ಜಿಲ್ಲೆಯಲ್ಲಿಯೇ ಮೊದಲಿಗೆ ಬರಡು ರಾಸುಗಳ ಚಿಕಿತ್ಸಾ ಶಿಬಿರ
ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಉಪನಿರ್ದೇಶಕ ಡಾ. ಅರುಣ್ ಕುಮಾರ್ ಶೆಟ್ಟಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ರೈತನ ಬೆವರು ಹಸುವಿನ ಹಾಲಾಗಿ ಪರಿವರ್ತನೆಯಾದಾಗ ಮಾತ್ರ ಗ್ರಾಮೀಣ ಆರ್ಥಿಕತೆ ಸದೃಢವಾಗುತ್ತದೆ. ಆದರೆ ಬರಡು ಹಸುಗಳು ರೈತರ ಕನಸಿಗೆ ತಡೆಗೋಡೆಯಾಗಿದ್ದು, ಈ ಸಮಸ್ಯೆಗೆ ವೈಜ್ಞಾನಿಕ ಪರಿಹಾರ ಒದಗಿಸುವ ನಿಟ್ಟಿನಲ್ಲಿ ತಜ್ಞ ವೈದ್ಯರ ಮಾರ್ಗದರ್ಶನದೊಂದಿಗೆ ಈ ಶಿಬಿರವನ್ನು ಆಯೋಜಿಸಲಾಗಿದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಂಟ್ವಾಳ ತಾಲೂಕು ತಾಂತ್ರಿಕ ಕೃಷಿ ಅಧಿಕಾರಿ, ಗೋಳ್ತಮಜಲು ಗ್ರಾಮದ ಆಡಳಿತಾಧಿಕಾರಿ ನಂದನ್ ಶೆಣೈ ವಹಿಸಿದ್ದರು.
ವಿಜಯ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನದ ಕಾರ್ಯನಿರ್ವಹಣಾಧಿಕಾರಿ ಜ್ಯೋತಿರಾಜ್ ಅವರು ರೈತರಿಗೆ ಬ್ಯಾಂಕ್ ಸೌಲಭ್ಯಗಳು ಹಾಗೂ ಹಣಕಾಸು ನೆರವುಗಳ ಕುರಿತು ಮಾಹಿತಿ ನೀಡಿದರು.
ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿಗಳಾದ ಡಾ. ಟಿ.ಜೆ. ರಮೇಶ್, ಡಾ. ದರ್ಣೇಶ್ ಎನ್.ಕೆಎಲ್, ಬಂಟ್ವಾಳ ಪಶು ವೈದ್ಯಕೀಯ ಸೇವಾ ಇಲಾಖೆಯ ಸಹಾಯಕ ನಿರ್ದೇಶಕ ಡಾ. ಉಮೇಶ್ ಕಿರಣ್, ಕಲ್ಲಡ್ಕ ಪಶು ವೈದ್ಯಕೀಯ ಆಸ್ಪತ್ರೆಯ ಹಿರಿಯ ಪಶು ವೈದ್ಯಾಧಿಕಾರಿ ಡಾ. ಕಾರ್ತಿಕ್, ಕೊಯ್ಲ ಪಶುವೈದ್ಯಕೀಯ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಡಾ. ರಜತ್ ಸಾಗರ್, ಡಾ. ತೇಜಸ್ವಿನಿ ಎಂ.ಸಿ., ಗೋಳ್ತಮಜಲು ಗ್ರಾಮ ಪಂಚಾಯತ್ ಪಿಡಿಒ ಸುನಿಲ್ ಕುಮಾರ್, ಅಮ್ಟೂರು ಹಾ.ಉ.ಸ. ಸಂಘದ ಅಧ್ಯಕ್ಷ ಪ್ರಭಾಕರ್ ಶೆಟ್ಟಿ, ಆಶೀರ್ವಾದ ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ವಿದ್ಯಾ ಜಿ. ಕೊಟ್ಟಾರಿ, ಎನ್‌ಆರ್‌ಎಲ್‌ಎಂ ಮೇಲ್ವಿಚಾರಕಿ ಕುಸುಮ, ಗೋಳ್ತಮಜಲು ಹಾಗೂ ಅಮ್ಟೂರು ಗ್ರಾಮದ ಕೃತಕ ಗರ್ಭದಾರಕರು, ಹಾಲು ಉತ್ಪಾದಕರ ಸಹಕಾರಿ ಸಂಘದ ನಿರ್ದೇಶಕರು ಮತ್ತಿತರರು ಉಪಸ್ಥಿತರಿದ್ದರು.
ಶಿಬಿರದಲ್ಲಿ ಸುಮಾರು 20 ಬರಡು ಹಸುಗಳ ಸ್ಥಳದಲ್ಲಿಯೇ ತಪಾಸಣೆ ನಡೆಸಿ ಸೂಕ್ತ ಚಿಕಿತ್ಸೆ ನೀಡಲಾಯಿತು. ಜೊತೆಗೆ ಮಂಗಳೂರು ಕೃಷಿ ವಿಜ್ಞಾನ ಕೇಂದ್ರದ ವತಿಯಿಂದ ರೈತರಿಗೆ ಉಚಿತ ಪೌಷ್ಟಿಕಾಂಶ ಪೂರಕ ಆಹಾರ,ಹಾರ್ಮೋನ್ ಇಂಜೆಕ್ಷನ್, ಖನಿಜ ಮಿಶ್ರಣ, ಕ್ಯಾಲ್ಸಿಯಂ ಲಿಕ್ವಿಡ್, ಜಂತು ಹುಳ ನಿವಾರಣಾ ಔಷಧಿಗಳನ್ನು ವಿತರಿಸಲಾಯಿತು.
ಈ ಸಂದರ್ಭ ಸುಮಾರು 10 ಮನೆಗಳಿಗೆ ಭೇಟಿ ನೀಡಿ ಬರಡು ರಾಸುಗಳಿಗೆ ಚಿಕಿತ್ಸೆ ನೀಡಲಾಯಿತು. ಕೃಷ್ಣಪುರ ಕೋಲೋನಿ ಭೇಟಿ ನೀಡಿ ರೈತರಿಗೆ ಮೇವಿನ ಬೀಜ ವಿತರಿಸಲಾಯಿತು.
ಅಮ್ಟೂರು ಹಾ.ಉ.ಸ. ಸಂಘದ ಕಾರ್ಯದರ್ಶಿ ಸೌಮ್ಯ ಸ್ವಾಗತಿಸಿದರು. ಪೆರುವಾಯಿ ಗ್ರಾಮದ ಕೃಷಿ ಸಖಿ ಸವಿತಾ ಡಿ’ಸೋಜಾ ವಂದಿಸಿ, ಗೋಳ್ತಮಜಲು ಗ್ರಾಮದ ಕೃಷಿ ಸಖಿ ಪುಷ್ಪಾವತಿ ನಿರೂಪಿಸಿದರು.