ನಾವೆಲ್ಲರೂ ಒಟ್ಟಾಗಿ ದೇಶದ ಪ್ರಗತಿಯನ್ನು ಮುನ್ನಡೆಸೋಣ: ಸುನಿಲ್ ಕುಮಾರ್
ಅವರು 80ನೇ ಸ್ವಾತಂತ್ರ್ಯೋತ್ಸವ ಪ್ರಯುಕ್ತ ಕಾರ್ಕಳ ತಾಲೂಕು ಆಡಳಿತ ವತಿಯಿಂದ ಮಂಜುನಾಥ ಪೈ ಸ್ಮಾರಕ ಪ್ರತಿಷ್ಠಾನ ಸಭಾಭವನದಲ್ಲಿ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಇಂದು ಜಗತ್ತು ಶೈಕ್ಷಣಿಕವಾಗಿ, ಸಾಮಾಜಿಕವಾಗಿ, ಆರ್ಥಿಕವಾಗಿ ಹೊಸ ಬದಲಾವಣೆಯನ್ನು ಕಾಣುತ್ತಿರುವ ಸಂದರ್ಭದಲ್ಲಿ ಹಾಗೂ ಜಗತ್ತಿನಾದ್ಯಂತ ಯುದ್ಧದ ಕಾರ್ಮೋಡ ನಿರ್ಮಾಣ ಆದಾಗಲೂ ಕೂಡ ಭಾರತ ಆರ್ಥಿಕವಾಗಿ ಹಿಂಜರಿಯಲಿಲ್ಲ. ಇದು ದೇಶದ ಪ್ರಗತಿಯನ್ನು ಸೂಚಿಸುತ್ತದೆ. ಈ ಪ್ರಗತಿಯ ಹೆಜ್ಜೆಯನ್ನು ಮತ್ತಷ್ಟು ಗಟ್ಟಿಯಾಗಿ ಮುನ್ನೆಡೆಸುವ ಹೊಣೆಗಾರಿಕೆ ಯುವಸಮುದಾಯದ್ದಾಗಿದೆ. 2047ರ ಅವಧಿಗೆ ಜಗತ್ತಿನ ಎತ್ತರದ ಸ್ಥಾನದಲ್ಲಿ ಭಾರತ ನಿಲ್ಲುವಂತಾಗಲಿ. ಭಾರತದ ನೇತೃತ್ವವನ್ನು ಜಗತ್ತು ಒಪ್ಪಿಕೊಳ್ಳುವಂತಾಗಲಿ. ಈ ನಿಟ್ಟಿನಲ್ಲಿ ನಾವೆಲ್ಲರೂ ಒಟ್ಟಾಗಿ ಕಾರ್ಯನಿರ್ವಹಿಸೋಣ ಎಂದು ಹೇಳಿದರು.
ಧ್ವಜಾರೋಹಣ
ಅನಂತಶಯನ ವೃತ್ತದಲ್ಲಿ ಕಾರ್ಕಳ ತಾಲೂಕು ಕಾರ್ಯನಿರ್ವಾಹಕ ದಂಡಾಧಿಕಾರಿ ಹಾಗೂ ತಹಶೀಲ್ದಾರ್ ಪ್ರದೀಪ್ ಆರ್. ಅವರು ರಾಷ್ಟ್ರ ಧ್ವಜಾರೋಹಣ ನೆರವೇರಿಸಿದರು. ಅನಂತರ ಅನಂತಶಯನ ವೃತ್ತದಿಂದ ಗಾಂಧಿ ಮೈದಾನದವರೆಗೆ ಪಥ ಸಂಚಲನ ನಡೆಯಿತು. ಗಾಂಧಿ ಮೈದಾನದಲ್ಲಿ ದಂಡಾಧಿಕಾರಿಯವರು ರಾಷ್ಟ್ರ ಧ್ವಜಾರೋಹಣ ನಡೆಸಿದರು. ಬಳಿಕ ಪೊಲೀಸರು, ಗೃಹ ರಕ್ಷಕ ದಳ, ವಿವಿಧ ಶಾಲಾ ವಿದ್ಯಾರ್ಥಿಗಳಿಂದ ಪಥಸಂಚಲನ ನಡೆಯಿತು. ನಗರ ಪೊಲೀಸ್ ಠಾಣೆಯ ಉಪನಿರೀಕ್ಷಕ ಶಿವಕುಮಾರ್ ಪರೇಡ್ ಕಮಾಂಡರ್ ಆಗಿ ಕಾರ್ಯನಿರ್ವಹಸಿದರು. ಶಿಕ್ಷಕ ಸಂಜಯ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು.
