ಅಪ್ರಾಪ್ತ ಬಾಲಕಿಯ ಹಿಂಬಾಲಿಸಿದಾತನ ಬಂಧನ
Friday, August 21, 2026
ಬಂಟ್ವಾಳ: ಅಪ್ರಾಪ್ತ ವಯಸ್ಸಿನ ಬಾಲಕಿಯನ್ನು ಹಿಂಬಾಲಿಸಿ, ಆಕೆಯನ್ನು ಗಮನಿಸುತ್ತಿದ್ದ ಆರೋಪದಲ್ಲಿ ಬಂಟ್ವಾಳ ನಗರ ಠಾಣೆ ಪೊಲೀಸರು ವ್ಯಕ್ತಿಯೋರ್ವನನ್ನು ಬಂಧಿಸಿದ್ದಾರೆ.
16 ರ ಹರೆಯದ ಬಾಲಕಿಯೋರ್ವಳು ಕೆಲ ದಿನಗಳಿಂದ ಬಸ್ಸಿನಲ್ಲಿ ಪ್ರಯಾಣಿಸುವ ಸಂದರ್ಭದಲ್ಲಿ ಅಪರಿಚಿತ ವ್ಯಕ್ತಿಯೋರ್ವ ತನ್ನನ್ನು ಹಿಂಬಾಲಿಸುತ್ತಿರುವ ಬಗ್ಗೆ ಆತಂಕಗೊಂಡು ತಾಯಿಯಲ್ಲಿ ತಿಳಿಸಿದ್ದಾಳೆ.
ಗುರುವಾರ ಸಂಜೆ ಬಾಲಕಿ ಕಲ್ಲಡ್ಕ ಬಸ್ ನಿಲ್ದಾಣದಲ್ಲುದ್ದಾಗ ಈ ವ್ಯಕ್ತಿ ಅಲ್ಲಿಯೂ ಆಕೆಯನ್ನು ಗಮನಿಸುತ್ತಿರುವುದು ಕಂಡುಬಂದಿದ್ದು, ಇದರಿಂದ ಆತಂಕಿತಳಾದ ಬಾಲಕಿ ತನ್ನ ತಾಯಿಯ ಕೆಲಸದ ಸ್ಥಳಕ್ಕೆ ತೆರಳಿ ವಿಷಯ ತಿಳಿಸಿದ್ದಾಳೆ.
ಬಾಲಕಿಯ ತಾಯಿ ಕಚೇರಿ ಮಾಲೀಕರೊಂದಿಗೆ ಬಸ್ ನಿಲ್ದಾಣದ ಬಳಿ ತೆರಳಿದಾಗ ಅಪರಿಚಿತ ವ್ಯಕ್ತಿ ಅಲ್ಲಿ ನಿಂತಿದ್ದು ಖಚಿತಪಟ್ಟಿತ್ತು. ಅತನನ್ನು
ವಿಚಾರಿಸಿದಾಗ ತನ್ನ ಹೆಸರು ಜಯಂತ್ ಎಂದು ತಿಳಿಸಿ ಅಲ್ಲಿಂದ ತೆರಳಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಈ ಬಗ್ಗೆ ಪ್ರಕರಣ ದಾಖಲಿಸಿರುವ ಬಂಟ್ವಾಳ ನಗರ ಪೊಲೀಸರು ಬಂಟ್ವಾಳ ತಾಲೂಕಿನ ಸರಪಾಡಿ ನಿವಾಸಿ ಜಯಂತ್ (47) ಎಂಬಾತನನ್ನು ಬಂಧಿಸಿ ವಿಚಾರಣೆ ನಡೆಸಿ, ಬಳಿಕ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.