ಸಮುದ್ರ ಮಾಲಿನ್ಯ ನಿಯಂತ್ರಣ: ಕರಾವಳಿ ರಕ್ಷಣಾ ಪಡೆ ವತಿಯಿಂದ ಅಣಕು ಕಾರ್ಯಾಚರಣೆ

ಸಮುದ್ರ ಮಾಲಿನ್ಯ ನಿಯಂತ್ರಣ: ಕರಾವಳಿ ರಕ್ಷಣಾ ಪಡೆ ವತಿಯಿಂದ ಅಣಕು ಕಾರ್ಯಾಚರಣೆ


ಮಂಗಳೂರು: ಸಮುದ್ರ ಮಾಲಿನ್ಯ ನಿಯಂತ್ರಣ ಹಾಗೂ ತುರ್ತು ಪರಿಸ್ಥಿತಿಗಳನ್ನು ಸಮರ್ಥವಾಗಿ ಎದುರಿಸುವ ಕುರಿತು ಕರಾವಳಿ ರಕ್ಷಣಾ ಪಡೆ ಕರ್ನಾಟಕ ವಲಯದ ವತಿಯಿಂದ ಆ.18 ಮತ್ತು 19ರಂದು ಕೋಸ್ಟ್ ಗಾರ್ಡ್ ಹೆಡ್ ಕ್ಚಾಟ್ರಸ್ ನಂ.3ರಲ್ಲಿ ವಿಚಾರ ಸಂಕಿರಣ ಹಾಗೂ ಅಣಕು ಕಾರ್ಯಾಚರಣೆ ನಡೆಯಿತು.

ಕಾರ್ಯಕ್ರಮದಲ್ಲಿ ಕರಾವಳಿ ರಕ್ಷಣಾ ಪಡೆಯ ಅಧೀನದಲ್ಲಿರುವ ವಿವಿಧ ತೇಲುವ ಘಟಕಗಳು, ಬಂದರು ಪ್ರಾಧಿಕಾರಗಳು ಹಾಗೂ ವಿವಿಧ ಸಾಗರ ಸಂಬಂಧಿತ ಸಂಸ್ಥೆಗಳ ಪ್ರತಿನಿಧಿಗಳು ಭಾಗವಹಿಸಿದ್ದರು. ಸಮುದ್ರ ಮಾಲಿನ್ಯಕ್ಕೆ ತ್ವರಿತವಾಗಿ ಸ್ಪಂದಿಸುವ ಸಾಮರ್ಥ್ಯವನ್ನು ಹೆಚ್ಚಿಸುವುದು ಹಾಗೂ ವಿವಿಧ ಇಲಾಖೆಗಳ ನಡುವೆ ಸಮನ್ವಯ ಬಲಪಡಿಸುವುದು ವಿಚಾರ ಸಂಕಿರಣದ ಪ್ರಮುಖ ಉದ್ದೇಶವಾಗಿತ್ತು. ಸಮುದ್ರದಲ್ಲಿನ ಮಾಲಿನ್ಯದಿಂದ ಸಾಗರ ಪರಿಸರ ವ್ಯವಸ್ಥೆಯ ಮೇಲೆ ಉಂಟಾಗುವ ಪರಿಣಾಮಗಳ ಬಗ್ಗೆಯೂ ಚರ್ಚಿಸಲಾಯಿತು.

ಇದರ ಅಂಗವಾಗಿ ನವ ಮಂಗಳೂರು ಬಂದರು ಟ್ರಸ್ಟ್ನ ಜೆಟ್ಟಿಯಲ್ಲಿ ಅಣಕು ಮಾಲಿನ್ಯ ನಿಯಂತ್ರಣ ಕಾರ್ಯಾಚರಣೆ ನಡೆಸಲಾಯಿತು. ಕಚ್ಚಾ ತೈಲ ಸೋರಿಕೆಯ ಕಾಲ್ಪನಿಕ ಪರಿಸ್ಥಿತಿಯನ್ನು ಸೃಷ್ಟಿಸಿ, ವಿವಿಧ ಇಲಾಖೆಗಳು ಮತ್ತು ಸಂಸ್ಥೆಗಳು ಸಮನ್ವಯದಿಂದ ಕೈಗೊಳ್ಳಬೇಕಾದ ಕ್ರಮಗಳನ್ನು ಪ್ರಾತ್ಯಕ್ಷಿಕೆಯ ಮೂಲಕ ತೋರಿಸಲಾಯಿತು. ಸಾಗರ ಪರಿಸರ ತುರ್ತು ಪರಿಸ್ಥಿತಿಗಳನ್ನು ನಿರ್ವಹಿಸುವಲ್ಲಿ ಅಂತರ್ಸಂಸ್ಥೆಗಳ ಸಹಕಾರದ ಪರಿಣಾಮಕಾರಿತ್ವವನ್ನು ಈ ಕಾರ್ಯಾಚರಣೆ ಪ್ರದರ್ಶಿಸಿತು.

ಸಮುದ್ರ ಮಾಲಿನ್ಯದಿಂದ ಸಾಗರವನ್ನು ರಕ್ಷಿಸಲು ಸಿದ್ಧತೆ ಮತ್ತು ವಿವಿಧ ಸಂಸ್ಥೆಗಳ ಸಹಕಾರ ಅಗತ್ಯ ಎಂದು ಕೋಸ್ಟ್ ಗಾರ್ಡ್ ಪೊಲ್ಯೂಷನ್ ರೆಸ್ಪಾನ್ಸ್ ಟೀಮ್ (ವೆಸ್ಟ್) ಉಸ್ತುವಾರಿ ಡಿಐಜಿ ಎಸ್.ಕೆ. ವರ್ಗೀಸ್ ಹೇಳಿದರು.

ಸಮುದ್ರ ಮಾಲಿನ್ಯ ನಿಯಂತ್ರಣಕ್ಕೆ ಹೊಸ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸುವಂತೆ ಕೈಗಾರಿಕೆಗಳಿಗೆ ಕೋಸ್ಟ್ ಗಾರ್ಡ್ ಡಿಸ್ಟ್ರಿಕ್ಟ್ ನಂ.೩ರ ಕಮಾಂಡರ್ ಕರೆ ನೀಡಿದರು. ಅಲ್ಲದೆ, ಮಾಲಿನ್ಯ ನಿಯಂತ್ರಣಕ್ಕಾಗಿ ಶೋಷಕ ಪ್ಯಾಡ್‌ಗಳನ್ನು ಅಭಿವೃದ್ಧಿಪಡಿಸಿರುವ ಎಂಆರ್‌ಪಿಎಲ್‌ನ ಪ್ರಯತ್ನವನ್ನು ಶ್ಲಾಘಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article