ನೀರಿನಲ್ಲಿ ಮುಳುಗಿ ವಿದ್ಯಾರ್ಥಿ ಸಾವು
ಕಾಸರಗೋಡು: ಸ್ನೇಹಿತರೊಂದಿಗೆ ಕೆರೆಗೆ ಸ್ನಾನಕ್ಕೆ ತೆರಳಿದ್ದ 8ನೇ ತರಗತಿ ವಿದ್ಯಾರ್ಥಿಯೊಬ್ಬ ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ದಾರುಣ ಘಟನೆ ಉಪ್ಪಳದಲ್ಲಿ ನಡೆದಿದೆ. ಉಪ್ಪಳದ ಪೆರಿಂಗಾಡಿಯ ಅಲಿ ಹಾಗೂ ಸುಲೈಖಾ ದಂಪತಿಯ ಪುತ್ರ ಅಬೂಬಕರ್ ಅಸನ್ (13) ಮೃತ ವಿದ್ಯಾರ್ಥಿ. ಅವರು ಮಂಗಲ್ಪಾಡಿ ಸರ್ಕಾರಿ ಪ್ರೌಢಶಾಲೆಯಲ್ಲಿ ೮ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದರು.
ಆಗಸ್ಟ್ 11ರ ಸಂಜೆ ಈ ಘಟನೆ ನಡೆದಿದ್ದು, ಅಬೂಬಕರ್ ತಮ್ಮ ಮನೆಯ ಸಮೀಪದಲ್ಲಿರುವ ಕೆರೆಗೆ ಸ್ನೇಹಿತರೊಂದಿಗೆ ಸ್ನಾನಕ್ಕೆ ತೆರಳಿದ್ದರು. ಸ್ನಾನ ಮುಗಿಸಿದ ಬಳಿಕ ಸ್ನೇಹಿತರೆಲ್ಲರೂ ಮನೆಗೆ ಮರಳಿದ್ದರು. ಆದರೆ ಅಬೂಬಕರ್ ಮಾತ್ರ ಮನೆಗೆ ಬಾರದ ಕಾರಣ ಆತಂಕಗೊಂಡ ಕುಟುಂಬಸ್ಥರು ಹಾಗೂ ಸ್ಥಳೀಯರು ಸುತ್ತಮುತ್ತ ಹುಡುಕಾಟ ನಡೆಸಿದರು. ಆದರೂ ಅವರ ಯಾವುದೇ ಸುಳಿವು ಪತ್ತೆಯಾಗಿರಲಿಲ್ಲ.
ನಂತರ ಸಮೀಪದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಅಬೂಬಕರ್ ಕೆರೆಯಲ್ಲಿ ಮುಳುಗಿರುವುದು ಪತ್ತೆಯಾಗಿದೆ.
ಈ ಹಿನ್ನೆಲೆಯಲ್ಲಿ ಸ್ಥಳೀಯರು ಹಾಗೂ ಉಪ್ಪಳದಿಂದ ಆಗಮಿಸಿದ ಅಗ್ನಿಶಾಮಕ ಮತ್ತು ರಕ್ಷಣಾ ಸಿಬ್ಬಂದಿ ಕೆರೆಯಲ್ಲಿ ಶೋಧ ಕಾರ್ಯ ನಡೆಸಿದರು. ತಡರಾತ್ರಿ ಅಬೂಬಕರ್ ಅವರ ಮೃತದೇಹವನ್ನು ನೀರಿನಿಂದ ಹೊರತೆಗೆಯಲಾಯಿತು.
ತಕ್ಷಣ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ವೈದ್ಯರು ಪರೀಕ್ಷಿಸಿ ಮೃತಪಟ್ಟಿರುವುದಾಗಿ ಘೋಷಿಸಿದರು. ಮೃತದೇಹವನ್ನು ಮಂಗಲ್ಪಾಡಿ ತಾಲೂಕು ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ.
ಘಟನೆಗೆ ಸಂಬಂಧಿಸಿದಂತೆ ಮಂಜೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣ ಸಂಬಂಧ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.