ಸಂದೇಶ ವಾಚನ
ಧ್ವಜಾರೋಹಣ ನೆರವೇರಿಸಿ ಸಂದೇಶ ವಾಚಿಸಿದ ತಹಶೀಲ್ದಾರ್ ಪ್ರದೀಪ್ ಆರ್. ನಾವು ಕೇವಲ ವ್ಯಕ್ತಿಗಳಲ್ಲ ಬದಲಾಗಿ ದೇಶದ ಜನಸಮುದಾಯದ ಜವಾಬ್ದಾರಿಯುತ ಭಾಗ ಎಂಬುದನ್ನು ಸ್ವಾತಂತ್ರ್ಯ ದಿನಾಚರಣೆ ಸದಾ ನೆನಪಿಸುತ್ತದೆ. ನಮ್ಮ ಗುರತು ಕೇವಲ ನಮ್ಮ ವೃತ್ತಿ ಹಾಗೂ ಕುಟುಂಬದಿಂದ ಮಾತ್ರವಾಗದೆ ನಾವೆಲ್ಲರೂ ಭಾರತೀಯರು ಎಂಬ ಗುರತು ನಮ್ಮದಾಗಿದೆ. ಸ್ವಾತಂತ್ರ್ಯಕ್ಕಾಗಿ ಹೋರಾಡಿದ ನಾಯಕರಿಗೆ, ದೇಶಕ್ಕಾಗಿ ಹೋರಾಡುತ್ತಿರುವ ಸೈನಿಕರಿಗೆ ಹಾಗು ನಾಡಿಗಾಗಿ ದುಡಿಯುವ ಎಲ್ಲರಿಗೆ ನಾವು ಕೃತಜ್ಞರು ಎಂದು ಹೇಳಿದರು.
ಸಭಾ ಕಾರ್ಯಕ್ರಮದಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಕಾರ್ಕಳ ತಾಲೂಕು ಅಧ್ಯಕ್ಷ ಅಜಿತ್ ಹೆಗ್ಡೆ ಮಾಳ ಮಾತನಾಡಿ, ಹಿರಿಯರ ತ್ಯಾಗ ಬಲಿದಾನಗಳ ಪ್ರತೀಕವೇ ಸ್ವಾತಂತ್ರ್ಯ. ಸ್ವತಂತ್ರ ಭಾರತವನ್ನು ಮತ್ತಷ್ಟು ಬಲಿಷ್ಟಗೊಳಿಸುವ ಕರ್ತವ್ಯ ನಮ್ಮದಾಗಿದೆ. ಉತ್ತಮ ಸಮಾಜ ನಿರ್ಮಾಣ ಮಾಡುವಲ್ಲಿ ಒಟ್ಟಾಗಿ ಕಾರ್ಯನಿರ್ವಹಿಸೋಣ ಎಂದರು.
ಸನ್ಮಾನ
ಕಲಾಮ್ಸ್ ವರ್ಡ್ ರೆಕಾರ್ಡ್ಸ್ ವತಿಯಿಂದ ಎಕ್ಸ್ಟ್ರಾಡಿನರಿ ಗ್ರಾಪ್ಸಿಂಗ್ ಪವರ್ - ಗಿನ್ನಿಸ್ ಕಿಡ್ ಎಂಬ ಗೌರವ ಪಡೆದಿರುವ ಬಜಗೋಳಿಯ ಸಂಗೀತಾ ಎಸ್. ಕೆಸಾಪುರ ಹಾಗೂ ಸಿದ್ದು ಕೆಸಾಪುರ ದಂಪತಿಯ ಪುತ್ರಿ 2 ವರ್ಷ 2 ತಿಂಗಳ ಮಗು ಸಹಸ್ರಾ ಎಸ್. ಕೆಸಾಪುರ ಅವರನ್ನು ಅಭಿನಂದಿಸಲಾಯಿತು. ಕಾರ್ಯಕ್ರಮದಲ್ಲಿ 2025-26ನೇ ಶೈಕ್ಷಣಿಕ ಸಾಲಿನಲ್ಲಿ ಎಸ್ಸೆಸೆಲ್ಸಿ ಮತ್ತು ಪಿಯುಸಿಯಲ್ಲಿ ಅತ್ಯಧಿಕ ಅಂಕ ಪಡೆದ ತಾಲೂಕಿನ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ನಾಡಪ್ರಭು ಕೆಂಪೇಗೌಡ ಆಚರಣೆಯಂಗವಾಗಿ ನಡೆಸಿದ ವಿವಿಧ ಸ್ಪರ್ಧೆಯ ವಿಜೇತರನ್ನು ಅಭಿನಂದಿಸಲಾಯಿತು. ಶಿಕ್ಷಕ ಗಣೇಶ್ ಜಾಲ್ಸೂರು ಕಾರ್ಯಕ್ರಮ ನಿರ್ವಹಿಸಿದರು.
ವೇದಿಕೆಯಲ್ಲಿ ತಹಶೀಲ್ದಾರ್ ಪ್ರದೀಪ್ ಆರ್., ಪುರಸಭಾ ಮುಖ್ಯಾಧಿಕಾರಿ ಲೀನಾ ಬ್ರಿಟ್ಟೋ ಉಪಸ್ಥಿತರಿದ್ದರು. ವಿವಿಧ ಇಲಾಖಾಧಿಕಾರಿಗಳು, ತಾಲೂಕಿನ ವಿವಿಧ ಶಾಲಾ ಶಿಕ್ಷಕರು, ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಪೆರ್ವಾಜೆ ಶಾಲಾ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಗಿರಿಜಮ್ಮ ಎಸ್. ಆರ್. ಸ್ವಾಗತಿಸಿದರು. ಶಿಕ್ಷಕ ದೇವದಾಸ್ ಕೆರೆಮನೆ ಕಾರ್ಯಕ್ರಮ ನಿರೂಪಿಸಿ, ತಾ.ಪಂ. ಪ್ರಭಾರ ಕಾರ್ಯನಿರ್ವಹಣಾಧಿಕಾರಿ ಕೃಷ್ಣಾನಂದ್ ವಂದಿಸಿದರು. ಬಳಿಕ ವಿವಿಧ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.