ಅಡಕೆ ಮರ ಬಿದ್ದು ಗಾಯಾಳು ಚಿಕಿತ್ಸೆ ಫಲಿಸದೆ ಮೃತ್ಯು
Saturday, August 29, 2026
ಬಂಟ್ವಾಳ: ಅಮ್ಮುಂಜೆ ಗ್ರಾಮದ ಬೆಂಜನಪದವು ಎಂಬಲ್ಲಿ ಅಡಿಕೆ ತೋಟದಲ್ಲಿ ಅಡಿಕೆ ಮರ ಕಡಿಯುತ್ತಿದ್ದ ವೇಳೆ ಅಡಿಕೆ ಮರ ಬಿದ್ದು ಗಂಭೀರ ಗಾಯಗೊಂಡಿದ್ದ ವ್ಯಕ್ತಿಯೋರ್ವರು ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ.
ಮೃತರನ್ನು ಮಂಗಳೂರು ತಾಲೂಕು ಗುರುಪುರ-ಕೈಕಂಬ, ಮೂಡುಪೆರಾಲು-ಶಾಸ್ತಾವು ನಿವಾಸಿ ನಾಗಪ್ಪ ಗೌಡ (59) ಎಂದು ಹೆಸರಿಸಲಾಗಿದೆ.
ಅಮ್ಮುಂಜೆ ಗ್ರಾಮದ ಬೆಂಜನಪದವು ಅಂದ್ರೋಸ್ ಫೆರ್ನಾಂಡಿಸ್ ಎಂಬವರ ಮನೆಯಲ್ಲಿ ಕೂಲಿ ಕೆಲಸ ಮಾಡಲು ಹೋಗಿದ್ದರು. ತೋಟದಲ್ಲಿ ಅಡಿಕೆ ಮರ ಕಡಿಯುತ್ತಿದ್ದ ವೇಳೆ ಆಕಸ್ಮಿಕವಾಗಿ ಅಡಿಕೆ ಮರ ಅವರ ಕುತ್ತಿಗೆಯ ಬಳಿ ಬಿದ್ದು ಗಂಭೀರ ಗಾಯಗೊಂಡಿದ್ದರು. ತಕ್ಷಣ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸಾ ವೆಚ್ಚದ ಅನಾನುಕೂಲಕ್ಕಾಗಿ ಬಳಿಕ ಮಂಗಳೂರಿನ ವೆಸ್ಲಾಕ್ ಆಸ್ಪತ್ರೆಗೆ ಸೇರಿಸಲಾಗಿತ್ತು. ಅಲ್ಲಿ ಅವರು ಚಿಕಿತ್ಸೆಗೆ ಸ್ಪಂದಿಸದೆ ಶುಕ್ರವಾರ ಕೊನೆಯುಸಿರೆಳೆದಿದ್ದಾರೆ.
ಈ ಬಗ್ಗೆ ಮೃತರ ಪುತ್ರನ ದೂರಿನನ್ವಯ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.