ಆ.31ರಂದು ವಿಹಿಂಪ-ಬಜರಂಗದಳ ನೇತೃತ್ವದಲ್ಲಿ ಪುತ್ತೂರು ಚಲೋ
ಮಂಗಳೂರು: ವಿಶ್ವ ಹಿಂದೂ ಪರಿಷತ್, ಬಜರಂಗದಳ ಮತ್ತು ಹಿಂದೂ ಜಾಗರಣ ವೇದಿಕೆ ದಕ್ಷಿಣ ಕನ್ನಡ ಜಿಲ್ಲೆ ವತಿಯಿಂದ ಆ.31ರಂದು ಪುತ್ತೂರು ಚಲೋ- ಜನಜಾಗೃತಿ ಆಂದೋಲನ ಹಮ್ಮಿಕೊಳ್ಳಲಾಗಿದೆ ಎಂದು ವಿಶ್ವ ಹಿಂದೂ ಪರಿಷತ್ ಪ್ರಾಂತ ಪ್ರಚಾರ ಪ್ರಸಾರ ಸಹ ಪ್ರಮುಖ್ ಪ್ರದೀಪ್ ಸರಿಪಲ್ಲ ತಿಳಿಸಿದ್ದಾರೆ.
ಶುಕ್ರವಾರ ಮಂಗಳೂರಿನ ಕದ್ರಿಯಲ್ಲಿರುವ ವಿಶ್ವ ಹಿಂದೂ ಪರಿಷತ್ ಕಾರ್ಯಾಲಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪುತ್ತೂರಿನಲ್ಲಿ ಇತ್ತೀಚೆಗೆ ನಡೆದ ಘಟನೆಯ ಕುರಿತು ನಿಷ್ಪಕ್ಷಪಾತ ತನಿಖೆಯ ಅವಶ್ಯಕತೆ ಇದೆ. ಪೊಲೀಸರು ರಾಜಕೀಯ ಒತ್ತಡಗಳಿಗೆ ಮಣಿಯಬಾರದು ಎಂದ ಅವರು ಸ್ವಾಭಿಮಾನಿ ಹಿಂದೂ ಸಮಾಜದ ಜಾಗೃತಿಗಾಗಿ ಈ ಜನಜಾಗೃತಿ ಆಯೋಜಿಸಲಾಗಿದೆ ಎಂದರು.
ಘಟನೆಯಲ್ಲಿ ಜೆರಾಕ್ಸ್ ಅಂಗಡಿಯ ಮಾಲಕರಾದ ಸದಾಶಿವ ಪೈ, ಅಂಜನಾ ಪೈ ಮತ್ತು ಸುದರ್ಶನ್ ಪೈ ಅವರ ಮೇಲೆ ಪೊಲೀಸರು ಕೊಲೆ ಯತ್ನ ಪ್ರಕರಣ ದಾಖಲಿಸಿರುವುದು ಖಂಡನೀಯ. ಇದರ ಹಿಂದೆ ದುರುದ್ದೇಶವಿದ್ದು, ಈ ಕೇಸನ್ನು ತಕ್ಷಣ ಹಿಂಪಡೆಯಬೇಕು.
ಅಶಾಂತಿಗೆ ಕಾರಣರಾದ ನಿಷೇಧಿತ ಪಿಎಫ್‌ಐ ಸಂಘಟನೆ ಕಾರ್ಯಕರ್ತರು ಎಂದು ಹೇಳಲಾಗುತ್ತಿರುವ ನಿಯಾಜ್ ಮತ್ತು ನೌಷಾದ್ ಅವರನ್ನು ಗೂಂಡಾ ಕಾಯ್ದೆಯಡಿ ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಬಜರಂಗದಳ ವಿಭಾಗ ಸಂಯೋಜಕ ಪುನೀತ್ ಅತ್ತಾವರ ಮಾತನಾಡಿ, ಆ.31ರಂದು ಬೆಳಗ್ಗೆ 10 ಗಂಟೆಗೆ ಪುತ್ತೂರಿನ ದರ್ಬೆ ವೃತ್ತದಿಂದ ಪ್ರತಿಭಟನಾ ಮೆರವಣಿಗೆ ಕಾರ್ಯಕ್ರಮ, ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ಗದ್ದೆಯಲ್ಲಿ ಬೃಹತ್ ಸಮಾವೇಶ ನಡೆಯಲಿದೆ. ವಿಶ್ವಹಿಂದೂ ಪರಿಷತ್ - ಬಜರಂಗದಳ, ಹಿಂಜಾವೇ ಪ್ರಾಂತ ಮಟ್ಟದ ನಾಯಕರು ಭಾಗವಹಿಸಲಿದ್ದಾರೆ. ಜಿಲ್ಲೆಯ ವಿವಿಧೆಡೆಯಿಂದ ಕಾರ್ಯಕರ್ತರು ಸ್ವಯಂ ಪ್ರೇರಿತರಾಗಿ ಪಾಲ್ಗೊಳ್ಳಲಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ಹಿಂಜಾವೇ ಪ್ರಾಂತ ಕಾರ್ಯಕಾರಿಣಿ ಸದಸ್ಯ ಕಿರಣ್ ಮೂರ್ಜೆ, ಅಮಿತ್ ಗುಂಡಳಿಕೆ ಉಪಸ್ಥಿತರಿದ್ದರು.