ಮೂಡುಬಿದಿರೆಯಲ್ಲಿ ಎಚ್‌ಪಿ ಕಂಪನಿಯ ನೂತನ ‘ಹೆಚ್ ಪಿ ನವ್ಯ’ ಲೈಟ್‌ವೇಟ್ ಎಲ್‌ಪಿಜಿ ಸಿಲಿಂಡರ್ ಸೇವೆ ಆರಂಭ

ಮೂಡುಬಿದಿರೆಯಲ್ಲಿ ಎಚ್‌ಪಿ ಕಂಪನಿಯ ನೂತನ ‘ಹೆಚ್ ಪಿ ನವ್ಯ’ ಲೈಟ್‌ವೇಟ್ ಎಲ್‌ಪಿಜಿ ಸಿಲಿಂಡರ್ ಸೇವೆ ಆರಂಭ


ಮೂಡುಬಿದಿರೆ: ಎಚ್‌ಪಿ ಕಂಪನಿಯ ನೂತನ ‘ಎಚ್‌ಪಿ ನವ್ಯ’ ಲೈಟ್‌ವೇಟ್ ಎಲ್‌ಪಿಜಿ ಸಿಲಿಂಡರ್ ನ್ನು ಮಂಗಳೂರು ವಿಭಾಗದಲ್ಲಿ ಮೊದಲ ಬಾರಿಗೆ ಮೂಡುಬಿದಿರೆಯ ಬೆಟ್ಕೇರಿಯ ಪದ್ಮಶ್ರೀ ಗ್ಯಾಸ್ ಏಜನ್ಸಿಯಲ್ಲಿ ಬುಧವಾರ ಬಿಡುಗಡೆಗೊಳಿಸಿ, ಸೇವೆಯನ್ನು ಆರಂಭಿಸಲಾಯಿತು. 


‘ನ್ಯೂ ಇಂಡಿಯಾ, ನ್ಯೂ ಎನರ್ಜಿ’ ಪರಿಕಲ್ಪನೆಯೊಂದಿಗೆ ಆರಂಭಗೊಂಡಿರುವ  ‘ಎಚ್‌ಪಿ ನವ್ಯ’ವನ್ನು ಸಂಸ್ಥೆಯ ಮೊದಲ ಗ್ರಾಹಕರಾದ ಟೀನಾ ರೊಡ್ರಿಗಸ್ ಅವರಿಗೆ ಸಿಲಿಂಡರ್ ಹಸ್ತಾಂತರಿಸುವ ಮೂಲಕ ಸೇವೆಗೆ ಚಾಲನೆ ನೀಡಲಾಯಿತು. 


ಮಂಗಳೂರು ಎಲ್‌ಪಿಜಿ ಪ್ರಾದೇಶಿಕ ಕಚೇರಿಯ ಚೀಫ್ ರೀಜನಲ್ ಮ್ಯಾನೇಜರ್ ಲಕ್ಷ್ಮಿ ಮೋಹನ್ ಮಾತನಾಡಿ, ‘ನವ್ಯ’ ಸಿಲಿಂಡರ್ ಭಾರತದ ಹಲವು ನಗರಗಳಲ್ಲಿ ಈಗಾಗಲೇ ಬಿಡುಗಡೆಯಾಗಿದ್ದು, ಮಂಗಳೂರು ವಿಭಾಗದಲ್ಲಿ ಮೊದಲ ಬಾರಿಗೆ ಮೂಡುಬಿದಿರೆಯಲ್ಲಿ ಸೇವೆ ಆರಂಭಿಸುತ್ತಿದೆ. ಸಾಮಾನ್ಯ ಸಿಲಿಂಡರ್‌ಗಳಿಗಿಂತ ನವ್ಯ ಸಿಲಿಂಡರ್ ಹೆಚ್ಚು ಹಗುರವಾಗಿದ್ದು, ಪ್ರೀಮಿಯಂ ಹಾಗೂ ಆಧುನಿಕ ವಿನ್ಯಾಸ ಹೊಂದಿದೆ. ಫೈಬರ್‌ನಿಂದ ನಿರ್ಮಿಸಲಾಗಿರುವುದರಿಂದ ತುಕ್ಕು ಹಿಡಿಯುವ ಸಮಸ್ಯೆಯಿಲ್ಲ. ಸಿಲಿಂಡರ್‌ನೊಳಗೆ ಎಷ್ಟು ಎಲ್‌ಪಿಜಿ ಅನಿಲ ಉಳಿದಿದೆ ಎಂಬುದನ್ನು ಹೊರಗಿನಿಂದಲೇ ನೋಡಬಹುದಾಗಿದೆ. 6.3 ಕೆ.ಜಿ. ತೂಕ ಹೊಂದಿರುವ ಸಿಲಿಂಡರ್ ಸುರಕ್ಷಿತ ಕಾರ್ಯಕ್ಷಮತೆ, ಬಾಳಿಕೆ ಬರುವ ವಿನ್ಯಾಸ ಹಾಗೂ ಸ್ಮಾರ್ಟ್ ತಂತ್ರಜ್ಞಾನದ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಗ್ರಾಹಕರ ಅನುಕೂಲಕ್ಕಾಗಿ ಎಚ್‌ಪಿ ಪೇ ಡಿಜಿಟಲ್ ವ್ಯವಸ್ಥೆಯನ್ನೂ ಯೋಜನೆಯೊಂದಿಗೆ ಜೋಡಿಸಲಾಗಿದೆ.

