ಸೇತುವೆಯಿಂದ ನೀರಿಗೆ ಜಿಗಿತ, ಬಾಲಕರಿಂದ ನೆರೆ ನೀರಿನಲ್ಲಿ ಈಜು: ಇಲಾಖೆಯ ನಿರ್ಲಕ್ಷ್ಯ
Monday, August 3, 2026
ಬಂಟ್ವಾಳ: ಪಾಣೆಮಂಗಳೂರಿನ ಬ್ರಿಟಿಷ್ ಕಾಲದ ಉಕ್ಕಿನ ಸೇತುವೆ ಮೇಲಿಂದ, ಅದರ ಮಧ್ಯಭಾಗದಿಂದ ತುಂಬಿ ಹರಿಯವ ನೇತ್ರಾವತಿ ನದಿ ನೀರಿಗೆ ಈಜುಗಾರರ ಸೋಗಿನಲ್ಲಿ ಜಿಗಿಯುವ ಸಾಹಸ ಈ ವರ್ಷವು ಪುನರ್‌ವರ್ತನೆಯಾಗಿದೆ.
ನದಿ ನೀರು ಅಪಾಯದ ಮಟ್ಟದಲ್ಲಿದ್ದಾಗ ಸಾರ್ವಜನಿಕರು ನದಿ ತೀರಕ್ಕೆ ತೆರಳದಂತೆ ತಾಲೂಕು ಆಡಳಿತ ಮತ್ತು ಪೊಲೀಸ್ ಇಲಾಖೆ ಮಾಡುವ ಆದೇಶ ಕೇವಲ ಕಡತಕ್ಕೆ ಸೀಮಿತವಾಗಿದೆಯೇ ವಿನಹ ಕಾರ್ಯರೂಪಕ್ಕೆ ಬಂದಂತೆ ಕಾಣುವುದಿಲ್ಲ ಎಂಬುದು ಪಾಣೆಮಂಗಳೂರು ಹಳೆಯ ಸೇತುವೆ ಮೇಲಿಂದ ನೇತ್ರಾವತಿ ನದಿಗೆ ಯುವಕರು ಮಾತ್ರವಲ್ಲ ಅಪ್ರಾಪ್ತ ಬಾಲಕರು ಜಿಗಿಯುವ ಭಯಾನಕ ದೃಶ್ಯ ಸಾಕ್ಷಿ ಹೇಳುತ್ತಿದೆ.
ಮಳೆಗಾಲದ ಪ್ರತಿವರ್ಷ ಪಾಣೆಮಂಗಳೂರು ಹಳೆಯ ಸೇತುವೆ ಮೇಲಿಂದ ನೇತ್ರಾವತಿ ನದಿಗೆ ಹಾಗೂ ನಂದಾವರ ಶಾರದ ಶಾಲೆ ಬಳಿ ಭಾರೀ ದೊಡ್ಡ ಈಜುಗಾರರೆಂಬ ಪೋಸ್ ಕೊಡಲು ಮುಂದಾಗುವ ಕೆಲ ಯುವಕರ ಸಹಿತ ಅಪ್ರಾಪ್ತ ಬಾಲಕರು ಈ ಹುಚ್ಚು ಸಾಹಸ ನಡೆಸಿದ್ದಾರೆಂದು ಆರೋಪಿಸಲಾಗಿದೆ.
ಸೋಮವಾರವು ತುಂಬಿ ಹರಿಯುತ್ತಿದ್ದ ನೀರಿನ ಮಟ್ಟ ಕೊಂಚ ಇಳಿಮುಖವಾಗಿದ್ದು, ಕೆಲ ಶಾಲಾ ವಿದ್ಯಾರ್ಥಿಗಳ ಸಹಿತ ಯುವಕರು ಅಪಾಯಕಾರಿ ಸಾಹಸಮಯ ಹಾಗೂ ಕೆಸರು ತುಂಬಿದ ನೆರೆ ನೀರಿನಲ್ಲೇ ಬಾಲಕರು ಈಜುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಪ್ರತಿ ವರ್ಷ ಈ ಹುಚ್ಚು ಸಾಹಸದ ಬಗ್ಗೆ ಮಾಧ್ಯಮಗಳು ಸಚಿತ್ರ ವರದಿ ಪ್ರಕಟಿಸಿದರೂ ಜಿಲ್ಲಾಡಳಿತ ಬಿಡಿ ಕನಿಷ್ಠ ತಾಲೂಕಾಡಳಿತ, ಪೊಲೀಸ್ ಇಲಾಖೆ ಕಾನೂನು ಕ್ರಮಕೈಗೊಳ್ಳದೆ ನಿರ್ಲಕ್ಷ್ಯ ವಹಿಸಿದ್ದೆ. ಪದೇಪದೇ ಪುನಾರಾರ್ವತನೆಯಾಗುತ್ತಿದೆ ಎಂದು ಸಾರ್ವಜನಿಕರು ದೂರಿದ್ದಾರೆ.
ನೀರಿಗೆ ಜಿಗಿಯುವ ಸಂದರ್ಭದಲ್ಲಿ ಯಾವುದೇ ಅನಾಹುತ ಸಂಭವಿಸಿದಲ್ಲಿ ಇದಕ್ಕೆ ಯಾರು ಹೊಣೆ ಎಂಬ ಪ್ರಶ್ನೆಯು ಎದ್ದಿದ್ದು ಅಧಿಕಾರಿಗಳ ಎಚ್ಚರಿಕೆಯ ಸಂದೇಶಗಳು ಕಾಗದ, ಮಾಧ್ಯಮಗಳಿಗೆ ಸೀಮಿತವಾಗದೆ ಕಾರ್ಯರೂಪಕ್ಕೂ ಬರುವ ನಿಟ್ಟಿನಲ್ಲಿ ಮುಂದಾಗಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

