ಕನಸಿನ ಮನೆಯ ತಳಭಾಗದಲ್ಲಿ ನೀರು ತುಂಬಿದ ಗುಹೆ..: ಆತಂಕದಲ್ಲಿ ಕುಟುಂಬ

ಕನಸಿನ ಮನೆಯ ತಳಭಾಗದಲ್ಲಿ ನೀರು ತುಂಬಿದ ಗುಹೆ..: ಆತಂಕದಲ್ಲಿ ಕುಟುಂಬ


ಕಾಸರಗೋಡು: ಸ್ವಂತ ಮನೆ ಪ್ರತಿಯೊಬ್ಬರ ಕನಸು. ಜೀವಮಾನದ ಉಳಿತಾಯ, ಬ್ಯಾಂಕ್ ಸಾಲ, ಕೈ ಸಾಲ, ಚಿನ್ನ ಅಡವಿಟ್ಟು  ತಂದ ದುಡ್ಡಿನಿಂದ ತಮ್ಮ ಕನಸಿನ ಮನೆಯನ್ನು ಸಾಕಾರಗೊಳಿಸುವ ಮಂದಿ ನಮ್ಮ ನಡುವೆ ಇದ್ದಾರೆ, ಹೀಗೆ ಆಸೆ ಆಕಾಂಕ್ಷೆಗಳೊಂದಿಗೆ ಕಟ್ಟಿದ ಹೊಸ ಮನೆಗೆ ಪ್ರವೇಶಿಸುವ ಮುನ್ನವೇ ಮನೆಯ ತಳಭಾಗದಲ್ಲಿ ನೀರು ತುಂಬಿದ ಗುಹೆ ಕಾಣಿಸಿಕೊಂಡರೆ...

ಇಂತಹದೊಂದು ಅಪರೂಪದ ಘಟನೆ ಕಾಸರಗೋಡಿನ ಕುಂಡಂಗುಯಿ ಆನೆಕಲ್ಲು ಒಟ್ಟಮಾವಿಂಕಲ್‌ನಲ್ಲಿ ನಡೆದಿದ್ದು, ಕುಟುಂಬವು ಬೀದಿಗೆ ಬೀಳುವ ಆತಂಕದಲ್ಲಿದೆ. 

ಒಟ್ಟಮಾವಿಂಕಲ್‌ನ ನಿವಾಸಿ ಸದನ್ ಅವರ ಹೊಸ ಮನೆಯ ತಳಭಾಗದಲ್ಲಿ ಬೃಹತ್ ಆಕಾರದ ಗುಹೆಯೊಂದು ಪತ್ತೆಯಾಗಿದ್ದು, ಕುಟುಂಬ ತೀವ್ರ ಆಘಾತಕ್ಕೆ ಒಳಗಾಗಿದೆ. ಜೆಸಿಬಿ ಕಾರ್ಯಾಚರಣೆಯ ಸಂದರ್ಭದಲ್ಲಿ ಗುಹೆ ಪತ್ತೆಯಾಗಿದೆ.

ಆ. 28ರಂದು ಹೊಸ ಮನೆಯ ಗೃಹ ಪ್ರವೇಶ ಕಾರ್ಯಕ್ರಮ ನಡೆಸಲು ಸಿದ್ಧತೆ ನಡೆಸಲಾಗಿತ್ತು. ಇದಕ್ಕಾಗಿ ಮನೆಯ ಪಕ್ಕದಲ್ಲಿ ಜೆಸಿಬಿ ಯಂತ್ರವನ್ನು ಬಳಸಿ ಶೌಚಾಲಯದ ಸೆಪ್ಟಿಕ್ ಟ್ಯಾಂಕ್ ಗುಂಡಿ ತೋಡುವ ಕಾಮಗಾರಿ ನಡೆಯುತ್ತಿತ್ತು. ಎರಡು ಮೀಟರ್‌ನಷ್ಟು ಆಳಕ್ಕೆ ಮಣ್ಣು ಅಗೆಯುವಷ್ಟರಲ್ಲೇ ಇದ್ದಕ್ಕಿದ್ದಂತೆ ನೆಲಭಾಗವು ಭಾರೀ ಶಬ್ದದೊಂದಿಗೆ ಕುಸಿದು ಬಿತ್ತು.

ಇದನ್ನು ಪರಿಶೀಲಿಸಿದಾಗ ಮನೆಯ ತಳಭಾಗದಲ್ಲಿ ವಿಸ್ತಾರವಾಗಿರುವ ಬೃಹತ್ ಗುಹೆ ಪತ್ತೆಯಾಯಿತು. ಗುಹೆಯೊಳಗೆ ನೀರು ಹರಿಯುತ್ತಿದೆ. ಗುಹೆಯು ಇಬ್ಬರು ಮನುಷ್ಯರ ಎತ್ತರದಷ್ಟಿದೆ. ನೀರು ಹರಿಯುತ್ತಿರುವುದರಿಂದ ಮಣ್ಣು ಸಡಿಲಗೊಂಡು ಯಾವುದೇ ಸಂದರ್ಭದಲ್ಲಿ ಮನೆ ಕುಸಿದು ಬೀಳುವ ಅಪಾಯದಲ್ಲಿದ್ದು, ಇಲ್ಲಿ ವಾಸಿಸುವುದು ಅಸಾಧ್ಯವಾಗಿದೆ. ಒಟ್ಟಿನಲ್ಲಿ ಕನಸಿನ ಮನೆಯಲ್ಲಿ ವಾಸ್ತವ್ಯ ಸಾಧ್ಯವಾಗದೆ ಕುಟುಂಬ ಆತಂಕದಲ್ಲಿದೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article