ನವ್ಯ ಸಿಲಿಂಡರ್‌ನ ಪ್ರಮುಖ ವಿಶೇಷತೆ 90 ನಿಮಿಷಗಳ ವಿತರಣಾ ವ್ಯವಸ್ಥೆಯಾಗಿದೆ. ಸಿಲಿಂಡರ್ ಬುಕ್ ಮಾಡಿದ 90 ನಿಮಿಷಗಳಲ್ಲಿ ಮನೆ ಬಾಗಿಲಿಗೆ ತಲುಪಿಸುವ ವ್ಯವಸ್ಥೆ ಕಲ್ಪಿಸಲಾಗಿದ್ದು, ತುರ್ತು ಸಂದರ್ಭಗಳಲ್ಲಿಯೂ ಗ್ರಾಹಕರಿಗೆ ಅನುಕೂಲವಾಗಲಿದೆ ಎಂದು ಲಕ್ಷ್ಮಿ ಮೋಹನ್ ಹೇಳಿದರು.

ಪದ್ಮಶ್ರೀ ಗ್ಯಾಸ್ ಏಜನ್ಸಿ ಮಾಲಕ ಅಭಿಜಿತ್ ಎಂ. ಮಾತನಾಡಿ, ನವ್ಯ ಸಿಲಿಂಡರ್ ಸುಲಭ ನಿರ್ವಹಣೆ, ಸರಳವಾಗಿ ಪಡೆಯುವ ವ್ಯವಸ್ಥೆ ಹಾಗೂ ವೇಗದ ವಿತರಣೆಯ ವಿಶೇಷತೆ ಹೊಂದಿದೆ. ಸಿಲಿಂಡರ್ ಪಡೆಯಲು ಕೇವಲ ಒಂದು ಗುರುತಿನ ಚೀಟಿ ನೀಡಿದರೆ ಸಾಕಿದ್ದು, ಕೆವೈಸಿ ಅಥವಾ ವಿಳಾಸದ ಪುರಾವೆ ಅಗತ್ಯವಿಲ್ಲ ಎಂದರು.

ಬೆಳಗ್ಗೆ 9ರಿಂದ ಸಂಜೆ 5.30ರವರೆಗೆ ಬುಕಿಂಗ್ ಮಾಡಿದರೆ ಕೆಲಸದ ದಿನಗಳಲ್ಲಿ 90 ನಿಮಿಷಗಳೊಳಗೆ ಸಿಲಿಂಡರ್ ತಲುಪಿಸುವ ವ್ಯವಸ್ಥೆ ಕಲ್ಪಿಸಲಾಗಿದೆ. ಆರಂಭಿಕ ಹಂತದಲ್ಲಿ ಬೆಳಗ್ಗೆ 8ರಿಂದ ಸಂಜೆ 7ರವರೆಗೆ ಬರುವ ಬುಕಿಂಗ್‌ಗಳನ್ನು 90 ನಿಮಿಷಗಳಲ್ಲಿ ತಲುಪಿಸಲು ಪ್ರಯತ್ನಿಸಲಾಗುವುದು. ಮೊದಲ ಎರಡು ತಿಂಗಳಲ್ಲಿ ಸುಮಾರು 12 ಕಿ.ಮೀ. ವ್ಯಾಪ್ತಿಗೆ ಸೇವೆ ವಿಸ್ತರಿಸುವ ಗುರಿ ಹೊಂದಲಾಗಿದೆ.

ಮೂಡುಬಿದಿರೆಯಲ್ಲಿ ಪ್ರಸ್ತುತ ಸುಮಾರು 35,000 ಗೃಹಬಳಕೆಯ ಗ್ರಾಹಕರಿದ್ದು, ಪ್ರತಿದಿನ ಸುಮಾರು 800 ಸಿಲಿಂಡರ್‌ಗಳನ್ನು ವಿತರಿಸಲಾಗುತ್ತಿದೆ. ಸುಮಾರು 60 ಸಿಬ್ಬಂದಿಯ ತಂಡವು ಸಾಮಾನ್ಯವಾಗಿ ಬುಕಿಂಗ್‌ನ 48 ಗಂಟೆಗಳೊಳಗೆ ಸಿಲಿಂಡರ್ ವಿತರಿಸುತ್ತಿದೆ. ಈ ಅನುಭವದ ಆಧಾರದಲ್ಲಿ ನವ್ಯ ಸಿಲಿಂಡರ್‌ನ 90 ನಿಮಿಷಗಳ ವಿತರಣಾ ವ್ಯವಸ್ಥೆಯನ್ನು ಯಶಸ್ವಿಗೊಳಿಸುವ ವಿಶ್ವಾಸ ವ್ಯಕ್ತಪಡಿಸಲಾಯಿತು.

