕೆ ಕಂಡಿದೆ. ಹೀಗಾಗಿ ಗುಟ್ಕಾ ನಿಷೇಧದ ಪರಿಣಾಮವನ್ನು ಅಡಿಕೆಯ ಮಾರುಕಟ್ಟೆಯೊಂದಿಗೆ ಸಂಬಂಧ ಕಲ್ಪಿಸುವುದು ಸರಿಯಲ್ಲ. ಅಡಿಕೆ ಬೆಳೆಗಾರರು ಗಾಬರಿ ಪಡುವಂತಹ ಅವಶ್ಯಕತೆ ಇಲ್ಲ ಎಂದು ಸಂಘ ಅಭಿಪ್ರಾಯಿಸಿದೆ.  

ಈಗ ಅಡಿಕೆಯ ಬೇಡಿಕೆ, ದೇಶಿಯ ಬಳಕೆ, ಕೈಗಾರಿಕಾ ಬಳಕೆ, ರಫ್ತು ಹಾಗೂ ವಿವಿಧ ಮಾರುಕಟ್ಟೆಗಳಿಗೆ ಆಗುತ್ತಿರುವ ಪೂರೈಕೆಯ ಕುರಿತು ಸಮಗ್ರ ಅಧ್ಯಯನ ನಡೆಸಬೇಕು. ಅಕ್ರಮ ಹಾಗೂ ಅನಗತ್ಯ ಆಮದುಗಳಿಂದ ದೇಶೀಯ ಅಡಿಕೆ ಮಾರುಕಟ್ಟೆಯ ಮೇಲೆ  ತೊಂದರೆಯಾಗದಂತೆ ಆಮದು ನಿಯಂತ್ರಣವನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಬೇಕು. ಅಡಿಕೆಗೆ ನಿಗದಿಪಡಿಸಿರುವ ಕನಿಷ್ಠ ಆಮದು ಬೆಲೆಯೂ ಕಟ್ಟುನಿಟ್ಟಾಗಿ ಮತ್ತು ಪರಿಣಾಮಕಾರಿಯಾಗಿ ಜಾರಿಯಾಗುವಂತೆ ನೋಡಿಕೊಳ್ಳಬೇಕು. ದೇಶದ ಲಕ್ಷಾಂತರ ಅಡಿಕೆ ಬೆಳೆಗಾರರ ಜೀವನೋಪಾಯ ಅಡಿಕೆ ಕೃಷಿಯೊಂದಿಗೆ ಬೆಸೆದುಕೊಂಡಿದೆ. ಆದ್ದರಿಂದ ಯಾವುದೇ ತಂಬಾಕು ವಿರೋಧಿ ಸಾರ್ವಜನಿಕ ಆರೋಗ್ಯ ನೀತಿಯ ಹೊರೆ ಅಡಿಕೆ ಬೆಳೆಗಾರರ ಮೇಲೆ ಬೀಳದಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನೀತಿ ರೂಪಿಸಬೇಕು ಎಂದು ಸಂಘ ಒತ್ತಾಯಿಸಿದೆ. 

ಇದೆಲ್ಲದರ ಹೊರತಾಗಿಯೂ ಲಕ್ಷಾಂತರ ಅಡಿಕೆ ಬೆಳೆಗಾರರ ಜೀವನಾಡಿ, ಆರ್ಥಿಕ ಮೂಲವೂ ಆಗಿರುವ ಅಡಿಕೆ ಮಾರುಕಟ್ಟೆಯಲ್ಲಿ ಒಂದು ವೇಳೆ ಬೆಲೆ ಕುಸಿತ ಉಂಟಾದಲ್ಲಿ ಬೆಳೆಗಾರರನ್ನು ರಕ್ಷಿಸಲು ಮಾರುಕಟ್ಟೆ ಸ್ಥಿರೀಕರಣ ವ್ಯವಸ್ಥೆಯನ್ನು ಕೂಡಾ ಸರ್ಕಾರ ಪರಿಗಣನೆ ಮಾಡಬೇಕು.  ನಿಷೇಧಿತ ತಂಬಾಕು, ನಿಕೋಟಿನ್ ಉತ್ಪನ್ನಗಳ ವಿರುದ್ಧದ ಕ್ರಮಕ್ಕೆ ಅಡಿಕೆ ಬೆಳೆಗಾರರ ಸಂಘದ ಯಾವುದೇ ವಿರೋಧವಿಲ್ಲ. ಅಡಿಕೆಯ ಪರ್ಯಾಯ ಬಳಕೆಯೂ ಈಗಾಗಲೇ ಇದೆ. ಅಡಿಕೆಯ ಸಿಹಿ ಸುಪಾರಿ, ಚಹಾ ಸೇರಿದಂತೆ ಇತರ ಉತ್ಪನ್ನಗಳೂ ಇವೆ.

ಹೀಗಾಗಿ ಈಗ ಕ್ರಮದ ಹೆಸರಿನಲ್ಲಿ ಅಡಿಕೆ ಬೆಳೆಗಾರರು, ಅಡಿಕೆ ವ್ಯಾಪಾರಿಗಳು ಅಥವಾ ಕಾನೂನುಬದ್ಧ ಅಡಿಕೆ ಮಾರುಕಟ್ಟೆಗೆ ಅನಗತ್ಯ ತೊಂದರೆ ಉಂಟಾಗದಂತೆ ಸರ್ಕಾರ ಸ್ಪಷ್ಟ ಮಾರ್ಗಸೂಚಿ ಹೊರಡಿಸಬೇಕು ಎಂದು ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘದ ಅಧ್ಯಕ್ಷ ಮಹೇಶ್ ಪುಚ್ಚಪ್ಪಾಡಿ ಹಾಗೂ ಕಾರ್ಯದರ್ಶಿ ಸಿ.ಜಿ. ವೆಂಕಟಗಿರೀಶ್ ಒತ್ತಾಯಿಸಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article