ಪ್ಲಾಸ್ಟಿಕ್ ಧ್ವಜ ಮಾರಾಟದ ವಿರುದ್ಧ ಕಟ್ಟುನಿಟ್ಟಿನ ಕ್ರಮಕ್ಕೆ ಆಗ್ರಹಿಸಿ ಹಿಂದೂ ಜನಜಾಗೃತಿ ಸಮಿತಿ ಮನವಿ
ಹೈಕೋರ್ಟ್ ಆದೇಶದಂತೆ ಜಿಲ್ಲೆಯಲ್ಲಿ ‘ರಾಷ್ಟ್ರ ಧ್ವಜ ಗೌರವ ಕೃತಿ ಸಮಿತಿ’ಯನ್ನು ರಚಿಸಬೇಕು, ನಿಷೇಧಿತ ಪ್ಲಾಸ್ಟಿಕ್ ಧ್ವಜ ಮಾರಾಟ ಮಾಡುವವರ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳಬೇಕು ಮತ್ತು ಶಾಲಾ-ಕಾಲೇಜುಗಳಲ್ಲಿ ಧ್ವಜ ಗೌರವ ಅಭಿಯಾನಕ್ಕೆ ಸೂಚನೆ ನೀಡಬೇಕು ಎಂದು ಆಗ್ರಹಿಸಲಾಗಿದೆ.
ರಾಷ್ಟ್ರಧ್ವಜವು ಪ್ರತಿಯೊಬ್ಬ ಭಾರತೀಯನ ಹೆಮ್ಮೆ, ಆತ್ಮ ಸಮ್ಮಾನ ಮತ್ತು ರಾಷ್ಟ್ರೀಯತೆಯ ಗುರುತಾಗಿದ್ದು, ಆಗಸ್ಟ್ 15ರ ಸ್ವಾತಂತ್ರ್ಯ ದಿನಾಚರಣೆ ಮತ್ತು ಜನವರಿ 26ರ ಗಣರಾಜ್ಯೋತ್ಸವದಂದು ದೇಶಾದ್ಯಂತ ಅತ್ಯಂತ ಅಭಿಮಾನದಿಂದ ರಾಷ್ಟ್ರಧ್ವಜವನ್ನು ಪ್ರದರ್ಶಿಸಲಾಗುತ್ತದೆ, ಆದರೆ ಅದೇ ದಿನ ಸಂಜೆ ಅಥವಾ ಮರುದಿನ ರಸ್ತೆ, ಚರಂಡಿ ಹಾಗೂ ಕಸದ ತೊಟ್ಟಿಗಳಲ್ಲಿ ಕಾಗದ ಮತ್ತು ಪ್ಲಾಸ್ಟಿಕ್‌ನ ಸಣ್ಣ, ಸಣ್ಣ ಧ್ವಜಗಳು ಹರಿದ ಸ್ಥಿತಿಯಲ್ಲಿ ಬಿದ್ದಿರುವುದು ಕಂಡುಬರುತ್ತದೆ.
ಈ ಧ್ವಜಗಳು ಜನರ ಕಾಲಿನಕೆಳಗೆ ತುಳಿಯಲ್ಪಟ್ಟು ರಾಷ್ಟ್ರಧ್ವಜಕ್ಕೆ ಘೋರ ಅನಾದರವಾಗುತ್ತಿದೆ, ಧ್ವಜದ ಗೌರವಕ್ಕಾಗಿ ತಮ್ಮ ಪ್ರಾಣವನ್ನೇ ಅರ್ಪಿಸಿದ ದೇಶಭಕ್ತರು ಮತ್ತು ಕ್ರಾಂತಿಕಾರಿಗಳ ತ್ಯಾಗಕ್ಕೆ ಎಸಗುವ ಅಪಚಾರವಾಗಿದೆ. ಇದಲ್ಲದೆ, ‘ತ್ರಿವರ್ಣ ಮಾಸ್ಕ್’ಗಳನ್ನು ಧರಿಸುವುದು ಅಥವಾ ಮಾರಾಟ ಮಾಡುವುದು ಧ್ವಜ ಸಂಹಿತೆಯ ಪ್ರಕಾರ ಅಪರಾಧವಾಗಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
