40ಕ್ಕೂ ಅಧಿಕ ಪ್ರಕರಣಗಳ ಆರೋಪಿ ಬಂಧನ
Wednesday, August 19, 2026
ಮಂಗಳೂರು: ನಗರದ ಉರ್ವ ಪೊಲೀಸ್ ಠಾಣಾ ವ್ಯಾಪ್ತಿಯ ಕೋಡಿಕಲ್‌ನಲ್ಲಿ ಮನೆಯೊಂದರ ಎದುರು ನಿಲ್ಲಿಸಿದ್ದ ಸ್ಕೂಟರ್ ಕಳವು ಮಾಡಿದ್ದ ಆರೋಪಿ ಹಾಗೂ ಕರ್ನಾಟಕ-ಕೇರಳದಲ್ಲಿ 40ಕ್ಕೂ ಅಧಿಕ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಉಳ್ಳಾಲ ನಿವಾಸಿ ಮಹಮ್ಮದ್ ಫೈಜಲ್ ಆಲಿಯಾಸ್ ‘ತೋಟ ಫೈಜಲ್’ (40) ಎಂಬಾತನನ್ನು ಉರ್ವ ಪೊಲೀಸರು ಅ.28 ರಂದು ಬಂಧಿಸಿದ್ದಾರೆ.
ಜುಲೈ 24 ರಂದು ನಗರದ ಕೋಡಿಕಲ್ನ ಮನೆಯೊಂದರ ಎದುರು ನಿಲ್ಲಿಸಲಾಗಿದ್ದ ಸ್ಕೂಟರ್ ಅನ್ನು ಆರೋಪಿ ಕಳವು ಮಾಡಿದ್ದ. ಈ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದ ಉರ್ವ ಪೊಲೀಸರು, ಘಟನಾ ಸ್ಥಳದ ಸುತ್ತಮುತ್ತಲಿನ ಸಿಸಿಟಿವಿ ಕೆಮರಾಗಳ ದೃಶ್ಯಾವಳಿಗಳನ್ನು ತೀವ್ರ ಪರಿಶೀಲನೆ ನಡೆಸಿ ಆರೋಪಿಯ ಚಹರೆಯನ್ನು ಗುರುತಿಸಿದ್ದರು. ತನಿಖೆ ಮುಂದುವರಿಸಿದ ಪೊಲೀಸರು ಆರೋಪಿಯನ್ನು ಬಂಧಿಸಿ, ಕಳವಾಗಿದ್ದ ಸ್ಕೂಟರ್ ಅನ್ನು ವಶಪಡಿಸಿಕೊಂಡಿದ್ದಾರೆ.
ಬಂಧಿತ ‘ತೋಟ ಫೈಜಲ್’ ವಿರುದ್ಧ ಕರ್ನಾಟಕ ಹಾಗೂ ಕೇರಳ ರಾಜ್ಯಗಳ ವಿವಿಧ ಪೊಲೀಸ್ ಠಾಣೆಗಳಲ್ಲಿ 40ಕ್ಕೂ ಹೆಚ್ಚು ಕಳವು ಮತ್ತು ಅಪರಾಧ ಪ್ರಕರಣಗಳು ದಾಖಲಾಗಿವೆ. ಮಂಗಳೂರು ನಗರದ ಬಂದರು, ಕೊಣಾಜೆ, ಉಳ್ಳಾಲ, ಮೂಡುಬಿದಿರೆ, ಬಂಟ್ವಾಳ ಗ್ರಾಮಾಂತರ ಹಾಗೂ ಉಡುಪಿ ಜಿಲ್ಲೆಯ ಮಣಿಪಾಲ ಪೊಲೀಸ್ ಠಾಣೆಗಳಲ್ಲಿ ಈತನ ವಿರುದ್ಧ ಪ್ರಕರಣಗಳಿದ್ದು, ನ್ಯಾಯಾಲಯದಿಂದ ದಸ್ತಗಿರಿ ವಾರಂಟ್ ಕೂಡ ಹೊರಡಿಸಲಾಗಿತ್ತು ಎಂದು ಮಂಗಳೂರು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.