ಸಂತ ಪರಂಪರೆಗೆ ಚರಿತ್ರೆಯಲ್ಲಿ ಅತ್ಯಂತ ಮಹತ್ವದ ಸ್ಥಾನ: ಭಾಸ್ಕರ್ ರಾವ್ ಕುಕ್ಕುವಳ್ಳಿ
ಕರ್ನಾಟಕ ರಾಜ್ಯ ಮಹಾವಿದ್ಯಾಲಯ ಶಿಕ್ಷಕರ ಸಂಘ ದ.ಕ ಜಿಲ್ಲಾ ಘಟಕ ಹಾಗೂ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಬಿಸಿನೆಸ್ ಮ್ಯಾನೇಜ್‌ಮೆಂಟ್ ಕಾಲೇಜು ಮಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ಸಂತ ರವಿದಾಸ್ ಅವರ 650ನೇ ಜನ್ಮ ಜಯಂತಿ ಅಂಗವಾಗಿ ನಡೆದ ಭಾರತೀಯ ಸಂತ ಪರಂಪರೆ ಉಪನ್ಯಾಸಮಾಲೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕಬೀರ್, ಬಸವಣ್ಣ, ಕನಕದಾಸರು ಹಾಗೂ ಮೀರಾಬಾಯಿ ಮುಂತಾದ ಮಹಾನ್ ಸಂತರು ತಮ್ಮ ಕಾವ್ಯ ಮತ್ತು ತತ್ವಜ್ಞಾನದ ಮೂಲಕ ಸಮಾಜದಲ್ಲಿದ್ದ ಜಾತೀಯತೆ, ಅಂಧಶ್ರದ್ಧೆ ಹಾಗೂ ಮೇಲು-ಕೀಳು ಭಾವನೆಗಳನ್ನು ಕಟುವಾಗಿ ವಿರೋಧಿಸಿದರು. ಈ ಶ್ರೇಷ್ಠ ಸಂತ ಪರಂಪರೆಯ ಪ್ರಕಾಶಮಾನ ನಕ್ಷತ್ರ ಸಂತ ರವಿದಾಸರು (ರೈದಾಸರು). 15ನೇ ಶತಮಾನದ ಭಕ್ತಿ ಚಳವಳಿಯ ಪ್ರಮುಖ ವಚನಕಾರರಾಗಿದ್ದ ಅವರು, ಯಾವುದೇ ವ್ಯಕ್ತಿಯ ಶ್ರೇಷ್ಠತೆಯು ಆತನ ಹುಟ್ಟಿನಿಂದಲ್ಲ, ಬದಲಾಗಿ ಆತನ ನಡತೆ ಮತ್ತು ಭಕ್ತಿಯಿಂದ ನಿರ್ಧಾರವಾಗುತ್ತದೆ ಎಂದು ಸಾರಿದರು ಎಂದರು.
ಮಂಗಳೂರು ವಿವಿ ಪ್ರಾಧ್ಯಾಪಕಿ ಪ್ರೊ. ಸುಮಾ ಟಿ. ಆರ್ ಮಾತನಾಡಿ, ಸಂತ ರವಿದಾಸರು ದುಃಖವಿಲ್ಲದ ಸಮಾಜ ಎಂಬ ಆದರ್ಶ ಸಮಾಜದ ಪರಿಕಲ್ಪನೆಯನ್ನು ನೀಡಿದರು. ಅಲ್ಲಿ ಹಸಿವು, ಬಡತನ, ತಾರತಮ್ಯ ಅಥವಾ ಕಷ್ಟಗಳಿಗೆ ಜಾಗವಿರುವುದಿಲ್ಲ; ಎಲ್ಲರೂ ಸಮಾನರು. ತಮ್ಮ ಶ್ರಮಜೀವಿ ಜೀವನಶೈಲಿಯ ಮೂಲಕ ಕಾಯಕವೇ ಕೈಲಾಸ ಎಂಬ ತತ್ವವನ್ನು ಎತ್ತಿಹಿಡಿದ ಅವರು, ಪ್ರಾಮಾಣಿಕ ಶ್ರಮ ಮತ್ತು ಭಕ್ತಿಗೆ ಪ್ರಾಮುಖ್ಯತೆ ನೀಡಿದರು ಎಂದರು.
ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಬಿಸಿನೆಸ್ ಮ್ಯಾನೇಜ್‌ಮೆಂಟ್ ಕಾಲೇಜಿನ ಪ್ರಾಂಶುಪಾಲ ಡಾ. ಭಾನುಪ್ರಕಾಶ್ ಬಿ.ಇ ಅಧ್ಯಕ್ಷತೆ ವಹಿಸಿದ್ದರು.
ಕರ್ನಾಟಕ ರಾಜ್ಯ ಮಹಾವಿದ್ಯಾಲಯ ಶಿಕ್ಷಕರ ಸಂಘ ದ.ಕ ಜಿಲ್ಲಾ ಘಟಕದ ಉಪಾಧ್ಯಕ್ಷೆ ಪ್ರೊ. ನಾಗರತ್ನ ರಾವ್, ಪ್ರಮುಖರಾದ ಡಾ. ಮಾಧವ ಎಂಕೆ, ಡಾ. ಜ್ಯೋತಿ ಸೇರಿದಂತೆ ಹಲವರಿದ್ದರು.
ಸನಾ ಸತೀಶ್ ಕಾರ್ಯಕ್ರಮ ನಿರೂಪಿಸಿದರು. ಡಾ. ಜ್ಯೋತಿ ಸ್ವಾಗತಿಸಿದರು. ಲಿನಿಷಾ ಪರಿಚಯಿಸಿದರು. ಸ್ಪೂರ್ತಿ ಶೆಟ್ಟಿ ಪ್ರಾರ್ಥಿಸಿದರು. ದೃಶ್ಯಾ ವಂದಿಸಿದರು.
ಜಾತಿ-ಜಾತಿಯಲ್ಲಿ ಭೇದ ಹುಡುಕುತ್ತಾ ಮನುಷ್ಯ ದೂರವಾಗುತ್ತಿದ್ದಾನೆ, ಆದರೆ ಪ್ರತಿಯೊಬ್ಬರಲ್ಲೂ ಒಂದೇ ದೈವಿಕ ಅಂಶವಿದೆ ಎಂಬುದು ಂತ ರವಿದಾಸ್ ಅವರ ಮೂಲ ಚಿಂತನೆ. ಸರಳ, ಉದಾತ್ತ ಹಾಗೂ ಸಾರ್ವಕಾಲಿಕ ಸಂದೇಶಗಳು ಇಂದಿಗೂ ನಮಗೆ ಜಾತ್ಯತೀತ, ಸಮಾನತೆಯಿಂದ ಕೂಡಿದ ಹಾಗೂ ಮಾನವೀಯ ಸಮಾಜ ನಿರ್ಮಿಸಲು ಪ್ರೇರಣೆ. ಭಾರತೀಯ ಸಂಸ್ಕೃತಿ ಮತ್ತು ಸಂತ ಪರಂಪರೆಯ ಆದರ್ಶಗಳನ್ನು ವಿದ್ಯಾರ್ಥಿಗಳು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. -ಡಾ. ಭಾನುಪ್ರಕಾಶ್ ಬಿ.ಇ, ಪ್ರಾಂಶುಪಾಲರು, ಎಸ್‌ಡಿಎಂ ಬಿಸಿನೆಸ್ ಮ್ಯಾನೇಜ್‌ಮೆಂಟ್ ಕಾಲೇಜು