ನರಹರಿ ಪರ್ವತ, ಕಾರಿಂಜದಲ್ಲಿ ತೀರ್ಥಸ್ನಾನಗೈದು ಪುನೀತರಾದ ಭಕ್ತ ಸಮೂಹ

ನರಹರಿ ಪರ್ವತ, ಕಾರಿಂಜದಲ್ಲಿ ತೀರ್ಥಸ್ನಾನಗೈದು ಪುನೀತರಾದ ಭಕ್ತ ಸಮೂಹ


ಬಂಟ್ವಾಳ: ‘ಭೂಲೋಕದ ಕೈಲಾಸ’ ಎಂದೇ ಪ್ರಸಿದ್ಧವಾಗಿರುವ ಹಚ್ಚ ಹಸಿರಿನ ಪ್ರಕೃತಿಯ ಸೌಂದರ್ಯ ತಾಣ ನರಹರಿ ಪರ್ವತ ಸದಾಶಿವ ದೇವಸ್ಥಾನ ಹಾಗೂ ಮಹತೋಬಾರ ಶ್ರೀಕ್ಷೇತ್ರ ಕಾರಿಂಜದಲ್ಲಿ ಆಟಿ ಅಮಾವಾಸ್ಯೆ ಪ್ರಯುಕ್ತ ಬುಧವಾರ ವಿಶೇಷವಾದ ತೀರ್ಥಸ್ನಾನ ಸಹಿತ ವಿವಿಧ ಧಾರ್ಮಿಕ ವಿಧಿವಿಧಾನಗಳು ನೆರವೇರಿತು.


ಏಳು ಎಲೆಗಳ ವೃತ್ತಾಕಾರದ ಜೋಡಣೆಯ ‘ಸಪ್ತವರ್ಣ’ ಪಾಲೆಯ ಮರದ ರಸವನ್ನು ಸೂರ್ಯೋದಯದ ಮೊದಲು ಸೇವಿಸುವ ತುಳುನಾಡಿನ ಪರಂಪರೆಯ ದಿನ ಆಟಿ ಅಮವಾಸ್ಯೆ ತೀರ್ಥಸ್ನಾನದ ಪವಿತ್ರದಿನವಾಗಿದೆ.


ಈ ದಿನದಂದು ಮುಂಜಾನೆ 4 ಗಂಟೆಯಿಂದಲೇ ಭಕ್ತರು ಈ ಎರಡೂ ದೇವಸ್ಥಾನಗಳತ್ತ ಆಗಮಿಸಲು ಆರಂಭಿಸಿದ್ದು, ಬೆಳಗಾಗುತ್ತಿದ್ದಂತೆ ಭಕ್ತರ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿತ್ತು. ದೇವಸ್ಥಾನದ ಪರಿಸರದಲ್ಲಿ ಭಕ್ತ ಸಮೂಹವೇ ಸಾಲುಗಟ್ಟಿ ಅಗಮಿಸುತ್ತಿರುವುದು ಕಂಡುಬಂತು. ತಾಲೂಕು ಮಾತ್ರವಲ್ಲ ಜಿಲ್ಲೆಯಾದ್ಯಂತದಿಂದ ನೂರಾರು ಮಂದಿ ಕುಟುಂಬ ಸಮೇತರಾಗಿ ಆಗಮಿಸಿ ತೀರ್ಥಸ್ನಾನ ನೆರವೇರಿಸಿ, ದೇವರ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು.


ವಿಶೇಷವಾಗಿ ನವ ವಧು-ವರರು ನರಹರಿ ಮತ್ತು ಶ್ರೀಕಾರಿಂಜ ಕ್ಷೇತ್ರದಲ್ಲಿರುವ  ಪವಿತ್ರಕೆರೆಯಲ್ಲಿ ತೀರ್ಥಸ್ನಾನಗೈದು, ದೇವರಿಗೆ ವಿವಿಧ ಸೇವೆ ಸಲ್ಲಿಸಿ ಪುನೀತರಾದರು.


ಐತಿಹಾಸಿಕ ಹಿನ್ನಲೆಯತಾಲೂಕಿನ ಈ ಎರಡೂ ಕ್ಷೇತ್ರಗಳು ಬರಿಯ ದೇಗುಲಗಳ ಬೀಡಲ್ಲ. ನಿಸರ್ಗ ಪ್ರಿಯರಿಗೆ ಪ್ರಕೃತಿ ಸೌಂದರ್ಯದ ಮಡಿಲು, ಭಾವುಕರಿಗೆ-ನಂದ ಗೋಕುಲ, ನೊಂದವರಿಗೆ-ಶಾಂತಿ ಧಾಮ, ವಿಹಾರಿಗಳಿಗೆ-ಹಚ್ಚ ಹಸಿರಿನ ಸುಂದರ ತಾಣ ಬಾಳಿನಲ್ಲಿ ಬಳಲಿದವರಿಗೆ ಪ್ರಶಾಂತ ಶಾಂತಿ ಧಾಮವು ಆಗಿದೆ.


