ಬಾಂಗ್ಲಾ ಪ್ರಜೆಗಳ ಹಸ್ತಾಂತರಕ್ಕೆ 30 ಅಧಿಕಾರಿಗಳ ತಂಡ: ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ
Sunday, August 23, 2026
ಮಂಗಳೂರು: ಮಂಗಳೂರಿನಲ್ಲಿ ಬಂಧಿತರಾಗಿರುವ ಬಾಂಗ್ಲಾದೇಶದ 21 ಮಂದಿ ಪ್ರಜೆಗಳನ್ನು ಗಡಿ ಭದ್ರತಾ ಪಡೆ (ಬಿಎಸ್‌ಎಫ್)ಗೆ ಹಸ್ತಾಂತರಿಸಲು 30 ಮಂದಿ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಒಳಗೊಂಡ ವಿಶೇಷ ತಂಡವನ್ನು ನಿಯೋಜಿಸಲಾಗಿದೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ತಿಳಿಸಿದ್ದಾರೆ.
ಬಂಧಿತರನ್ನು ಬಸ್ ಮೂಲಕ ಬೆಂಗಳೂರಿಗೆ ಕರೆದೊಯ್ಯಲಾಗಿದ್ದು, ಆ.23ರಂದು ರೈಲಿನಲ್ಲಿ ಪಶ್ಚಿಮ ಬಂಗಾಳದ ಮಾಲ್ದಾಗೆ ಕರೆದೊಯ್ಯಲಾಗುತ್ತದೆ. ಅಲ್ಲಿಂದ ಅವರನ್ನು ಬಿಎಸ್‌ಎಫ್ ಅಧಿಕಾರಿಗಳಿಗೆ ಹಸ್ತಾಂತರಿಸಲಾಗುವುದು ಎಂದು ಆಯುಕ್ತರು ತಿಳಿಸಿದ್ದಾರೆ.
ಆ.26ರೊಳಗೆ ಹಸ್ತಾಂತರ:
ಬಂಧಿತರಾದ 21 ಮಂದಿಯನ್ನು ಆ.26ರೊಳಗೆ ಬಿಎಸ್‌ಎಫ್‌ಗೆ ಹಸ್ತಾಂತರಿಸುವ ಗುರಿ ಹೊಂದಲಾಗಿದೆ. ಬಳಿಕ ಬಿಎಸ್‌ಎಫ್ ಅಧಿಕಾರಿಗಳು ನಿಯಮಾನುಸಾರ ಮುಂದಿನ ಕಾನೂನು ಕ್ರಮ ಹಾಗೂ ಗಡಿಪಾರು ಪ್ರಕ್ರಿಯೆ ಕೈಗೊಳ್ಳಲಿದ್ದಾರೆ ಎಂದು ಸುಧೀರ್ ಕುಮಾರ್ ರೆಡ್ಡಿ ಹೇಳಿದ್ದಾರೆ.
ಮಂಗಳೂರಿನಲ್ಲಿ ಅಕ್ರಮವಾಗಿ ನೆಲೆಸಿರುವ ಬಾಂಗ್ಲಾದೇಶಿ ಪ್ರಜೆಗಳ ವಿರುದ್ಧ ನಗರ ಪೊಲೀಸರು ಇತ್ತೀಚಿನ ದಿನಗಳಲ್ಲಿ ಪರಿಶೀಲನಾ ಕಾರ್ಯಾಚರಣೆಯನ್ನು ತೀವ್ರಗೊಳಿಸಿದ್ದಾರೆ. ನಿರ್ಮಾಣ ಕಾಮಗಾರಿ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿದ್ದವರ ದಾಖಲೆಗಳನ್ನು ಪರಿಶೀಲಿಸಲಾಗುತ್ತಿದೆ.