ಮಂಗಳೂರು ಎಲ್‌ಪಿಜಿ ಇಂಪೋರ್ಟ್ ಫೆಸಿಲಿಟಿಯ ಜನರಲ್ ಮ್ಯಾನೇಜರ್ ಪ್ರಕಾಶ್ ಕುಮಾರ್ ಪಾಟ್ನಾಯಕ್ ಮಾತನಾಡಿ, ಹಿಂದೆ ಅಡುಗೆಮನೆಯಲ್ಲಿ ಸಿಲಿಂಡರ್ ಬದಲಾಯಿಸುವುದು ಗೃಹಿಣಿಯರಿಗೆ ಸವಾಲಾಗಿತ್ತು. 30 ಕೆ.ಜಿ. ತೂಕದ ಸಿಲಿಂಡರ್‌ಗಳನ್ನು ನೆಲಮಹಡಿಯಿಂದ 10–11ನೇ ಮಹಡಿಗೆ ಸಾಗಿಸುವುದು ಸಿಬ್ಬಂದಿಗೂ ಶ್ರಮದಾಯಕವಾಗಿತ್ತು. ಇದೀಗ ಸುಲಭವಾಗಿ ಸಿಲಿಂಡರ್ ಪಡೆಯುವ ವ್ಯವಸ್ಥೆ ಜಾರಿಗೆ ಬಂದಿರುವುದು ಶ್ಲಾಘನೀಯ.ವಿದೇಶಗಳಲ್ಲಿ ಸೂಪರ್‌ಮಾರ್ಕೆಟ್‌ಗಳಲ್ಲೇ ಸಿಲಿಂಡರ್ ದೊರೆಯುವ ಮಾದರಿಯನ್ನು ಉಲ್ಲೇಖಿಸಿದ ಅವರು, ಸ್ವಿಗ್ಗಿ, ಜೊಮಾಟೊದಂತಹ ತ್ವರಿತ ಸೇವೆಗಳನ್ನು ಬಯಸುವ ಇಂದಿನ ಪೀಳಿಗೆ ಹಾಗೂ ವರ್ಗಾವಣೆಗೊಳ್ಳುವ ಉದ್ಯೋಗಿಗಳಿಗೆ ಈ ವ್ಯವಸ್ಥೆ ಅನುಕೂಲಕರವಾಗಿದೆ ಎಂದರು. ಹೊಸ ಊರಿಗೆ ಬಂದಾಗ ಬಾಡಿಗೆ ಕರಾರು ಪತ್ರ ಹಾಗೂ ವಾಸ್ತವ್ಯದ ದಾಖಲೆಗಳನ್ನು ಒದಗಿಸುವ ಅನಿವಾರ್ಯತೆಯನ್ನು ಈ ವ್ಯವಸ್ಥೆ ತಪ್ಪಿಸಿದೆ ಎಂದು ಹೇಳಿದರು.

ಮಂಗಳೂರು ಎಲ್‌ಪಿಜಿ ಇಂಪೋರ್ಟ್ ಫೆಸಿಲಿಟಿ ದೇಶದ ಎಲ್‌ಪಿಜಿ ಪೂರೈಕೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದು, ಭಾರತದ ಸುಮಾರು ಶೇ.17ರಷ್ಟು ಎಲ್‌ಪಿಜಿಯನ್ನು ಮಂಗಳೂರು ಟರ್ಮಿನಲ್ ಮೂಲಕ ಆಮದು ಮಾಡಿಕೊಳ್ಳಲಾಗುತ್ತದೆ ಎಂದು ತಿಳಿಸಲಾಯಿತು.

ಎಂಎಚ್‌ಎಂಎಸ್‌ಪಿಎಲ್ ಪ್ರಧಾನ ಕಚೇರಿ, ಮಂಗಳೂರಿನ ಪ್ರಧಾನ ವ್ಯವಸ್ಥಾಪಕ ಅಜಿತ್ ಪಿ.,ಮಂಗಳೂರು ರಿಟೇಲ್ ಪ್ರಾದೇಶಿಕ ಕಚೇರಿಯ ಪ್ರದೇಶ ಮಾರಾಟ ವ್ಯವಸ್ಥಾಪಕ ಇಶಿತಾ ಗರ್ಗ್, ಮಂಗಳೂರು ಎಲ್‌ಪಿಜಿ ಘಟಕದ ವ್ಯವಸ್ಥಾಪಕ (ಕಾರ್ಯಾಚರಣೆ) ಬಿ. ಬಾಬು ಸಿಂಗ್,  ಮಂಗಳೂರು ಎಲ್‌ಪಿಜಿ ಪ್ರಾದೇಶಿಕ ಕಚೇರಿಯ ಸಹಾಯಕ ಮಾರಾಟ ವ್ಯವಸ್ಥಾಪಕ ನಿಹಾಲ್ ಕುಮಾರ್ ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article