ಕಾರಿಂಜದಲ್ಲಿ ಗದಾ ತೀರ್ಥ:

ಶ್ರೀ ಕ್ಷೇತ್ರ ಕಾರಿಂಜದಲ್ಲಿರುವ ಗದಾ ತೀರ್ಥವು ವಿಶೇಷ ಧಾರ್ಮಿಕ ಮಹತ್ವವನ್ನು ಹೊಂದಿದೆ. ದ್ವಾಪರಯುಗದಲ್ಲಿ ಪಾಂಡವರಲ್ಲಿ ಬಲಶಾಲಿಯಾದ ಭೀಮನು ತನ್ನ ಗದೆಯನ್ನು ನೆಲಕ್ಕೆ ಎಸೆದಾಗ ಆ ಸ್ಥಳದಲ್ಲಿ ಕೊಳವೊಂದು ನಿರ್ಮಾಣವಾಯಿತು. ಈ ಪವಿತ್ರ ಜಲಾಶಯವೇ ಮುಂದೆ ‘ಗದಾ ತೀರ್ಥ’ ಎಂದು ಪ್ರಸಿದ್ಧಿಯಾಯಿತು ಎಂಬ ಐತಿಹ್ಯವಿದೆ.


ಕಾರಿಂಜೇಶ್ವರ ಕ್ಷೇತ್ರದ ಪೌರಾಣಿಕ ಹಿನ್ನೆಲೆ ಹಾಗೂ ಶಿವ-ಪಾರ್ವತಿಯ ಆರಾಧನೆಯೊಂದಿಗೆ ಇಲ್ಲಿನ ತೀರ್ಥಗಳಿಗೂ ವಿಶೇಷ ಸ್ಥಾನವಿದೆ. ಆಟಿ ಅಮಾವಾಸ್ಯೆಯಂತಹ ಪವಿತ್ರ ದಿನಗಳಲ್ಲಿ ಇಲ್ಲಿ ತೀರ್ಥ ಸ್ನಾನ ಮಾಡುವುದರಿಂದ ಪುಣ್ಯ ಲಭಿಸುತ್ತದೆ ಎಂಬ ಭಕ್ತರ ನಂಬಿಕೆ. ಈ ಕಾರಣಕ್ಕಾಗಿಯೇ ಮುಂಜಾನೆಯಿಂದಲೇ ಭಕ್ತರು ಕ್ಷೇತ್ರಕ್ಕಾಗಮಿಸಿ ತೀರ್ಥಸ್ನಾನಗೈದು, ಶಿವ-ಪಾರ್ವತಿಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸುತ್ತಾರೆ.

ಶಂಖ, ಚಕ್ರ, ಗದಾ, ಪದ್ಮ ತೀರ್ಥಗಳ ವಿಶೇಷತೆ:

ಸಮುದ್ರ ಮಟ್ಟದಿಂದ ಸಾವಿರ ಅಡಿ ಎತ್ತರದ ನಯನ ಮನೋಹರವಾದ ರಮಣೀಯ ತಾಣವಾಗಿರುವ ನರಹರಿ ಪರ್ವತದಲ್ಲಿರುವ ಶ್ರೀ ಸದಾಶಿವ ದೇವಸ್ಥಾನದಲ್ಲಿ ಶಂಖ, ಚಕ್ರ, ಗದಾ  ಮತ್ತು ಪದ್ಮ ತೀರ್ಥ ಕೂಪ ಅತ್ಯಂತ ಪ್ರಸಿದ್ಧಿಯಾಗಿದೆ.

ಪಾಂಡವರ ಪಾಪ ವಿಮೋಚನೆಗಾಗಿ ಶ್ರೀಕೃಷ್ಣನು ತನ್ನ ದೈವಿಕ ಆಯುಧಗಳಾದ ಶಂಖ, ಚಕ್ರ, ಗದಾ ಹಾಗೂ ಪದ್ಮಗಳ ಸಂಕೇತವಾಗಿ ನಾಲ್ಕು ಪವಿತ್ರ ತೀರ್ಥಗಳನ್ನು ನಿರ್ಮಿಸಿದನು ಎಂಬುದು ಕ್ಷೇತ್ರದ ಐತಿಹ್ಯವಿದೆ. ಇಂದಿಗೂ ಈ ನಾಲ್ಕು ತೀರ್ಥಗಳು ಕ್ಷೇತ್ರದ ಪ್ರಮುಖ ಧಾರ್ಮಿಕ ಆಕರ್ಷಣೆಯಾಗಿವೆ.

ಆಟಿ ಅಮಾವಾಸ್ಯೆಯಂದು ಈ ತೀರ್ಥಗಳಲ್ಲಿ ಸ್ನಾನ ಮಾಡುವುದರಿಂದ ಪಾಪ ಪರಿಹಾರವಾಗಿ ಪುಣ್ಯ ಪ್ರಾಪ್ತಿಯಾಗುತ್ತದೆ ಎಂಬುದು ಭಕ್ತರ ನಂಬಿಕೆಯಾಗಿದೆ. ಹೀಗಾಗಿ ಆಟಿ ಅಮಾವಾಸ್ಯೆಯಂದು ಊರ, ಪರವೂರಿನಿಂದಲು ಅಸಂಖ್ಯಾತ ಭಕ್ತರು ನರಹರಿ ಪರ್ವತಕ್ಕೆ ಆಗಮಿಸಿ ತೀರ್ಥಸ್ನಾನಗೈದು ಪುನೀತರಾಗುತ್ತಾರೆ. ಆಟಿ ಅಮಾವಾಸ್ಯೆಯಂದು ಈ ನಾಲ್ಕು ತೀರ್ಥಗಳಲ್ಲಿ ಸ್ನಾನ ಮಾಡುವ ಆಚರಣೆ ಬಹುಕಾಲದಿಂದ ನಡೆದುಕೊಂಡು ಬರುತ್ತಿದೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article