2026ನೇ ಸಾಲಿನ ಅಧ್ಯಾಪಕ ಭೂಷಣ ಪ್ರಶಸ್ತಿ ಘೋಷಣೆ: ಜೀವಮಾನದ ಸಾಧನೆಗಾಗಿ ಆಳ್ವರಿಗೆ ಪ್ರಶಸ್ತಿ
ಶಿಕ್ಷಣ ಕ್ಷೇತ್ರದ ಜೀವಮಾನದ ಸಾಧನೆಗಾಗಿ ಕರಾವಳಿಯ ಸಾಂಸ್ಕೃತಿಕ ರಾಯಭಾರಿ, ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ ಅವರನ್ನು ಗುರುತಿಸಲಾಗಿದೆ. ಪ್ರತಿ ವರ್ಷದಂತೆ ಈ ವರ್ಷವೂ ದ.ಕ. ಉಡುಪಿ, ಕೊಡಗು ಜಿಲ್ಲೆಗಳ ಅಧ್ಯಾಪಕರ ಶೈಕ್ಷಣಿಕ ಸಾಧನೆಯನ್ನು ಗುರುತಿಸಿ ಪ್ರೇರಣಾ ದಿವಸ್ ಕಾರ್ಯಕ್ರಮದಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ. ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಸೆಪ್ಟೆಂಬರ್ 26ರಂದು ತ್ರಿಷಾ ಶಿಕ್ಷಣ ಸಂಸ್ಥೆಗಳ ಸಹಯೋಗದಲ್ಲಿ ಉಡುಪಿಯ ಇನೋಸಿಸ್ ಯಕ್ಷಕಲಾ ಕೇಂದ್ರದಲ್ಲಿ ನಡೆಯಲಿದ್ದು, ಗಣ್ಯರ ಸಮ್ಮುಖದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಕೆಆರ್‌ಎಂಎಸ್‌ಎಸ್ ರಾಜ್ಯ ಜಂಟಿ ಪ್ರಧಾನ ಕಾರ್ಯದರ್ಶಿ ಪ್ರೊ. ಮಾಧವ ಎಂ. ಕೆ.ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಅತ್ಯುತ್ತಮ ಆಡಳಿತಗಾರರು ಪ್ರಶಸ್ತಿಗೆ ತ್ರಿಷಾ ಸಮೂಹ ಶಿಕ್ಷಣ ಸಂಸ್ಥೆಗಳ ಸ್ಥಾಪಕ ಸಿಎ ಗೋಪಾಲಕೃಷ್ಣ ಭಟ್, ಗೋವಿಂದದಾಸ ಕಾಲೇಜಿನ ಆಡಳಿತ ನಿರ್ದೇಶಕ ಪ್ರೊ. ರಮೇಶ್ ಭಟ್ ಎಸ್.ಜಿ. ಹಾಗೂ ಬೆಳ್ತಂಗಡಿ ಸರಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಡಾ. ಪದ್ಮನಾಭ ಎಸ್. ಅವರನ್ನು ಆಯ್ಕೆ ಮಾಡಲಾಗಿದೆ. ಅತ್ಯುತ್ತಮ ಸಂಶೋಧಕ ಪ್ರಶಸ್ತಿಗೆ ಮಂಗಳೂರು ವಿಶ್ವವಿದ್ಯಾಲಯ ರಸಾಯನಶಾಸ್ತ್ರ ವಿಭಾಗ ಅಧ್ಯಕ್ಷ ಡಾ. ಭೋಜ ಪೂಜಾರಿ ಮತ್ತು ಸಿದ್ದಕಟ್ಟೆ ಸರಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಪ್ರೊ.ಅಜಕ್ಕಳ ಗಿರೀಶ್ ಭಟ್ ಅವರನ್ನು ಆಯ್ಕೆ ಮಾಡಲಾಗಿದೆ ಎಂದರು.
ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ ಪುತ್ತೂರು ಸರಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಪ್ರೊ. ಸುಬ್ಬಪ್ಪ ಕೈಕಂಬ, ಬಂಟ್ವಾಳ ಸರಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಡಾ.ಪ್ರಕಾಶ್ ಚಂದ್ರ ಶಿಶಿಲ, ಮಂಗಳೂರಿನ ಬೆಸೆಂಟ್ ಮಹಿಳಾ ಕಾಲೇಜಿನ ಪ್ರಾಂಶುಪಾಲ ಡಾ. ಪ್ರವೀಣ್ ಕೆ.ಸಿ ಅವರನ್ನು ಆಯ್ಕೆ ಮಾಡಲಾಗಿದೆ.
ಅತ್ಯುತ್ತಮ ಗ್ರಂಥಪಾಲಕರು ವಿಭಾಗದಲ್ಲಿ ಉಜಿರೆ ಎಸ್ಡಿಎಂ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಗ್ರಂಥಪಾಲಕರಾದ ಡಾ.ರಜತ ಪಿ. ಶೆಟ್ಟಿ ಹಾಗೂ ವಿರಾಜಪೇಟೆ ಕಾವೇರಿ ಕಾಲೇಜು ಗ್ರಂಥಪಾಲಕರಾದ ಡಾ. ಮುತ್ತಮ್ಮ ಎ. ಆರ್. ಇವರನ್ನು ಆಯ್ಕೆ ಮಾಡಲಾಗಿದೆ.
ಅತ್ಯುತ್ತಮ ದೈಹಿಕ ಶಿಕ್ಷಕರು ವಿಭಾಗದಲ್ಲಿ ಕಾರ್ಕಳದ ಮಂಜುನಾಥ ಪೈ ಸ್ಮಾರಕ ಸರಕಾರಿ ಪ್ರಥಮ ದರ್ಜೆ ಕಾಲೇಜು ದೈಹಿಕ ಶಿಕ್ಷಣ ನಿರ್ದೇಶಕರಾದ ಡಾ ಜಯಭಾರತಿ ಎ. ಮತ್ತು ಮಡಿಕೇರಿ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ದೈಹಿಕ ಶಿಕ್ಷಣ ನಿರ್ದೇಶಕರಾದ ಪ್ರೊ. ರಾಕಿ ಪೂವಣ್ಣ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ವಿವರಿಸಿದರು.
ಪ್ರಮುಖರಾದ ಡಾ. ಸುಧಾ ಯು., ರಾಜೇಶ್ ಕುಮಾರ್, ಕಾಜಲ್, ಜಯಲಕ್ಷ್ಮೀ ಆರ್., ಮಮತಾ ಶೆಟ್ಟಿ ಉಪಸ್ಥಿತರಿದ್ದರು.